
ಬೆಂಗಳೂರು ಗ್ರಾಮಾಂತರ, ಜ.04: ಸಿನಿಮಾ ಸ್ಟೈಲ್ನಲ್ಲಿ ಕೋಟಿ ರೂಪಾಯಿ ಬೆಲೆ ಬಾಳುವ ಬ್ರಾಂಡೆಡ್ ಶೂ ಮತ್ತು ಬಟ್ಟೆಗಳನ್ನು ಕಳ್ಳತನ ಮಾಡುತ್ತಿದ್ದ ಖದೀಮರನ್ನು ಆನೇಕಲ್ ಉಪವಿಭಾಗದ ಅತ್ತಿಬೆಲೆ ಪೊಲೀಸರು(Attibele Police Station) ಕಾರ್ಯಾಚರಣೆ ನಡೆಸಿ ಮೂವರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಅಸ್ಸಾಂ ಮೂಲದ ಸುಭಾನ್ ಪಾಷಾ(30), ಮನ್ಸರ್ ಅಲಿ(26) ಹಾಗೂ ಶಹಿದ್ದುಲ್ ರೆಹಮಾನ್(26) ಬಂಧಿತರು. ಉಳಿದ ನಾಲ್ಕು ಮಂದಿ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಮೊದಲು ಪ್ರತಿಷ್ಠಿತ ಕಂಪನಿಗಳ ಗೋದಾಮುಗಳಲ್ಲಿ ಕೆಲಸಕ್ಕೆ ಸೇರುತ್ತಿದ್ದ ಅಸಾಮಿಗಳು, ವಾರ ಅಥವಾ ಹದಿನೈದು ದಿನ ಕೆಲಸದ ಬಳಿಕ ಪ್ರತಿಷ್ಠಿತ ಬ್ರಾಂಡ್ ಶೂ ಬಟ್ಟೆಗಳನ್ನು ಕಳವು ಮಾಡುತ್ತಿದ್ದರು. ಅದರಂತೆ ಆನೇಕಲ್ನ ಶೆಟ್ಟಿಹಳ್ಳಿ ಬಳಿಯ ನೈಕಿ ಶೂ ಗೋದಾಮಿಗೆ ಕೆಲಸಕ್ಕೆ ಸೇರಿದ್ದ ಸಲೆ ಅಹಮದ್ ಲಷ್ಕರ್ ಎಂಬಾತ ಹದಿನೈದು ದಿನ ಕೆಲಸ ಮಾಡಿ ಪ್ರತಿಷ್ಠಿತ ಬ್ರಾಂಡೆಡ್ ಶೂಗಳನ್ನು ಎಗರಿಸಿದ್ದ. ನೈಕಿ ಕಂಪನಿಯ ಬರೊಬ್ಬರಿ 1558 ಜೊತೆ ಶೂಗಳನ್ನ ಕಳ್ಳತನ ಮಾಡಿದ್ದರು.
ಆನೇಕಲ್ ತಾಲ್ಲೂಕಿನ ಶೆಟ್ಟಹಳ್ಳಿಯ ನೈಕಿ ಶೂರೂಂ ನಿಂದ ಶೂ ಲೋಡ್ ಆಗಿತ್ತು. ಅಲ್ಲಿಂದ ಅನುಗೊಂಡನಹಳ್ಳಿ ಸೌಖ್ಯರಸ್ತೆಯ ಮಿಂತ್ರ ಗೋಡೌನ್ಗೆ ಕ್ಯಾಂಟರ್ ಲಾರಿ ಹೋಗಬೇಕಿತ್ತು. ಆದರೆ, ಕ್ಯಾಂಟರ್ ಚಾಲಕ ಸಲೇ ಅಹಮದ್ ಲಷ್ಕರ್ ಖತರ್ನಾಕ್ ಐಡಿಯಾ ಮಾಡಿ, ವಾಹನದ ಸಮೇತವಾಗಿ ಲೋಡ್ ಗಟ್ಟಲೇ ನೈಕಿ ಶೂವನ್ನು ಹೈಜಾಕ್ ಮಾಡಿದ್ದರು. ಮೊದಲೇ ಪ್ಲಾನ್ ಮಾಡಿದಂತೆ ಬೆಂಗಳೂರಿನ ರಜಾಕ್ ಪಾಳ್ಯದಲ್ಲಿ ಶೂ ಅನ್ಲೋಡ್ ಮಾಡಿ ಅಲ್ಲಿಂದ ಹಣ ಪಡೆದಿದ್ದ.
ಇನ್ನು ಈ ಬಗ್ಗೆ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬೆನ್ನು ಬಿದ್ದಿದ್ದ ಪೊಲೀಸರು, ಜಿಪಿಆರ್ಎಸ್ ಚೆಕ್ ಮಾಡಿಕೊಂಡು ಹೋಗಿ ನೋಡಿದಾಗ ಈಚರ್ ವಾಹನ ಪತ್ತೆಯಾಗಿತ್ತು. ಖತರ್ನಾಕ್ ಖದೀಮರು, ಖಾಲಿ ಇದ್ದ ಈಚರ್ ವಾಹನವನ್ನ ಚಿಕ್ಕಜಾಲ ಬಳಿಯ ತರಬನಹಳ್ಳಿಯಲ್ಲಿ ಬಿಟ್ಟು ಪರಾರಿಯಾಗಿದ್ದರು. ಇದೀಗ ವಾಹನದ ಸಮೇತ ಕೋಟ್ಯಾಂತರ ರೂಪಾಯಿ ಮೌಲ್ಯದ ನೈಕಿ ಕಂಪನಿಯ ಶೂಗಳನ್ನ ವಶಕ್ಕೆ ಪಡೆದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