Crime News: ಪೋಷಕರ ವಿರೋಧಕ್ಕೆ ಕಂಗಾಲಾಗಿದ್ದ ಜೋಡಿಗಳಿಗೆ ಕಂಕಣ ಭಾಗ್ಯ ಕೊಟ್ಟ ನೆಲಮಂಗಲ ಪೊಲೀಸರು

| Updated By: ಆಯೇಷಾ ಬಾನು

Updated on: Nov 15, 2022 | 8:44 AM

ಪ್ರೇಮಿಗಳ ಅಳಲು ಕೇಳಿ ನಡುರಾತ್ರಿಯೇ ನೆಲಮಂಗಲ ನಗರದ ಕವಾಡಿ ಮಠದ ರುದ್ರೇಶ್ವರ ದೇಗುಲದಲ್ಲಿ ಪೊಲೀಸರು ಪ್ರೇಮಿಗಳ ವಿವಾಹ ಮಾಡಿಸಿದ್ದಾರೆ.

Crime News: ಪೋಷಕರ ವಿರೋಧಕ್ಕೆ ಕಂಗಾಲಾಗಿದ್ದ ಜೋಡಿಗಳಿಗೆ ಕಂಕಣ ಭಾಗ್ಯ ಕೊಟ್ಟ ನೆಲಮಂಗಲ ಪೊಲೀಸರು
ಬಿಂದು, ಕರುಬಸಪ್ಪ
Follow us on

ನೆಲಮಂಗಲ: ಪ್ರೇಮಿಗಳ ಮದುವೆಗೆ ಪೋಷಕರು ಅಡ್ಡಿ ಪಡಿಸಿದ ಹಿನ್ನೆಲೆ ನೆಲಮಂಗಲ ನಗರದ ಪೊಲೀಸ್ ಠಾಣೆಯಲ್ಲಿ ಪ್ರೇಮಿಗಳು ಅಳಲು ತೋಡಿಕೊಂಡಿದ್ದಾರೆ. ಮದುವೆ ಮಾಡಿಸುವಂತೆ ಆರಕ್ಷಕರ ಬೆನ್ನು ಬಿದ್ದಿದ್ದ ಪ್ರೇಮಿಗಳಿಗೆ ಪೊಲೀಸರೆ ಮದುವೆ ಮಾಡಿಸಿದ್ದಾರೆ. ಪೋಷಕರ ವಿರೋಧದ ನಡುವೆ ಪೊಲೀಸರ ಸಮ್ಮುಖದಲ್ಲಿ ಪ್ರೇಮಿಗಳು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ನೆಲಮಂಗಲ ಪೊಲೀಸ್ ಠಾಣೆಗೆ ಬಂದಿದ್ದ ಜೋಡಿ ತಮ್ಮ ಪ್ರೀತಿಯನ್ನು ಪೋಷಕರು ನಿರಾಕರಿಸಿದ್ದಾರೆ. ನಮಗೆ ಮದುವೆ ಮಾಡಿ ಎಂದು ಕಣ್ಣೀರು ಹಾಕಿದ್ದಾರೆ. ಪ್ರೇಮಿಗಳ ಅಳಲು ಕೇಳಿ ನಡುರಾತ್ರಿಯೇ ನೆಲಮಂಗಲ ನಗರದ ಕವಾಡಿ ಮಠದ ರುದ್ರೇಶ್ವರ ದೇಗುಲದಲ್ಲಿ ಪೊಲೀಸರು ಪ್ರೇಮಿಗಳ ವಿವಾಹ ಮಾಡಿಸಿದ್ದಾರೆ. ಸುಮಾರು 2 ವರ್ಷಗಳಿಂದ ಪ್ರೀತಿಸುತ್ತಿದ್ದ ನೆಲಮಂಗಲ ನಗರ ನಿವಾಸಿ 19 ವರ್ಷದ ಬಿಂದು ಹಾಗೂ ಕೆ.ಆರ್.ಪುರ ನಿವಾಸಿ ಕರುಬಸಪ್ಪ (24) ಇಬ್ಬರೂ ಮೇಜರ್ ಆಗಿರುವ ಹಿನ್ನೆಲೆ ಪೊಲೀಸರು ಮದುವೆ ಮಾಡಿಸಿದ್ದಾರೆ. ಬಳಿಕ ನವದಂಪತಿಗಳು ಸಿಹಿ ಹಂಚಿ, ಆರಕ್ಷಕರ ಆಶಿರ್ವಾದ ಪಡೆದ್ರು.

ಇಬ್ಬರು ಕಳ್ಳರನ್ನು ಬಂಧಿಸಿದ ಕಲಬುರಗಿ ಪೊಲೀಸ್

ಜನರೇಟರ್ ಕಳ್ಳತನ ಮಾಡುತ್ತಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ಕಲಬುರಗಿ ಜಿಲ್ಲೆಯ ಕಮಲಾಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಸಿದ್ದಪ್ಪ ಕಮಕನೂರ್, ಬೀರಪ್ಪ ಬಂಧಿತರು. ಆರೋಪಿಗಳಿಂದ ಕಳ್ಳತನಕ್ಕೆ ಬಳಸಿದ್ದ ಗೂಡ್ಸ್ ವಾಹನ ಸೇರಿ ಐದು ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಚಾಕು ತೋರಿಸಿ ಕಾರು ದೋಚಿದ್ದ ಆರೋಪಿ ಅರೆಸ್ಟ್

ಚಾಕು ತೋರಿಸಿ ವಿದೇಶಿ ಪ್ರಜೆಯ ಕಾರನ್ನ ದೋಚಿದ್ದ ಸೈಯ್ಯದ್ ಯಾಸೀನ್ (26) ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿ ತನ್ನ ಗೆಳೆಯ ಮಹಮ್ಮದ್ ಮನ್ಸೂರ್ ಜೊತೆಗೂಡಿ ನವೆಂಬರ್ 11 ರಂದು ಸುಡಾನ್ ದೇಶದ ಪ್ರಜೆಗೆ ಚಾಕು ತೋರಿಸಿ ಕಾರನ್ನ ದೋಚಿದ್ದ. ಸುಡಾನ್ ಪ್ರಜೆ ಈ ಪ್ರಕರಣ ಸಂಬಂಧ ಬಾಣಸವಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿಗಳು ಚಾಕು ತೋರಿಸಿ ಕಾರನ್ನ ಕದ್ದೊಯ್ಯುವ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸದ್ಯ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿ ಯಾಸೀನ್ ಬಂಧಿಸಲಾಗಿದೆ. ನಾಪತ್ತೆಯಾಗಿರುವ ಮಹಮ್ಮದ್ ಮನ್ಸೂರ್ ಗಾಗಿ ಖಾಕಿ ಹುಡುಕಾಟ ನಡೆಸುತ್ತಿದೆ. ಬಂಧಿತನಿಂದ 2 ಲಕ್ಷ ಮೌಲ್ಯದ ಒಂದು ಹ್ಯುಂಡೈ ಕಾರು ಹಾಗೂ ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ.

Published On - 8:44 am, Tue, 15 November 22