ದೇವನಹಳ್ಳಿ: ದೇಶದಲ್ಲಿ ಚತುರ್ವರ್ಣ ವ್ಯವಸ್ಥೆ ಇನ್ನೂ ಜೀವಂತವಾಗಿದೆ. ದೇಶದಲ್ಲಿ ಶೇ. 20 ರಷ್ಟು ಜನ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಜಾತಿ ಸಮ್ಮೇಳನ ಮಾಡಬಾರದೆಂದು ವಿರೋಧಿಸುತ್ತಾರೆ. ಆದರೆ, ಜಾತಿ ಸಮ್ಮೇಳನ ತಪ್ಪಲ್ಲವೆಂದು ಲೋಹಿಯಾ ಹೇಳಿದ್ದಾರೆ. ಹಿಂದುಳಿದ ವರ್ಗಗಳು ಖಂಡಿತವಾಗಿ ಸಂಘಟಿತರಾಗಬೇಕು. ಶಿಕ್ಷಣ ಪಡೆಯಬೇಕು, ಸಂಘಟನೆ, ಹೋರಾಟ ಮಾಡಬೇಕು. ಇಲ್ಲದಿದ್ದರೆ ನಿಮ್ಮನ್ನು ಯಾರೂ ಕೂಡ ಕೇರ್ ಮಾಡಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ದೇವನಹಳ್ಳಿಯಲ್ಲಿ ನಡೆಯುತ್ತಿರುವ ಗಾಣಿಗ ಸಮುದಾಯದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದ್ದಾರೆ.
ಕೆಲವರು ಸಂವಿಧಾನ ಬದಲಾವಣೆ ಮಾಡ್ತೇವೆ ಎನ್ನುತ್ತಿದ್ದಾರೆ. ಇವರು ಶೋಷಿತರು, ಅವಕಾಶ ವಂಚಿತರ ವಿರೋಧಿಗಳು. ಮೀಸಲಾತಿ ಬಗ್ಗೆ ಬಹಳಷ್ಟು ಜನರು ಟೀಕೆ ಮಾಡುತ್ತಿದ್ದರು. ಆದ್ರೆ ಈಗ ಯಾರು ಕೂಡ ಮೀಸಲಾತಿ ಬಗ್ಗೆ ಮಾತಾಡುತ್ತಿಲ್ಲ. ಮೋದಿ ಮೇಲ್ವರ್ಗಕ್ಕೆ ಶೇ.10ರಷ್ಟು ಮೀಸಲಾತಿ ಕೊಟ್ಟಿದ್ದಾರೆ. ಈಗ ಯಾರೂ ಕೂಡ ಮೀಸಲಾತಿಯಿಂದ ಹೊರಗುಳಿದಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್ ಮೀಸಲಾತಿ ತಂದಿದ್ದರು. ಅವರು ರಾಜ್ಯದಲ್ಲಿ ಮೊದಲು ಮೀಸಲಾತಿಯನ್ನು ಜಾರಿಗೆ ತಂದರು. ಅರಸು ಕಾಲದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಟ್ರು. ರಾಜೀವ್ ಗಾಂಧಿ ಸಹ ಮೀಸಲಾತಿಯನ್ನು ಕೊಟ್ಟಿದ್ದರು ಎಂದು ದೇವನಹಳ್ಳಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಹಿಂದುಳಿದ ಜಾತಿ ವಿದ್ಯಾರ್ಥಿಗಳಿಗಾಗಿ ವಿದ್ಯಾಸಿರಿ ಯೋಜನೆ ಮಾಡಲಾಗಿತ್ತು. ನನ್ನ ಅವಧಿಯಲ್ಲೇ ಈ ಯೋಜನೆಯನ್ನು ಜಾರಿ ಮಾಡಿದ್ದೆ. ಆದರೆ ಈಗ ವಿದ್ಯಾಸಿರಿ ಯೋಜನೆಯನ್ನು ತೆಗೆದುಹಾಕಿದ್ದಾರೆ ಎಂದು ಬಿ.ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಹಿಂದುಳಿದ ವರ್ಗದವರ ಯೋಜನೆ ಎಂದು ತೆಗೆದುಹಾಕಿದ್ದಾರೆ. ಬಿಜೆಪಿ ಸರ್ಕಾರದಿಂದ ಹಿಂದುಳಿದ ವರ್ಗಕ್ಕೆ ಅನ್ಯಾಯವಾಗ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕುಮಾರಸ್ವಾಮಿ, ಈಶ್ವರಪ್ಪಗೆ ಡಿ.ಕೆ. ಶಿವಕುಮಾರ್ ತಿರುಗೇಟು
ರಾಜಕಾರಣಕ್ಕಾಗಿ ಕುಮಾರಸ್ವಾಮಿ ಏನೇನೋ ಮಾತಾಡ್ತಿದ್ದಾರೆ. ಕಾಂಗ್ರೆಸ್ಗೆ ನಡುಕ ಹುಟ್ಟಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ದೇವನಹಳ್ಳಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ನಡುಕ ಹುಟ್ಟುತ್ತೋ ಇಲ್ವೋ ಎಂದು ಅವರಿಗೆ ಗೊತ್ತಿದೆ. ನಾನು ನಡುಗುತ್ತೇನೋ, ಹೇಗಿರ್ತೇನೆಂದು ಹೆಚ್ಡಿಕೆಗೆ ಗೊತ್ತು. ಹುಚ್ಚಾಸ್ಪತ್ರೆಗೆ ಸೇರಿಸಬೇಕೆಂದು ಕೆ.ಎಸ್. ಈಶ್ವರಪ್ಪ ಹೇಳಿಕೆ ವಿಚಾರವಾಗಿಯೂ ಅವರು ಮಾತನಾಡಿದ್ದಾರೆ. ಈಶ್ವರಪ್ಪ ಬೆಡ್ ರೆಡಿಮಾಡಿಕೊಟ್ಟರೆ ನಾನು ಹೋಗಲು ಸಿದ್ಧ ಎಂದು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ನ 20 ಶಾಸಕರು ಸಂಪರ್ಕದಲ್ಲಿದ್ದಾರೆಂದು ಹೇಳುತ್ತಾರೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಹೇಳುತ್ತಾರೆ. ಮತ್ಯಾಕೆ ಬಿಜೆಪಿಯವರಿಗೆ ಭಯ ಶುರುವಾಗಿದೆಯೋ ಗೊತ್ತಿಲ್ಲ. ಯಾವ ಶಾಸಕರು ಸಂಪರ್ಕದಲ್ಲಿದ್ದಾರೆಂದು ನಾವಂತೂ ಹೇಳಿಲ್ಲ ಎಂದು ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ನಿಂದ ಗಾಣಿಗ ಸಮುದಾಯದ ಕಾರ್ಯಾಗಾರ ನಡೆಸಲಾಗಿದೆ. ಕಾರ್ಯಾಗಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ.
ಇದನ್ನೂ ಓದಿ: ಉಪಚುನಾವಣೆಯಲ್ಲಿ ಜೆಡಿಎಸ್ನಿಂದ ಮುಸ್ಲಿಂ ಅಭ್ಯರ್ಥಿ ವಿಚಾರ; ಸಿದ್ದರಾಮಯ್ಯ, ಕುಮಾರಸ್ವಾಮಿ ವಾಕ್ಸಮರ
ಇದನ್ನೂ ಓದಿ: ಜೆಡಿಎಸ್ನದ್ದು ಮಿಷನ್ 123, ಬಿಜೆಪಿಯವರದ್ದು ಮಿಷನ್ 150; ನಮ್ಮದು ಮಿಷನ್ 224: ಡಿಕೆ ಶಿವಕುಮಾರ್
Published On - 3:24 pm, Sun, 3 October 21