
ಬೆಂಗಳೂರು: ದುಷ್ಟರ್ಮಿಯೊಬ್ಬನಿಂದ ಆಸಿಡ್ ದಾಳಿಗೆ (Acid Attack) ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ಥೆ ಯುವತಿಯ ವೈದ್ಯಕೀಯ ವೆಚ್ಚಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ವೈಯಕ್ತಿಕವಾಗಿ ₹ 1ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಮೊದಲ ಹಂತದಲ್ಲಿ ಯುವತಿಯ ವೈದ್ಯಕೀಯ ವೆಚ್ಚಕ್ಕೆ 1 ಲಕ್ಷ ಪರಿಹಾರವನ್ನು ವೈಯಕ್ತಿಕವಾಗಿ ನೀಡಲಾಗುವುದು. ಅಗತ್ಯವಿದ್ದರೆ ಮುಂದಿನ ದಿನಗಳಲ್ಲಿ ಅವರ ಕುಟುಂಬ ವರ್ಗದವರಿಗೆ ಆರ್ಥಿಕ ನೆರವು ನೀಡುವ ಆಶ್ವಾಸನೆಯನ್ನು ನಿರಾಣಿ ಅವರು ನೀಡಿದ್ದಾರೆ. ಆಸಿಡ್ ದಾಳಿಗೆ ಒಳಗಾದ ಯುವತಿಯ ಕುಟುಂಬದವರು ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿದ್ದಾರೆ ಎಂಬುದನ್ನು ತಿಳಿದು ತುಂಬಾ ಬೇಸರವಾಯಿತು. ಹೀಗಾಗಿ ವೈದ್ಯಕೀಯ ನೆರವಿಗೆ ವೈಯುಕ್ತಿಕವಾಗಿ ನೆರವು ನೀಡುತ್ತಿದ್ದೇನೆಂದು ಹೇಳಿದ್ದಾರೆ. ಅತಿ ಶೀಘ್ರದಲ್ಲೇ ಕುಟುಂಬದವರಿಗೆ ಚೆಕ್ ನೀಡಲಾಗುವುದು. ಸರ್ಕಾರದಿಂದಲೂ ನೆರವು ಕೊಡಿಸಲು ಎಲ್ಲಾ ರೀತಿಯಲ್ಲೂ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಆಶ್ವಾಸನೆ ನೀಡಿದ್ದಾರೆ.
ಇದು ಅತ್ಯಂತ ಹೇಯ ಕೃತ್ಯ
ಯಾವುದೇ ನಾಗರಿಕ ಸಮಾಜದಲ್ಲಿ ಇಂತಹ ಅಮಾನವೀಯ ಘಟನೆಯನ್ನು ಸಹಿಸಲು ಸಾಧ್ಯವೇ ಇಲ್ಲ. ಇದೊಂದು ಅತ್ಯಂತ ಹೇಯ ಕೃತ್ಯ ಎಂದು ನಿರಾಣಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು ಎಂದರೆ ಈ ದುಷ್ಕತ್ಯ ಎಸಗುವವರಿಗೆ ಕಠಿಣವಾದ ಕಾನೂನು ಕ್ರಮ ಜರುಗಿಸಬೇಕು. ಇದರಿಂದ ಮುಂದಿನವರಿಗೂ ಎಚ್ಚರಿಕೆಯ ಪಾಠವಾಗಲಿದೆ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಎಷ್ಟು ಸಾಧ್ಯವೋ ಅದಷ್ಟು ಬೇಗ ಆರೋಪಿಯನ್ನು ಬಂಧಿಸಲಾಗುವುದು. ತಪ್ಪಿತಸ್ಥರು ಯಾರೇ ಇದ್ದರೂ ಸರ್ಕಾರ ಖಂಡಿತವಾಗಿಯೂ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಿದೆ ಎಂದು ಸಚಿವ ನಿರಾಣಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.
