ಬಯಲು ಸೀಮೆಯಲ್ಲಿ ಕಾಶ್ಮೀರ ಕೇಸರಿ ಬೆಳೆದು ಸೈ ಎನಿಸಿಕೊಂಡ ಸಾಫ್ಟ್‌ವೇರ್ ಇಂಜಿನಿಯರ್

ದೊಡ್ಡಬಳ್ಳಾಪುರದ ಸಾಫ್ಟ್‌ವೇರ್ ಇಂಜಿನಿಯರ್ ಮನೆಯ ಕೋಣೆಯಲ್ಲೇ ಕೇಸರಿ ಬೆಳೆದು ವಿಶೇಷ ಸಾಧನೆ ಮಾಡಿದ್ದಾರೆ. ಎಸಿಯ ಸಹಾಯದಿಂದ ಕೇಸರಿ ಬೆಳೆಗೆ ಬೇಕಾದ ಹವಾಮಾನ ಸೃಷ್ಟಿಸಿ, 45 ಕೆ.ಜಿ. ಗಡ್ಡೆಗಳನ್ನು ಬಳಸಿ ಯಶಸ್ವಿಯಾಗಿ ಕೃಷಿ ಮಾಡಿದ್ದಾರೆ. ಈ ನವೀನ ಕೃಷಿ ವಿಧಾನದಿಂದ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದು, ಇತರರಿಗೆ ಮಾದರಿಯಾಗಿದ್ದಾರೆ.

ಬಯಲು ಸೀಮೆಯಲ್ಲಿ ಕಾಶ್ಮೀರ ಕೇಸರಿ ಬೆಳೆದು ಸೈ ಎನಿಸಿಕೊಂಡ ಸಾಫ್ಟ್‌ವೇರ್ ಇಂಜಿನಿಯರ್
ಕೇಸರಿ ಬೆಳೆ ಬೆಳೆದ ಯುವಕ
Updated By: ಪ್ರಸನ್ನ ಹೆಗಡೆ

Updated on: Dec 01, 2025 | 7:32 PM

ದೇವನಹಳ್ಳಿ, ಡಿಸೆಂಬರ್​​ 01: ಬಯಲು ಸೀಮೆ ಪ್ರದೇಶದಲ್ಲಿ ಕಾಶ್ಮೀರ ಕೇಸರಿ ಬೆಳೆದು ಸಾಫ್ಟ್​​ವೇರ್​​ ಇಂಜಿನಿಯರ್​​ ವಿಶೇಷ ಸಾಧನೆ ಮಾಡಿದ್ದಾರೆ. ಕೃಷಿಕನಾಗಬೇಕು ಎಂದುಕೊಂಡಿದ್ದರೂ ಮನೆಯಲ್ಲಿ ಜಮೀನು ಇರಲಿಲ್ಲ. ಆದರೆ ಇರುವ ಮನೆಯ ಕೋಣೆಯಲ್ಲೇ ಎಸಿಯ ಸಹಾಯದಿಂದ ಕೇಸರಿ ಬೆಳೆಗೆ ಬೇಕಾದ ಹವಾಮಾನ ಸೃಷ್ಟಿಸಿ ಬೆಳೆ ಬೆಳೆದು, ಸೈ ಎನಿಸಿಕೊಂಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಮಾರುತಿ ನಗರದ ಯುವಕ ಪವನ್ ಓದಿದ್ದು ಸಾಫ್ಟ್​​ವೇರ್​​ ಇಂಜಿನಿಯರಿಂಗ್​​. ಆದ್ರೆ ಅವರಿಗಿದ್ದ ಒಲವು ಕೃಷಿ ಕ್ಷೇತ್ರ. ಹೀಗಾಗಿ ಇದರಲ್ಲೇ ತಾನೇನಾದರೂ ಸಾಧನೆ ಮಾಡಬೇಕೆಂಬ ಮಹದಾಸೆ ಹೊಂದಿದ್ದ ಪವನ್​​​ ಅವರಿಗೆ ತನ್ನ ಸ್ನೇಹಿತರು ಕಾಶ್ನೀರದಲ್ಲಿ ಬೆಳೆಯುತ್ತಿದ್ದ ಕೇಸರಿ ಕಣ್ಣಿಗೆ ಬಿದ್ದಿದೆ. ಈ ಬಗ್ಗೆ ಆಸಕ್ತಿ ಹುಟ್ಟಿದ್ದೇ ತಡ ಬೆಳೆ ಹೇಗೆ ಬೆಳೆಯೋದು ಎಂಬ ಮಾಹಿತಿಯನ್ನು ಅವರಿಂದ ಪಡೆದುಕೊಂಡಿದ್ದಾರೆ. ಜೊತೆಗೆ ಅವರ ಸೂಚನೆಯಂತೆ ಕಾಶ್ನೀರದಿಂದ ಕೇಸರಿ ಗಡ್ಡೆಗಳನ್ನ ಮನೆಗೆ ತಂದವರು, ಮನೆಯ ಕೋಣೆಯನ್ನೇ ಕೇಸರಿ ಬೆಳೆಗೆ ಅಗತ್ಯವಿರೋ ಭೂಮಿಯಾಗಿ ಮಾರ್ಪಾಡು ಮಾಡಿದ್ದಾರೆ. ಕೈಗಾರಿಕೆಗಳಲ್ಲಿ‌ ಬಳಸುವ ದೊಡ್ಡ ದೊಡ್ಡ ಎಸಿಗಳ ಮೂಲಕ ಮನೆಯ ಕೋಣೆಯ ತಾಪಮಾನವನ್ನು 16 ಡಿಗ್ರಿ ಸೆಲ್ಸಿಯಸ್​​​ಗೆ ತಂದು ಕೇಸರಿ ಬೆಳೆಯುವ ಮೂಲಕ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಕೇಸರಿ ಯಾಕೆ ತುಂಬಾ ದುಬಾರಿ ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ, ಅದರ ಕೃಷಿ ಪ್ರಕ್ರಿಯೆ ಬಗ್ಗೆ ತಿಳಿಯಿರಿ

