ಕಲಾವಿದರು ಚಿತ್ತಾರ: ನಮ್ಮ ಮೆಟ್ರೋ 8 ಗೋಡೆಗಳು ಹೇಳಲಿವೆ ಬೆಂಗಳೂರಿನ ವಿಶಿಷ್ಟ ಕಥೆಗಳು

| Updated By: ರಮೇಶ್ ಬಿ. ಜವಳಗೇರಾ

Updated on: Nov 18, 2024 | 7:40 PM

ಬೆಂಗಳೂರಿನ 8 ಮೆಟ್ರೋ ನಿಲ್ದಾಣದ ಗೋಡೆಗಳು ಮತ್ತು 2 ಪ್ರಮುಖ ಖಾಸಗಿ ಗೋಡೆಗಳ ಮೇಲೆ 10 ಪ್ರಸಿದ್ಧ ಚಿತ್ರಕಲಾವಿದರು ಬೆಂಗಳೂರಿನ ಪರಂಪರೆಯ ಕುರಿತು ಗೋಡೆ ಚಿತ್ರಬಿಡಿಸಲಿದ್ದಾರೆ. ಪ್ರತಿಯೊಂದೂ ಚಿತ್ರಗಳು ಬೆಂಗಳೂರಿನ ಚೈತನ್ಯವನ್ನು ಪ್ರತಿಬಿಂಬಿಸುವ ಮತ್ತು ನಗರದ ಶಕ್ತಿಯನ್ನು ಸೆರೆಹಿಡಿಯುವ ವಿಶಿಷ್ಟ ಕಥೆಯನ್ನು ಹೇಳುವುದೇ ವಿಶೇಷ.

ಕಲಾವಿದರು ಚಿತ್ತಾರ: ನಮ್ಮ ಮೆಟ್ರೋ 8 ಗೋಡೆಗಳು ಹೇಳಲಿವೆ ಬೆಂಗಳೂರಿನ ವಿಶಿಷ್ಟ ಕಥೆಗಳು
Follow us on

ಬೆಂಗಳೂರು (ನವೆಂಬರ್.18): ಬೆಂಗಳೂರಿನ 8 ಮೆಟ್ರೋ ನಿಲ್ದಾಣದ ಗೋಡೆಗಳು ಮತ್ತು 2 ಪ್ರಮುಖ ಖಾಸಗಿ ಗೋಡೆಗಳ ಮೇಲೆ 10 ಪ್ರಸಿದ್ಧ ಚಿತ್ರಕಲಾವಿದರು ಬೆಂಗಳೂರಿನ ಪರಂಪರೆಯ ಕುರಿತು ಗೋಡೆ ಚಿತ್ರಬಿಡಿಸಲಿದ್ದಾರೆ. ಹೌದು, ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಹಾಗೂ ಅನ್‌ಬಾಕ್ಸಿಂಗ್‌ ಬೆಂಗಳೂರು ಫೌಂಡೇಷನ್‌ ಸಹಯೋಗದಲ್ಲಿ ‘ಗೋಡೆ ಬೆಂಗಳೂರು’ ಉಪಕ್ರಮವನ್ನು ಈಗಾಗಲೇ ಘೋಷಣೆ ಮಾಡಲಾಗಿತ್ತು. ಈ ಉಪಕ್ರಮದ ಅಡಿಯಲ್ಲಿ ಒಟ್ಟು 10 ಗೋಡೆಗಳನ್ನು ಚಿತ್ರಗಳ ಮೂಲಕ ಅಲಂಕರಿಸಲಾಗುತ್ತದೆ.

