40 ದಿನದ ಹಿಂದಷ್ಟೆ ತಂದೆಯಾಗಿದ್ದ ಆತ, ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ: ಸಂಜೆ ವಾಕ್ ಮಾಡುವಾಗ ಹಾವು ಕಚ್ಚಿ ಸಾವು
Snake Bite: ಗ್ರಾಮೀಣ ಭಾಗದ ಆಸ್ಪತ್ರೆಗಳಲ್ಲಿ ಹಾವು ಕಡಿತಕ್ಕೆ ಚುಚ್ಚುಮದ್ದು ಪೂರೈಕೆ ಮಾಡಬೇಕಿರುವುದು ಸರ್ಕಾರದ ಕರ್ತವ್ಯವಾಗಿದೆ. ಇನ್ನಾದರೂ ಆರೋಗ್ಯ ಇಲಾಖೆಯವರು ಎಚ್ಚೆತ್ತು ಹಾವು ಕಡಿತಕ್ಕೆ ಗ್ರಾಮೀಣ ಭಾಗದಲ್ಲಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸುತ್ತಾ? ಕಾದು ನೋಡಬೇಕಿದೆ.
ನೆಲಮಂಗಲ: ಆತ ಉತ್ತಮ ಆರೋಗ್ಯಕ್ಕಾಗಿ ಲೇಔಟ್ ಒಂದರಲ್ಲಿ ಸಂಜೆ ವೇಳೆ ವಾಕ್ ಮಾಡ್ತಿದ್ದ. ಆದ್ರೆ ನಾಗರ ಹಾವೊಂದು ಆತನಿಗೆ ಕಚ್ಚಿ ಬಿಡ್ತು (Snake Bite). ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸುವ ವೇಳೆ ಸೂಕ್ತ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾನೆ (death). ಮೇಲಿನ ಫೋಟೋದಲ್ಲಿರುವ ವ್ಯಕ್ತಿ 38 ವರ್ಷದ ಸೈಯದ್ ಸಮೀವುಲ್ಲಾ, ನೆಲಮಂಗಲ (nelamangala) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೋಲೂರು (solur) ಗ್ರಾಮದ ನಿವಾಸಿ. ನಿನ್ನೆ ರಾತ್ರಿ ವೇಳೆ ವಾಕ್ ಮಾಡುತ್ತಿದ್ದ ಈತ ಹಾವು ಕಡಿತಕ್ಕೊಳಗಾಗಿ ದಾರುಣ ಸಾವನ್ನಪಿದ್ದಾನೆ. 40 ದಿನದ ಹಿಂದಷ್ಟೆ ಮಗುವಿಗೆ ತಂದೆಯಾಗಿದ್ದ ಈತ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದು, ತನ್ನ ಕುಟುಂಬವನ್ನ ತೊರೆದು ಇಹಲೋಕ ತ್ಯಜಿಸಿ, ಪರಲೋಕ ವಾಸಿಯಾಗಿದ್ದಾನೆ. ಇನ್ನು ಸರಿಯಾದ ಸಮಯಕ್ಕೆ 1೦8 ಆಂಬುಲೆನ್ಸ್ ಸಿಗದಿದ್ದ ಕಾರಣ ಸಾವನ್ನಪ್ಪಿದ್ದಾರೆ ಎಂದು ಮೃತನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು ಸೂಕ್ತ ಸಮಯಕ್ಕೆ ಆಂಬುಲೆನ್ಸ್ ಅಲಭ್ಯತೆ ಒಂದು ಕಾರಣ ಆದ್ರೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗದಿರುವುದು ಮತ್ತೊಂದು ಕಾರಣ. ಮೃತನಿಗೆ ಹಾವು ಕಚ್ಚಿದ ತಕ್ಷಣ ಸೋಲೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆ ವೇಳೆ ಆಸ್ಪತ್ರೆಯಲ್ಲಿ ವೈದ್ಯರು ಇರಲಿಲ್ಲ ಎಂದು ಆರೋಪಿಸಲಾಗಿದೆ. ಅಷ್ಟೆ ಅಲ್ಲ ಹಾವು ಕಚ್ಚಿದಾಗ ಚಿಕಿತ್ಸೆ ನೀಡುವ ಚುಚ್ಚುಮದ್ದು ಇಲ್ಲದ ಕಾರಣ ಬೇರೆ ಆಸ್ಪತ್ರೆಗೆ ವರ್ಗಾವಣೆ ಮಾಡಲು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರವಾಹ ಬಂದಾಗ ಕರ್ನಾಟಕದತ್ತ ತಿರುಗಿಯೂ ನೋಡದ ಮೋದಿ ಈಗ ರಾಜ್ಯದ ಪ್ರವಾಸಿ; ಕಾಂಗ್ರೆಸ್ ವ್ಯಂಗ್ಯ
ಈ ವೇಳೆ ಆಂಬುಲೆನ್ಸ್‌ಗೆ ಕರೆ ಮಾಡಿದರೂ ಪ್ರಯೋಜನವಾಗದ ಹಿನ್ನೆಲೆ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಸೋಲೂರು ಆಸ್ಪತ್ರೆಯಲ್ಲಿ ಹಾವು ಕಚ್ಚಿದ್ದಕ್ಕೆ ಚುಚ್ಚು ಮದ್ದು ಇದ್ದಿದ್ದರೆ ಈ ಸಾವು ಆಗುತ್ತಿರಲಿಲ್ಲ ಎಂದು ಸರ್ಕಾರದ ವಿರುದ್ದ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಗ್ರಾಮೀಣ ಭಾಗದ ಆಸ್ಪತ್ರೆಗಳಲ್ಲಿ ಹಾವು ಕಡಿತಕ್ಕೆ ಚುಚ್ಚುಮದ್ದು ಪೂರೈಕೆ ಮಾಡಬೇಕಿರುವುದು ಸರ್ಕಾರದ ಕರ್ತವ್ಯವಾಗಿದೆ. ಇನ್ನಾದರೂ ಆರೋಗ್ಯ ಇಲಾಖೆಯವರು ಎಚ್ಚೆತ್ತು ಹಾವು ಕಡಿತಕ್ಕೆ ಗ್ರಾಮೀಣ ಭಾಗದಲ್ಲಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸುತ್ತಾ? ಕಾದು ನೋಡಬೇಕಿದೆ.
ವರದಿ: ವಿನಾಯಕ್ ಗುರವ್, ಟಿವಿ9, ನೆಲಮಂಗಲ
Published On - 4:20 pm, Mon, 27 February 23