ಶಾಸಕರನ್ನು ವಿಶ್ವಾಸದಲ್ಲಿಟ್ಟುಕೊಳ್ಳುವಂತೆ ಸಚಿವರಿಗೆ ಸಿಎಂ ಟಾಸ್ಕ್, ಸರ್ಕಾರಕ್ಕೆ ಇದ್ಯಾ ಆಪರೇಷನ್ ಕಮಲ ಭೀತಿ?
ರಾಜ್ಯ ಸರ್ಕಾರದ ಒಂದಿಲ್ಲೊಂದು ವಿವಾದ ವಿಪಕ್ಷಗಳಿಗೆ ಅಸ್ತ್ರವಾಗುತ್ತಿದೆ. ಸದ್ಯ ಸರ್ಕಾರದ ಎಡುವುದನ್ನೇ ಕಾಯುತ್ತಿರುವ ಬಿಜೆಪಿಗೆ, ಇದೀಗ ಬೆಳಗಾವಿ ಅಧಿವೇಶನದಲ್ಲಿ ಕಾಂಗ್ರೆಸ್ ಗೆ ಕೌಂಟರ್ ಕೊಡಲು ಪ್ಲಾನ್ ಮಾಡ್ತಿದೆ. ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಲು ಇಂದು ಸಿಎಂ ಸಿದ್ದರಾಮಯ್ಯ ಹಿರಿಯ ಸಚಿವರುಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಈ ಆಪರೇಷನ್ ಕಮಲದ ಭೀತಿ ಹಿನ್ನೆಲೆಯಲ್ಲಿ ಶಾಸಕರನ್ನು ವಿಶ್ವಾದಲ್ಲಿಟ್ಟುಕೊಳ್ಳುವಂತೆ ಖಡಕ್ ಸೂಚನೆ ನೀಡಿದ್ದಾರೆ. ಸಭೆಯಲ್ಲಿ ಸಚಿವರಿಗೆ ಏನೇನು ಪಾಠ ಮಾಡಿದ್ದಾರೆ ಎನ್ನುವ ಇನ್ಸೈಡ್ ಡಿಟೇಲ್ಸ್ ಇಲ್ಲಿದೆ ನೋಡಿ.
ಬೆಂಗಳೂರು, (ನವೆಂಬರ್ 18): ಇತ್ತೀಚಿನ ದಿನಗಳಲ್ಲಿ ಸರ್ಕಾರದ ಮೇಲೆ ಒಂದಿಲ್ಲೊಂದು ಆರೋಪಗಳು ಕೇಳಿ ಬರುತ್ತಲೇ ಇದೆ. ಸದ್ಯ ಇದು ವಿಪಕ್ಷಗಳಿಗೆ ಆಹಾರವಾಗಿದೆ. ಮುಂದಿನ ತಿಂಗಳು ಬೆಳಗಾವಿಯ ಚಳಿಗಾಲದ ಅಧಿವೇಶ ಸಹ ಆರಂಭವಾಗಲಿದೆ. ಬಿಜೆಪಿ ಆರೋಪಗಳ ಮೇಲೆ ಪ್ರತಿಭಟನೆ ಮಾಡಬಹುದು. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ಇಂದು(ನವೆಂಬರ್ 18) ಕಾವೇರಿ ನಿವಾಸದಲ್ಲಿ ಹಿರಿಯ ಸಚಿವರುಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದರು. ಬಿಪಿಎಲ್ ಕಾರ್ಡ್ ರದ್ದು ಗದ್ದಲ, ವಕ್ಫ್ ಮತ್ತು ರೈತರ ನಡುವಿನ ಭೂಮಿ ಸಮರ, ಬಿಜೆಪಿಯಿಂದ ಕಾಂಗ್ರೆಸ್ ಶಾಸಕರ ಖರೀದಿ ವಿಚಾರ, ರಾಜ್ಯಪಾಲರ ಬಳಿ ಬಾಕಿ ಉಳಿದ ಬಿಲ್ ಹಾಗೂ ಬೆಳಗಾವಿಯಲ್ಲಿ ಮಂಡಿಸಬೇಕಾದ ಬಿಲ್ ಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯ್ತು. ಇನ್ನು ಈ ಮಹತ್ವದ ಸಭೆಯಲ್ಲಿ ಸಿದ್ದರಾಮಯ್ಯನವರು, ಸಚಿವರುಗಳಿಗೆ ಕೆಲ ಖಡಕ್ ಸೂಚನೆಗಳನ್ನು ನೀಡಿದ್ದಾರೆ. ಅಲ್ಲದೇ ವಿಪಕ್ಷದ ಆರೋಪಗಳಿಗೆ ಹೇಗೆಲ್ಲಾ ತಿರುಗೇಟು ನೀಡಬೇಕೆಂದು ಮಾರ್ಗದರ್ಶನ ಮಾಡಿದ್ದಾರೆ.