ಯುವತಿ ಆರೋಗ್ಯ ಸ್ಥಿತಿ ಸ್ಥಿರ
ದಾಳಿಗೆ ಒಳಗಾಗಿದ್ದ ಯುವತಿ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಸೇಂಟ್ ಜಾನ್ಸ್ ಆಸ್ಪತ್ರೆಯ ಐಸಿಯುನಲ್ಲಿ (ICU) ಸಂತ್ರಸ್ತೆಗೆ ಚಿಕಿತ್ಸೆ ಮುಂದುವರೆದಿದೆ. ದಿನದಿಂದ ದಿನಕ್ಕೆ ಯುವತಿ ಚೇತರಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿಕಿತ್ಸಾ ವೆಚ್ಚ ಭರಿಸೋದಾಗಿ ಸರ್ಕಾರ ಹೇಳಿದೆ. ಇನ್ನು ಆರೋಪಿ ನಾಗೇಶ್ಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. 72 ಗಂಟೆ ಕಳೆದರೂ ಆರೋಪಿ ಪತ್ತೆಯಾಗಿಲ್ಲ. ಸಿಕ್ಕ ಸುಳಿವುಗಳ ಮೇಲೆ ಪೊಲೀಸರು ತಲಾಶ್ ನಡೆಸುತ್ತಿದ್ದಾರೆ. ಮೊದಲು ಮೂರು ತಂಡದಿಂದ ಹುಡುಕಾಟ ನಡೆಸಲಾಗುತ್ತಿತ್ತು. ನಂತರ ಐದು ತಂಡಗಳಾಗಿ ಮಾಡಿಕೊಳ್ಳಲಾಗಿತ್ತು. ಸದ್ಯಕ್ಕೆ 7 ತಂಡದಿಂದ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ. ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ನಿನ್ನೆ ಸಂಜೆಯೊಳಗೆ ಬಂಧಿಸುವುದಾಗಿ ಹೇಳಿದ್ದರು. ಆದ್ರೆ ರಾತ್ರಿ ಕಳೆದು ಬೆಳಗಾದರೂ ಆರೋಪಿ ಸುಳಿವಿಲ್ಲ. ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿಯೂ ಹುಡುಕಾಟ ನಡೆಯುತ್ತಿದೆ. ಈಗಾಗಲೇ ಪೊಲೀಸರು ಆರೋಪಿಯ ಸ್ನೇಹಿತರು, ಕುಟುಂಬಸ್ಥರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 20ಕ್ಕೂ ಹೆಚ್ಚು ಜನರನ್ನ ವಶಪಡೆದಿದ್ದಾರೆ.
ನಾಳೆಯಿಂದ ಸಂತ್ರಸ್ತೆ ಯುವತಿಗೆ ಚರ್ಮ ಜೋಡಣೆ ಚಿಕಿತ್ಸೆ:
ನಾಳೆಯಿಂದ ಸಂತ್ರಸ್ತೆ ಯುವತಿಗೆ ಚರ್ಮ ಜೋಡಣೆ ಚಿಕಿತ್ಸೆ ಪ್ರಾರಂಭವಾಗುತ್ತದೆ. ವಿಕ್ಟೋರಿಯಾದಿಂದ ಸ್ಕಿನ್ ಸೇಂಟ್ ಜಾನ್ಸ್ ಆಸ್ಪತ್ರೆ ತಲುಪಿದೆ. ಚರ್ಮ ಜೋಡಣೆಯ ಬಳಿಕ 2-3 ವಾರಗಳಲ್ಲಿ ಬೆಳವಣಿಗೆ ಆಗುತ್ತದೆ. ಮೊದಲಿದ್ದ ರೀತಿಯಲ್ಲೇ ಚರ್ಮ ಬೆಳವಣಿಗೆ ಆಗುತ್ತದೆ. ಚರ್ಮ ಜೋಡಣೆಯ ಬಳಿಕ ನೋವು ಕಡಿಮೆಯಾಗಲಿದೆ. ನೋವು ಕಡಿಮೆಯಾಗಿ ಸುಟ್ಟ ಗಾಯದ ಉರಿ ಕಡಿಮೆಯಾಗುತ್ತೆ. ಸ್ವಂತ ಚರ್ಮದ ಬೆಳವಣಿಗೆಯಾಗಿ ದೇಹ ಮೊದಲಿನ ಸ್ಥಿತಿಗೆ ಬರಲಿದೆ. ಡೋನರ್ಗಳಿಂದ ಪಡೆದ ಸ್ಕಿನ್ ಲ್ಯಾಬ್ನಲ್ಲಿ ಟೆಸ್ಟ್ ಮಾಡಲಾಗುತ್ತೆ. ತೊಂದರೆ ಇಲ್ಲವೆಂದ ಖಚಿತವಾದ ಬಳಿಕವೇ ಸ್ಕಿನ್ ಸ್ಟೋರ್ ಮಾಡುತ್ತಾರೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:41 pm, Sun, 1 May 22