ದಾವಣಗೆರೆ: ಮೊರಾರ್ಜಿ ವಸತಿ ಶಾಲೆಯಲ್ಲಿ ಊಟ ಸೇವಿಸಿ 38 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ; ಮೂವರ ಸ್ಥಿತಿ ಗಂಭೀರ
ದಾವಣಗೆರೆ ತಾಲೂಕಿನ ಮಾಯಕೊಂಡದ ಮೊರಾರ್ಜಿ ಶಾಲೆಯಲ್ಲಿ ರಾತ್ರಿ ಊಟ ಸೇವಿಸಿದ್ದ 25ಕ್ಕೂ ಹೆಚ್ಚು ಮಕ್ಕಳಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ. ಮೂವರು ಮಕ್ಕಳ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ದಾವಣಗೆರೆ, ಸೆ.06: ತಾಲೂಕಿನ ಮಾಯಕೊಂಡದ ಮೊರಾರ್ಜಿ ಶಾಲೆ (Morarji Residential School) ಯಲ್ಲಿ ನಿನ್ನೆ(ಸೆ.05) ರಾತ್ರಿ ಊಟ ಸೇವಿಸಿದ್ದ 38ಕ್ಕೂ ಹೆಚ್ಚು ಮಕ್ಕಳಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ. ಕೂಡಲೇ ಅಸ್ವಸ್ಥಗೊಂಡ ಮಕ್ಕಳಿಗೆ ಮಾಯಕೊಂಡ ಪ್ರಾಥಮಿಕ ಆರೋಗ್ಯ ಕೇಂದ್ರದಕ್ಕೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಮೂವರು ಮಕ್ಕಳ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವಸತಿ ಶಾಲೆಯಲ್ಲಿ ಒಟ್ಟು 250ಕ್ಕೂ ವಿದ್ಯಾರ್ಥಿಗಳು ಇದ್ದಾರೆ.
ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ತಿಳಿದ ತಕ್ಷಣವೇ ಶಾಸಕ ಕೆ.ಎಸ್.ಬಸವಂತಪ್ಪ ಮಾಯಕೊಂಡ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿ ಮಕ್ಕಳಿಗೆ ಮತ್ತು ಪೋಷಕರಿಗೆ ಧೈರ್ಯ ತುಂಬಿದರು. ನಂತರ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಗೋವಿಂದರಾಜು ಅವರ ಎಷ್ಟು ಮಕ್ಕಳು ಅಸ್ವಸ್ಥರಾಗಿದ್ದಾರೆ. ಎಷ್ಟು ಮಕ್ಕಳು ಆರೋಗ್ಯವಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆದರು. ಈ ಘಟನೆ ನಡೆದರೂ ಆರೋಗ್ಯ ಇಲಾಖೆಯ ಮೇಲಧಿಕಾರಿಗಳು ಭೇಟಿ ನೀಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ:ಚಿಕ್ಕಬಳ್ಳಾಪುರ: ಹಾಸ್ಟೆಲ್ನಲ್ಲಿ ಉಪಹಾರ ಸೇವಿಸಿದ್ದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ: ವಾರ್ಡನ್ ಅಮಾನತು
ಇನ್ನು ಶಾಸಕರ ಭೇಟಿ ಎಂಬ ವಿಷಯ ತಿಳಿದ ತಕ್ಷಣವೇ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ತಹಸೀಲ್ದಾರ್ ಡಾ. ಅಶ್ವತ್, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್, ಡಿಎಚ್ ಒ ಷಣ್ಮುಖಪ್ಪ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್, ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿ ಬಸರಗಿ, ಮಾಯಕೊಂಡ ಪಿಎಸ್ ಐ ಅಜ್ಜಪ್ಪ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಮಕ್ಕಳ ಯೋಗಕ್ಷೇಮ ವಿಚಾರಿಸಿದರು.
ಆಸ್ಪತ್ರೆಯ ಭೇಟಿ ನಂತರ ಸರ್ಕಾರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಪ್ರತಿಭಾನ್ವಿತ ಬಾಲಕಿಯರ ವಸತಿ ಪ್ರೌಢಶಾಲೆಗೆ ಭೇಟಿ ನೀಡಿದ ಶಾಸಕ ಕೆ.ಎಸ್.ಬಸವಂತಪ್ಪ ಮತ್ತು ಅಧಿಕಾರಿಗಳು, ಅಡುಗೆ ತಯಾರು ಮಾಡುವ ಕೊಠಡಿ, ಸಾಮಗ್ರಿಗಳ ಕೊಠಡಿ, ಶೌಚಾಲಯ ಸೇರಿದಂತೆ ವಸತಿ ಕೊಠಡಿಗಳನ್ನು ಪರಿಶೀಲನೆ ನಡೆಸಿದರು.
ಇನ್ನು ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ. ರಾಜ್ಯದ ಅನೇಕ ಕಡೆಗಳಲ್ಲಿ ವಸತಿ ಶಾಲೆಯ ಊಟ ಸೇವಿಸಿ ದುರ್ಘಟನೆ ನಡೆದಿತ್ತು. ಅಷ್ಟೇ ಅಲ್ಲದೆ, 2023ಜನವರಿ 16 ರಂದು ಶಿವಮೊಗ್ಗ ತಾಲೂಕಿನ ಗೊಂದಿಚಟ್ನಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ, ವಿದ್ಯಾರ್ಥಿಗಳು ಊಟ ಸೇವನೆ ಮಾಡಿದ ಬಳಿಕ ಅಸ್ವಸ್ಥಗೊಂಡ ಘಟನೆ ನಡೆದಿತ್ತು. ಊಟವನ್ನು ಸೇವಿಸಿದ ನಂತರ ವಿದ್ಯಾರ್ಥಿಗಳಲ್ಲಿ ವಾಂತಿ, ಬೇಧಿ ಕಾಣಿಸಿಕೊಂಡು, 80 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು. ಕೂಡಲೇ ವಿದ್ಯಾರ್ಥಿಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:34 pm, Wed, 6 September 23