ಪ್ರಮುಖ ಮೆಟ್ರೋ ನಿಲ್ದಾಣಗಳಾದ ವಿಶ್ವೇಶ್ವರಯ್ಯ ಸೆಂಟ್ರಲ್ ಕಾಲೇಜು ನಿಲ್ದಾಣ, ಜಯನಗರ ನಿಲ್ದಾಣ, ಆರ್‌.ವಿ (ರಾಷ್ಟ್ರೀಯ ವಿದ್ಯಾಲಯ) ರಸ್ತೆ ನಿಲ್ದಾಣ, ಜೆಪಿ ನಗರ ನಿಲ್ದಾಣ, ಯಶವಂತಪುರ ನಿಲ್ದಾಣ, ಹಲಸೂರು ನಿಲ್ದಾಣ ಮತ್ತು ಶ್ರೀರಾಂಪುರ ಮತ್ತು ಇನ್ನೆರಡು ಗೋಡೆಗಳಲ್ಲಿ ಚರ್ಚ್ ಸ್ಟ್ರೀಟ್ ಮತ್ತು ಸೈನ್ಸ್ ಗ್ಯಾಲರಿ ಗೋಡೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಈ ಗೋಡೆಗಳ ಮೇಲೆ ಪ್ರಸಿದ್ಧ ಕಲಾವಿದರು ಚಿತ್ರಬಿಡಲಿದ್ದಾರೆ.

ಈ ಕುರಿತು ಮಾತನಾಡಿದ ಗೋಡೆ ಬೆಂಗಳೂರು ಬಿಎಲ್ಆರ್‌ (GodeBLR)ನ ಮುಖ್ಯ ಮೇಲ್ವಿಚಾರಕಿ ಕಾಮಿನಿ ಸಾಹ್ನಿ ‘ಬೆಂಗಳೂರು ಹ್ಯೂಸ್’ ಎಂಬ ಥೀಮ್‌ನೊಂದಿಗೆ, ಗೋಡೆ ಬಿಎಲ್ಆರ್, ಬೆಂಗಳೂರಿನ ಶ್ರೀಮಂತ ಇತಿಹಾಸ ಮತ್ತು ಪರಂಪರೆಯಿಂದ ಹಿಡಿದು, ವೈವಿಧ್ಯಮಯ ಜನ ಸಮುದಾಯ ಮತ್ತು ನೈಸರ್ಗಿಕ ಸೌಂದರ್ಯದವರೆಗೆ, ನಗರದ ಬಹುಮುಖಿ ಅಸ್ಮಿತೆಯ ಕಲಾತ್ಮಕ ಆಚರಿಸಲಿದೆ ಎಂದರು.

10 ಕಲಾವಿದರ ತಂಡ

ಟೀಮ್ ಗಿಚ್‌ಪಿಚ್‌, ಅರವಾಣಿ ಆರ್ಟ್ ಪ್ರಾಜೆಕ್ಟ್, ಮಂಜುನಾಥ ಹೊನ್ನಾಪುರ, ಮಂಜುನಾಥ ಎಚ್. ಪಿ., ಪರಮ್ ಆರ್ಟ್ ಸ್ಟುಡಿಯೋಸ್, ರೋಹಿತ್ ಭಾಸಿ, ಸಂತೋಷ್ ಪತ್ತಾರ್, ಶಾಂತಮಣಿ ಮುದ್ದಯ್ಯ, ಅಂಪು ವರ್ಕಿ ಮತ್ತು ಅನಿಲ್ ಕುಮಾರ್ ಸೇರಿದಂತೆ ಪ್ರಸಿದ್ಧ ಕಲಾವಿದರ ವೈವಿಧ್ಯಮಯ ಎಲ್ಲಾ 10 ಗೋಡೆಗಳ ಮೇಲೆ ಜನಮನಸೂರೆಗೊಳ್ಳಬಲ್ಲ ಕಲಾಕೃತಿಗಳನ್ನು ರಚಿಸಲಿದ್ದಾರೆ. ಪ್ರತಿಯೊಂದೂ ಬೆಂಗಳೂರಿನ ಚೈತನ್ಯವನ್ನು ಪ್ರತಿಬಿಂಬಿಸುವ ಮತ್ತು ನಗರದ ಶಕ್ತಿಯನ್ನು ಸೆರೆಹಿಡಿಯುವ ವಿಶಿಷ್ಟ ಕಥೆಯನ್ನು ಹೇಳಲಿದೆ.