ಶಾಸಕರನ್ನು ವಿಶ್ವಾಸದಲ್ಲಿಟ್ಟುಕೊಳ್ಳುವಂತೆ ಸಚಿವರಿಗೆ ಟಾಸ್ಕ್
ಇನ್ನು ಈಗಾಗಲೇ ವಿರೋಧ ಪಕ್ಷ ಬಿಜೆಪಿ, ಸರ್ಕಾರ ಪತನವಾಗಲಿದೆ ಪತನವಾಗಲಿದೆ ಎಂದು ಹೇಳುತ್ತಲೇ ಬರುತ್ತಿದೆ. ಎಲ್ಲೋ ಒಂದು ಕಡೆ ಸೈಲೆಂಟ್ ಆಗಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಒಳಗಿದೊಳಗೆ ಕಸರತ್ತು ನಡೆಸಿದಂತಿದೆ. ಇದರಿಂದ ಎಚ್ಚೆತ್ತ ಸಿಎಂ ಇಂದಿನ ಸಭೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಹಿರಿಯ ಸಚಿವರು ನಿಗಾ ವಹಿಸಲು ಸಿಎಂ ಸೂಚನೆ ನೀಡಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಶಾಸಕರನ್ನು ವಿಶ್ವಾಸಕ್ಕೆ ಇಟ್ಟುಕೊಳ್ಳಿ. ಶಾಸಕರು ಬಿಜೆಪಿ ನಾಯಕರ ಸಂಪರ್ಕಕ್ಕೆ ಸಿಗದಂತೆ ನೋಡಿಕೊಳ್ಳಿ. ಅಂತಹ ಬೆಳವಣಿಗೆಗಳು ಕಂಡು ಬಂದರೆ ತಕ್ಷಣ ತಿಳಿಸಬೇಕೆಂದು ಹಿರಿಯ ಸಚಿವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ. ಈ ಮೂಲಕ ಸಿಎಂಗೆ ಬಿಜೆಪಿಯ ಆಪರೇಷನ್ ಕಮಲ ಭೀತಿ ಕಾಡುತ್ತಿರುವುದು ನಿಜವೆನಿಸಿದಂತಾಗಿದೆ.
ಇದನ್ನೂ ಓದಿ: ಬಿಜೆಪಿಯಿಂದ 100 ಕೋಟಿ ರೂ. ಆಫರ್: ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಮತ್ತೆ ಆರೋಪ
ಬಿಪಿಎಲ್ ಕಾರ್ಡ್ ಗೊಂದಲದ ಬಗ್ಗೆ ಸಿಎಂ ಖಡಕ್ ಸೂಚನೆ
ಬೆಳಗಾವಿ ಅಧಿವೇಶನ ಹಿನ್ನೆಲೆ ಇಂದಿನ ಸಭೆ ಸಾಕಷ್ಟು ಮಹತ್ವ ಪಡೆದುಕೊಂಡಿತ್ತು. ಅದರಲ್ಲೂ ಬಿಪಿಎಲ್ ಕಾರ್ಡ್ ಗಳ ಪರಿಷ್ಕರೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ವಿಪಕ್ಷಗಳು ನಿರಂತರ ಆರೋಪದಿಂದ ಸರ್ಕಾರಕ್ಕೆ ಮುಜುಗರ ಆಗುತ್ತಿದೆ. ಹೀಗಾಗಿ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪರಿಗೂ ಸಿಎಂ ಖಡಕ್ ಸೂಚನೆ ನೀಡಿದ್ದಾರೆ. ಅರ್ಹರ ಬಿಪಿಎಲ್ ಕಾರ್ಡ್ ಯಾವುದೇ ಕಾರಣಕ್ಕೂ ರದ್ದು ಮಾಡಲ್ಲ. ತೆರಿಗೆ ಪಾವತಿದಾರರು, ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗಿದೆ. ಬಿಪಿಎಲ್ ಕಾರ್ಡ್ ಸಮಗ್ರವಾಗಿ ಪರಿಷ್ಕರಣೆ ಮಾಡಿ ಎಂದು ಸಿಎಂ ಸಭೆಯಲ್ಲಿ ಆಹಾರ ಸಚಿವ ಕೆ. ಎಚ್ ಮುನಿಯಪ್ಪಗೆ ಸೂಚನೆ ನೀಡಿದ್ದಾರೆ.
