ಬೆಂಗಳೂರು ಗ್ರಾಮಾಂತರ, ಸೆ.08: ಮೂರು ತಿಂಗಳಿಂದ ಶಿಕ್ಷಕರ (Teachers) ನೇಮಕ ಮಾಡದಕ್ಕೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಸೇರಿ ಶಾಲೆಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಹೌದು, ಜಿಲ್ಲೆಯ ಹೊಸಕೋಟೆ (Hoskote) ತಾಲೂಕಿನ ಶಿವನಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ 7 ನೇ ತರಗತಿ ವರೆಗೂ ಶಿಕ್ಷಣವಿದ್ದು, ಪ್ರತಿನಿತ್ಯ 213 ವಿದ್ಯಾರ್ಥಿಗಳು ಅಕ್ಕ ಪಕ್ಕದ ಹಳ್ಳಿಗಳಿಂದ ಇಲ್ಲಿಗೆ ಬರುತ್ತಾರೆ. ಹೀಗಾಗಿ ಸರ್ಕಾರಿ ಶಾಲೆ ಪ್ರತಿನಿತ್ಯ ಮಕ್ಕಳಿಂದಲೆ ತುಂಬುತ್ತಿದ್ದು, ಶಾಲೆಯಲ್ಲಿದ್ದ 6 ಜನ ಶಿಕ್ಷಕರು ಮಕ್ಕಳಿಗೆ ಉತ್ತಮವಾಗೆ ಪಾಠ ಮಾಡಿಕೊಂಡು ಹೋಗುತ್ತಿದ್ದರು. ಆದ್ರೆ, ಕಳೆದ ಎರಡು ತಿಂಗಳ ಹಿಂದೆ ಶಿಕ್ಷಣ ಇಲಾಖೆ ಮಾಡಿದ್ದ ವರ್ಗಾವಣೆಯಲ್ಲಿ ಶಾಲೆಯ ಆರಕ್ಕೆ ಆರು ಜನ ಶಿಕ್ಷಕರು ಸಹ ಬೇರೆಡೆಗೆ ವರ್ಗಾವಣೆ ಮಾಡಿಸಿಕೊಂಡಿದ್ದು, ಎಲ್ಲರೂ ಬೇರೆ ಬೇರೆ ಶಾಲೆಗಳಿಗೆ ಹೋಗಿದ್ದಾರೆ.
ಹೀಗಾಗಿ ಇಂದಲ್ಲ ನಾಳೆ ಹೊಸ ಶಿಕ್ಷಕರು ಬರುತ್ತಾರೆ ಎಂದು ಪೋಷಕರು ಮತ್ತು ಮಕ್ಕಳು ಕಾದು ಕುಳಿತಿದ್ದು, ಕಳೆದ ಎರಡು ತಿಂಗಳಿಂದ ಯಾವೋಬ್ಬ ಸರ್ಕಾರಿ ಶಿಕ್ಷಕರು ನೇಮಕವಾಗಿಲ್ಲ. ಜೊತೆಗೆ ಶಿಕ್ಷಕರು ಬಾರದ ಕಾರಣ ಗ್ರಾಮದಿಂದ ಬಂದಿದ್ದ ಮೂವರು ಅತಿಥಿ ಶಿಕ್ಷಕರೇ ಎಲ್ಲರನ್ನೂ ಒಂದೆಡೆ ಕೂರಿಸಿ ಪಾಠ ಮಾಡುತ್ತಿದ್ದು, ಮಕ್ಕಳು ಸರಿಯಾಗಿ ಕಲಿಯಲು ಆಗುತ್ತಿರಲಿಲ್ಲ. ಇನ್ನೂ ಕಳೆದ ಎರಡು ತಿಂಗಳಿಂದ ಅಧಿಕಾರಿಗಳಿಗೆ ಮನವಿ ನೀಡಿ ನೀಡಿ ಸುಸ್ತಾದ ಗ್ರಾಮಸ್ಥರು, ಇಂದು(ಸೆ.08) ಶಾಲೆಗೆ ಬೀಗ ಜಡಿದು ಸರ್ಕಾರಿ ಶಿಕ್ಷಕರನ್ನು ನೇಮಕ ಮಾಡುವಂತೆ ಶಾಲೆಯ ಮುಂದೆ ಮಕ್ಕಳ ಜೊತೆ ಕೂತು ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ:ದಾವಣಗೆರೆ: ಮೊರಾರ್ಜಿ ವಸತಿ ಶಾಲೆಯಲ್ಲಿ ಊಟ ಸೇವಿಸಿ 38 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ; ಮೂವರ ಸ್ಥಿತಿ ಗಂಭೀರ
ಇನ್ನು ಮಕ್ಕಳು ಮತ್ತು ಪೋಷಕರು ಆಕ್ರೋಶ ಹೊರ ಹಾಕುತ್ತಿದ್ದಂತೆ ಶಾಲೆಗೆ ದೌಡಾಯಿಸಿ ಬಂದ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಅವರು ಗ್ರಾಮಸ್ಥರ ಮನವೊಲಿಸುವ ಯತ್ನ ಮಾಡಿದ್ರು. ಆದ್ರೆ, ಶಿಕ್ಷಕರು ಬರುವವರೆಗೂ ನಾವು ಹೋಗಲ್ಲ ಎಂದು ಪೋಷಕರು ಪಟ್ಟು ಹಿಡಿದ ಕಾರಣ ಕೂಡಲೇ ಪಕ್ಕದ ಗ್ರಾಮದ ಸರ್ಕಾರಿ ಶಾಲೆ ಶಿಕ್ಷಕರೊಬ್ಬರನ್ನ ಶಾಲೆಗೆ ತಾತ್ಕಾಲಿಕವಾಗಿ ನೇಮಕ ಮಾಡಿದರು. ಅಲ್ಲದೆ ಇನ್ನೊಂದು ವಾರದಲ್ಲಿ ಮೂವರು ಶಿಕ್ಷಕರನ್ನು ಶಾಲೆಗೆ ಕಳಿಸಿಕೊಡುವುದಾಗಿ ಹೇಳಿ ಪೋಷಕರ ಮನವೊಲಿಸಿದ್ರು.
ಒಟ್ಟಾರೆ ದೇವರು ವರ ಕೊಟ್ರು ಪೂಜಾರಿ ಕೊಡಲಿಲ್ಲ ಎಂಬಂತೆ ಸರ್ಕಾರಿ ಶಾಲೆಯಲ್ಲಿ ನೂರಾರು ಸಂಖ್ಯೆಯಲ್ಲಿ ಮಕ್ಕಳಿದ್ರು ಶಿಕ್ಷಕರನ್ನ ನೇಮಕ ಮಾಡದಿರುವುದು ನಿಜಕ್ಕೂ ವಿಪರ್ಯಾಸ. ಇನ್ನಾದ್ರು ಶಿಕ್ಷಣ ಇಲಾಖೆ ಎಚ್ಚೆತ್ತು ಶಿಕ್ಷಕರನ್ನು ನೇಮಕ ಮಾಡುವ ಮೂಲಕ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡುವ ಕೆಲಸ ಮಾಡಬೇಕಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