ಇವನೆಂಥಾ ಕಿಲಾಡಿ ಕಳ್ಳ: ತಾನೇ ಹಣ ಖರ್ಚು ಮಾಡಿ, ಕಳ್ಳತನವಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಭೂಪ ಅಂದರ್

| Updated By: ಆಯೇಷಾ ಬಾನು

Updated on: Aug 24, 2022 | 3:25 PM

ಹಣ ಕಳುವಾಗಿದೆ ಅಂತ ದೂರು ಕೊಟ್ಟವನೇ ಕಳ್ಳ ಎಂದು ಸಾಬೀತಾಗಿದೆ. ಸಾಲ ತೀರಿಸಲು ವಾಮಾಚಾರ ಕಥೆ ಕಟ್ಟಿದ್ದ ಎಂದು ತಿಳಿದು ಬಂದಿದೆ. ದೂರು ನೀಡಿದ ಆರೋಪಿಯನ್ನು ಬನ್ನೇರುಘಟ್ಟ ಪೊಲೀಸರು ಬಂಧಿಸಿದ್ದಾರೆ.

ಇವನೆಂಥಾ ಕಿಲಾಡಿ ಕಳ್ಳ: ತಾನೇ ಹಣ ಖರ್ಚು ಮಾಡಿ, ಕಳ್ಳತನವಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಭೂಪ ಅಂದರ್
ಶಂಕರಪ್ಪ
Follow us on

ಆನೇಕಲ್: 24 ಲಕ್ಷ ಕಳ್ಳತನ ಆಗಿದೆ ಅಂತ ದೂರು ಕೊಟ್ಟಿದ್ದವನೇ ಕಳ್ಳನಾಗಿದ್ದನ್ನು ಕಂಡ ಪೊಲೀಸರು ಶಾಕ್ ಆದ ಘಟನೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟದಲ್ಲಿ ನಡೆದಿದೆ. ಶಂಕರಪ್ಪ ವ್ಯಕ್ತಿಯೊಬ್ಬ ಪೊಲೀಸರ ಬಳಿ ಹೋಗಿ ಮಾಟಾ ಮಂತ್ರ ಮಾಡಿ 24 ಲಕ್ಷ ಹಣ ದೋಚಿದ್ದಾರೆ ಸರ್ ಅಂತ ಅಳಲು ತೋಡಿಕೊಂಡಿದ್ದ. ಈ ವಿಷಯ ಗೊತ್ತಾದ್ರೆ, ಮನೆಯಲ್ಲಿ ಸಾವಾಗುತ್ತೆ ಅಂತ ಮಾಟ ಮಂತ್ರ ಮಾಡಿರೋ ಪತ್ರ ತೋರಿಸಿದ್ದ. ಇದನ್ನು ನಂಬಿದ ಪೊಲೀಸರು 24 ಲಕ್ಷ ಕಳ್ಳತನ ಮಾಡಿ, ಮಾಟ‌ ಮಂತ್ರ ಮಾಡಿದ್ದ ಆರೋಪಿಗಾಗಿ ಹುಡುಕಾಟ ಶುರು ಮಾಡಿದ್ದರು. ಆದ್ರೆ ಕಳ್ಳನ‌ ಹುಡುಕಾಟ‌ ನಡೆಸಿದ್ದ ಪೊಲೀಸರೇ ಶಾಕ್ ಆಗಿದ್ದಾರೆ.

ಹಣ ಕಳುವಾಗಿದೆ ಅಂತ ದೂರು ಕೊಟ್ಟವನೇ ಕಳ್ಳ ಎಂದು ಸಾಬೀತಾಗಿದೆ. ಸಾಲ ತೀರಿಸಲು ವಾಮಾಚಾರ ಕಥೆ ಕಟ್ಟಿದ್ದ ಎಂದು ತಿಳಿದು ಬಂದಿದೆ. ದೂರು ನೀಡಿದ ಆರೋಪಿಯನ್ನು ಬನ್ನೇರುಘಟ್ಟ ಪೊಲೀಸರು ಬಂಧಿಸಿದ್ದಾರೆ. ಬನ್ನೇರುಘಟ್ಟ ನಿವಾಸಿ ಆರೋಪಿ ಶಂಕರಪ್ಪ ಚೀಟಿ ನಡೆಸುತ್ತಿದ್ದ. ವ್ಯವಹಾರದಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದ. ಸಾಲಗಾರರ ಕಾಟ ತಡೆಯಲಾಗದೆ ಸಂಚು ರೂಪಿಸಿದ್ದ ಶಂಕರಪ್ಪ, ಸೈಟ್ ಖರೀದಿ ಮಾಡಬೇಕು ಎಂದು ಸ್ನೇಹಿತನ ಬಳಿ ಹಣ ಕೇಳಿದ್ದ. ಗುರುಪ್ರಸಾದ್ ಎಂಬ ಸ್ನೇಹಿತನ ಬಳಿ 24 ಲಕ್ಷ ಹಣ ಪಡೆದಿದ್ದ. ಇತ್ತಿಚೆಗೆ ಸಾಲಗಾರರ ಕಾಟ‌ ಹೆಚ್ಚಾಗಿತ್ತು. ಮನೆಯಲ್ಲಿದ್ದ ಹಣವನ್ನು ತೆಗೆದುಕೊಂಡು ಸಾಲಗಾರರಿಗೆ ನೀಡಿದ್ದ. ಬಳಿಕ ಹಣ ಕಳ್ಳತನ ಆಯ್ತು ಎಂದು ನಾಟಕ ಮಾಡಿದ್ದಾನೆ. ಬನ್ನೇರುಘಟ್ಟ ಪೊಲೀಸರಿಗೆ ಹಣ ಕಳುವಾಗಿದೆ ಅಂತ ದೂರು ನೀಡಿ ಹೈ ಡ್ರಾಮವಾಡಿದ್ದಾನೆ.

