ನೆಲಮಂಗಲ, ಜ.4: ಎದೆ ಭಾಗಕ್ಕೆ ಗುಂಡು ಹಾರಿಸಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಬೆಂಗಳೂರು (Bengaluru) ಉತ್ತರ ತಾಲೂಕಿನ ಭವಾನಿನಗರದಲ್ಲಿ ನಡೆದಿದೆ. ವಿಶು ಉತ್ತಪ್ಪ (19) ಆತ್ಮಹತ್ಯೆ ಮಾಡಿಕೊಂಡ ಬಿಇ ಪ್ರಥಮ ವರ್ಷದ ವಿದ್ಯಾರ್ಥಿ. ತಂದೆಯ ಗನ್ನಿಂದ ಫೈರ್ ಮಾಡಿ ವಿಶು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೊಡಗು ಮೂಲದ ತಮ್ಮಯ್ಯ ಎಂಬವರು ನೈಸ್ ಸಂಸ್ಥೆಯಲ್ಲಿ ಭದ್ರತಾ ಸಿಬ್ಬಂದಿ ಆಗಿದ್ದು, ಕಳೆದ 15 ವರ್ಷದಿಂದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಭವಾನಿನಗರದಲ್ಲಿ ಕುಟುಂಬ ಸಹಿತ ವಾಸವಿದ್ದರು.
ಇದನ್ನೂ ಓದಿ: ಚಿಕ್ಕಮಗಳೂರು: ಬಸ್ ಚಾಲಕ, ವಿದ್ಯಾರ್ಥಿನಿ ಆತ್ಮಹತ್ಯೆ; ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲು
ತಂದೆ ರೇಷನ್ ತರಲು ಹೋದಾಗ ವಿಶು ಗನ್ನಿಂದ ಫೈಯರ್ ಮಾಡಿಕೊಂಡು ತಂದೆಗೆ ಕರೆ ಮಾಡಿದ್ದಾನೆ. ನಾನು ಇನ್ನು ಮುಂದೆ ತಪ್ಪು ಮಾಡುವುದಿಲ್ಲ ಎಂದು ಹೇಳಿದ್ದಾನೆ. ಗಾಬರಿಗೊಂಡ ತಂದೆ ಮನೆಗೆ ದೌಡಾಯಿಸಿ ಬಂದು ನೋಡಿದಾಗ ವಿಶು ರಕ್ತದ ಮಡುವಿನಲ್ಲಿ ಕುಸಿದು ಬಿದ್ದಿದ್ದ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ವಿಶು ಉತ್ತಮ ಮೃತಪಟ್ಟಿದ್ದಾನೆ.
ಆತ್ಮಹತ್ಯೆಗೆ ಬಳಕೆ ಮಾಡಿದ ಡಬಲ್ ಬ್ಯಾರಲ್ ಗನ್ ಅನ್ನು ಮಾದನಾಯಕನಹಳ್ಳಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೀಣ್ಯಾ ಪೊಲೀಸ್ ಠಾಣೆ ವ್ಯಾಪ್ತಿಗೆ ಮನೆ ಸೇರುವುದರಿಂದ ಪ್ರಕರಣವನ್ನು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಿಂದ ಪೀಣ್ಯಾ ಪೊಲೀಸ್ ಠಾಣೆಗೆ ಕೇಸ್ ವರ್ಗಾವಣೆ ಮಾಡಲು ಮಾದನಾಯಕನಹಳ್ಳಿ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.
ಕಾರಣ ಯಾವುದೇ ಇರಲಿ, ಆತ್ಮಹತ್ಯೆಯ ನಿರ್ಧಾರ ಬೇಡ. ಆತ್ಮಹತ್ಯೆಯ ಭಾವನೆಗಳು ಮನಸ್ಸಿನಲ್ಲಿ ಸುಳಿಯುತ್ತಿದ್ದರೆ ನಿಮ್ಮ ಆಪ್ತರೊಂದಿಗೆ ಮಾತನಾಡಿ. ಸಾಧ್ಯವಾಗದಿದ್ದರೆ ಆತ್ಮಹತ್ಯೆ ಸಹಾಯವಾಣಿಗೆ ಕರೆ ಮಾಡಿ. ಸಹಾಯವಾಣಿ ಸಂಖ್ಯೆ – 9152987821, ಆರೋಗ್ಯ ವಾಣಿ: 104, ಸಹಾಯ್ ಸಹಾಯವಾಣಿ: 080-25497777
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:53 am, Thu, 4 January 24