ಕೃಷಿ ಮಾಡಬೇಕು ಎಂದು ಹೊರಟ ಪವನ್ ಅವರಿಗೆ ಜಮೀನಿಲ್ಲದ ಕಾರಣ ಮನೆಯ‌ ಕೋಣೆಯಲ್ಲೆ ಉಪಾಯ ಮಾಡಿ ಕೇಸರಿ ಬೆಳೆದಿದ್ದಾರೆ. ಕಬ್ಬಿಣದ ರಾಕ್​ಗಳ ಮೇಲೆ ಸುಮಾರು 45 ಕೆ.ಜಿ. ಕೇಸರಿ ಗಡ್ಡೆಗಳನ್ನ ಇಟ್ಟು ಬೆಳೆ ಬೆಳೆಯಲಾಗಿದೆ. ಜೊತೆಗೆ ಐದರಿಂದ ಏಳು ವರ್ಷಗಳವರೆಗೆ ಈ ಕೇಸರಿ ಗಡ್ಡೆಗಳು ಹೂಗಳನ್ನು ಬಿಡಲಿರುವ ಕಾರಣ ಇದರಿಂದ ಲಾಭದ ನಿರೀಕ್ಷೆಯಲ್ಲಿದ್ದಾರೆ. ಕೇಸರಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ದರವಿದ್ದು, ಕಾಶ್ಮೀರ ಕೇಸರಿ ಪ್ರತಿ ಗ್ರಾಂಗೆ 900 ರೂ.ಗಳಿಂದ 1,500 ರೂ. ವರೆಗೆ ಮಾರಾಟವಾಗುತ್ತೆ. ಅಂಗಡಿ, ಬೇಕರಿ ಮತ್ತು ಅಡುಗೆಯವರು ಹೆಚ್ಚಾಗಿ ಇದನ್ನು ಖರೀದಿಸುತ್ತಿದ್ದಾರೆ ಎನ್ನುವುದು ಪವನ್​​  ಮಾತು.

ಇನ್ನು ಸದ್ಯ 45 ಕೆ.ಜಿ. ಗಡ್ಡೆಗಳ ಮೂಲಕ ಮೊದಲ ಬಾರಿಗೆ ಸುಮಾರು 50 ಗ್ರಾಂನಷ್ಟು ಕೇಸರಿ ಬೆಳೆದು, ಸುಮಾರು 50 ಸಾವಿರ ರೂ. ಆದಾಯದ ನೀರೀಕ್ಷೆಯನ್ನ ಪವನ್​​ ಇಟ್ಟುಕೊಂಡಿದ್ದಾರೆ. ಸಾಕಷ್ಟು ಜಮೀನಿದ್ದರೂ ಏನೂ ಮಾಡದೆ ಖಾಲಿ ಕೂರುವ ಮಂದಿಯ ನಡುವೆ ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕೆಂದು, ಮನೆಯ ಕೋಣೆಯಲ್ಲೇ ಕೇಸರಿ ಬೆಳೆದ ಪವನ್​​ರ ಕಾರ್ಯ ಇತರರಿಗೆ ಮಾದರಿಯಂತೂ ಹೌದು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:27 pm, Mon, 1 December 25