
ನೆಲಮಂಗಲ, ಆಗಸ್ಟ್ 13: ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ನೆಲಮಂಗಲ (Nelamangala) ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಜನಪ್ರಿಯ ಲೇಔಟ್ನಲ್ಲಿ ಸೋಮವಾರ (ಆ. 11) ರಾತ್ರಿ ವಿಜಯ್ ಎಂಬುವರನ್ನು ಕೊಲೆ ಮಾಡಲಾಗಿತ್ತು. ಕೊಲೆ ನಡೆದು 48 ಗಂಟೆಯಲ್ಲಿ ಪೊಲೀಸರು ಪ್ರಕರಣವನ್ನು ಭೇದಿಸಿದ್ದು, ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಧನಂಜಯ್, ರಮೇಶ್, ವಿವೇಕ್, ಸಾಗರ್, ಹೇಮಂತ್, ರೋಹಿತ್, ವಿಜಯ್ ಪತ್ನಿ ಆಶಾ ಬಂಧಿತ ಆರೋಪಿಗಳು.
ಕೊಲೆ ಮಾಡಿದ ಬಳಿಕ ಪರಾರಿಯಾಗಿದ್ದ ಧನುಂಜಯ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇತ್ತ ತಟಸ್ಥವಾಗಿದ್ದ ಪತ್ನಿ ಆಶಾಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಪ್ರಣಯರಾಜ ಧನಂಜಯ್ ಜೊತೆಗಿನ ಲವ್ವಿಡವ್ವಿ, ಕೈ ಮೇಲೆ ಹಚ್ಚೆ, ಫೋನ್ನಲ್ಲಿದ್ದ ಪೋಟೋಗಳು ಪತ್ತೆಯಾಗಿದ್ದವು. ಆದರೆ, ಕೊಲೆ ಬಗ್ಗೆ ತನಗೆ ಏನೂ ಗೊತ್ತಿಲ್ಲ ಅಂತ ಆಶಾ ಹೇಳಿದ್ದಳು.
ಬಳಿಕ, ಪೊಲೀಸರು ಆರೋಪಿ ಧನುಂಜಯ್ನನ್ನು ಪತ್ತೆ ಹಚ್ಚಿ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಯಲಾಗಿದೆ. “ನಾನು (ಧನಂಜಯ್) ಮತ್ತು ವಿಜಯ್ ಬಾಲ್ಯ ಸ್ನೇಹತರು. ವಿಜಯ್ ಪತ್ನಿ, ಆಶಾ ಜೊತೆಯಲ್ಲಿ ಕರೆದುಕೊಂಡು ಹೋಗು ಅಂತ ನನಗೆ ಹೇಳುತ್ತಿದ್ದಳು. ನಿನ್ನ ಜೊತೆಗೆ ಬಂದುಬಿಡುತ್ತೇನೆ ಅಂತಿದ್ಲು. ನನ್ನ ಗಂಡನನ್ನು ಏನಾದರೂ ಮಾಡಿಕೊ. ನಿನ್ನ ಜೊತೆಗೆ ಬರುತ್ತಿದ್ದೇನೆ ಅಂತಿದ್ಲು. ಅಲ್ಲದೇ, ನನ್ನ (ಧನಂಜಯ್) ತಾಯಿಗೆ, ವಿಜಯ್ ಬೆದರಿಕೆ ಹಾಕಿದ್ದನು. “ನಿನ್ನ ಮಗನನ್ನು ಬಿಡುವುದಿಲ್ಲ ಕೊಲೆ ಮಾಡುತ್ತೇನೆ” ಅಂತ ಅಂದಿದ್ದನು. ಇದೇ ಕಾರಣಕ್ಕೆ ನಾನು (ಧನಂಜಯ್) ಸ್ನೇಹಿತರನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿದೆ” ಎಂದು ಬಾಯಿ ಬಿಟ್ಟಿದ್ದಾನೆ.
ಇದನ್ನೂ ಓದಿ: ಪತಿಯ ಕೊಲೆ ಅಳಿಯನ ತಲೆಗೆ ಕಟ್ಟಿ ಪ್ರಿಯಕರನ ಜೊತೆ ಜಾಲಿಯಾಗಿರಲು ಪ್ಲಾನ್ ಮಾಡಿದ್ದ ಪತ್ನಿ
ಸದ್ಯ ಪೊಲೀಸರು ಏಳೂ ಮಂದಿ ಆರೋಪಿಗಳನ್ನ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನು, ಆರೋಪಿ ಆಶಾ ವಿಚಾರಣೆ ವೇಳೆ ಏನನ್ನೂ ಹೇಳದೆ ತಟಸ್ಥವಾಗಿದ್ದು, ಬೇರೆ ಬೇರೆ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ.
ವರದಿ: ಮಂಜುನಾಥ್ ಟಿವಿ9 ನೆಲಮಂಗಲ