ಮನೆಯ ಮುಂದೆ ವಾಮಾಚಾರ ಮಾಡಿ ಪತ್ರ ಒಂದನ್ನು ಬರೆದು ಇಟ್ಟು ಪತ್ರದಲ್ಲಿ ಹಣ ಕಳೆದು ಹೋಗಿರುವ ಬಗ್ಗೆ ಯಾರಿಗಾದರೂ ತಿಳಿಸಿದರೆ ಮನೆಯಲ್ಲಿದ್ದವರು ಸತ್ತು ಹೋಗ್ತೀರಾ ಎಂದು ಬರೆದಿದ್ದಾನೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರಿಗೆ ಕಿಲಾಡಿ ಕಳ್ಳನ ಆಟ ಬಯಲಾಗಿದೆ. ಮನೆಯ ಬಾಗಿಲು ಮುರಿಯದೆ ಬೀಗ ಒಡೆಯದೇ ಕಳ್ಳತನ ಮಾಡಲಾಗಿತ್ತು. ಮನೆ ಮುಂಬಾಗಿಲು, ಕಬಾರ್ಡ್‌ ಎಲ್ಲವೂ ಸರಿಯಾಗಿತ್ತು. ಬೀಗ ತೆಗೆದು ಸಲೀಸಾಗಿ ಹಣ ತೆಗೆದಿರುವುದನ್ನು ಅರಿತ ಪೊಲೀಸರು ಶಂಕ್ರಪ್ಪನ ಮೇಲೆಯೇ ಅನುಮಾನ ಗೊಂಡು ತನಿಖೆ ನಡೆಸಿದಾಗ ಶಂಕರಪ್ಪ ಸತ್ಯ ಬಾಯ್ಬಿಟ್ಟಿದ್ದಾನೆ.

ನೆಲಮಂಗಲ: ಅನಾರೋಗ್ಯದ ಹಿನ್ನೆಲೆ ಅಸ್ಪತ್ರೆಗೆ ಅಲೆದಾಡಿ ಮನನೊಂದ ವ್ಯಕ್ತಿ ನೇಣಿಗೆ ಶರಣಾದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಕಿತ್ತನಹಳ್ಳಿಯಲ್ಲಿ ನಡೆದಿದೆ. ರಾಜಪ್ಪ(35)ಮೃತ ದುರ್ದೈವಿ. ಮನೆಯಲ್ಲಿ ಯಾರು ಇಲ್ಲದ ವೇಳೆ ಫ್ಯಾನ್ ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹೈವೇ ರೋಡ್ ನಲ್ಲಿ ಬಿದ್ದಿದ್ದ ವ್ಯಕ್ತಿ ರಕ್ಷಣೆ

ಇನ್ನು ಬೆಂಗಳೂರು ಉತ್ತರ ತಾಲೂಕಿನ ಮಾದವಾರ ಬಳಿ ಪತ್ನಿ ಗಲಾಟೆ ಮಾಡ್ತಾಳೆ ಅಂತ ಎಣ್ಣಿ ಹೊಡೆದು ಹೈವೇ ರೋಡ್ ನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ. ಮಂಡ್ಯ ಜಿಲ್ಲೆಯ ನಾಗಮಂಗಲದ ಮಧು ಎನ್ನುವವರನ್ನು ಸಂಚಾರಿ ಪೊಲೀಸರು ರಕ್ಷಣೆ ಮಾಡಿದ್ದಾರೆ. ಹೈವೇ ನಲ್ಲಿ ವೇಗವಾಗಿ ಬರುವ ವಾಹನಗಳಿಗೆ ಸಿಕ್ಕಿ ಅವಘಡ ಸಂಭವಿಸುವ ಮುಂಚೆಯೇ ಪೊಲೀಸರು ಮಧುನನ್ನು ಕಾಪಾಡಿದ್ದಾರೆ. ನೆಲಮಂಗಲ ಸಂಚಾರಿ ಪೊಲೀಸರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Published On - 3:25 pm, Wed, 24 August 22