ಅಲ್ಲದೇ ಇಲಾಖೆ ಸಭೆ ನಡೆಸಿ, ಕ್ರಮ ತೆಗೆದುಕೊಳ್ಳಲು ಸಿಎಂ ನಿರ್ದೇಶನ ನೀಡಿದ್ದಾರೆ. ಎಪಿಎಲ್, ಬಿಪಿಎಲ್ ಯಾವುದೇ ಕಾರ್ಡ್ ರದ್ದಿಲ್ಲ. ಅರ್ಹರಲ್ಲದವರನ್ನ ಎಪಿಎಲ್ ಗೆ ಸೇರಿಸಲು ಸಿಎಂ ಸೂಚನೆ. ಪರಿಷ್ಕರಣೆ ವೇಳೆ ಕೈತಪ್ಪ ಹೋದ್ರೆ ಬಿಪಿಎಲ್ ಕಾರ್ಡ್ ಪಡೆಯಲು ಮತ್ತೊಮ್ಮೆ ಅವಕಾಶ ನೀಡುವಂತೆಯೂ ಸೂಚಿಸಿದ್ದಾರೆ.
ಕೊವಿಡ್ ಅಕ್ರಮ ತನಿಖೆಗೆ ಎಸ್ಐಟಿ ರಚನೆ ಬಗ್ಗೆ ಸಿಎಂ ಚರ್ಚೆ
ಇನ್ನು ವಿರೋಧ ಪಕ್ಷ ಬಿಜೆಪಿ ಮೇಲಿಂದ ಮೇಲೆ ಕೆಲ ಗಂಭೀರ ಆರೋಪಗಳೊಂದಿಗೆ ಸರ್ಕಾರದ ಮೇಲೆ ಬಿಗಿಬಿದ್ದಿದೆ. ಇದಕ್ಕೆ ತಿರುಗೇಟು ನೀಡಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದ್ದು, ಬಿಜೆಪಿ ಅವಧಿಯಲ್ಲಿನ ಕೋವಿಡ್ ಹಗರಣ ತನಿಖೆಗೆಯ ಮೂಲಕ ತಿರುಗೇಟು ನೀಡಲು ತೀರ್ಮಾನಿಸಿದ್ದು, ಕೊವಿಡ್ ಹಗರಣ ಮತ್ತಷ್ಟು ಅಗ್ರೆಸ್ಸಿವ್ ಆಗಿ ಜನರ ಮುಂದಿಡಲು ಸಭೆಯಲ್ಲಿ ಹಿರಿಯ ಸಚಿವರಿಗೆ ನೀಡಿದ್ದಾರೆ. ಅಲ್ಲದೇ ಯಾರ ನೇತೃತ್ವದಲ್ಲಿ ತನಿಖೆ ಮಾಡಿಸಬೇಕೆಂದು ಸಭೆಯಲ್ಲಿ ಚರ್ಚಿಸಿದ್ದು, ಎಸ್ಐಟಿ ಮುಖ್ಯಸ್ಥರ ನೇಮಕವನ್ನು ಮಾಡುವುದನ್ನು ಗೃಹ ಡಾ.ಪರಮೇಶ್ವರ್ಗೆ ಬಿಟ್ಟಿದ್ದಾರೆ.
ಮತ್ತೆ ಕೇಂದ್ರದ ವಿರುದ್ಧ ಹೋರಾಟದ ಬಗ್ಗೆ ಚರ್ಚೆ
ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಈಗಾಗಲೇ ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ಮಾಡಿ ಗಮನ ಸೆಳೆದಿರುವ ಸಿದ್ದರಾಮಯ್ಯ ಸರ್ಕಾರ, ಇದೀಗ ಮೋದಿ ಸರ್ಕಾರದ ವಿರುದ್ಧ ಮತ್ತೊಂದು ರೀತಿಯ ಪ್ರತಿಭಟನೆಗೆ ಸಿದ್ಧವಾಗಿದೆ. ನಬಾರ್ಡ್ ಸಾಲ ನೀಡುವ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಕರ್ನಾಟಕಕ್ಕೆ ನಬಾರ್ಡ್ 5800 ಕೋಟಿ ರೂಪಾಯಿ ಸಾಲ ನೀಡಿಲ್ಲ. ಈ ಬಗ್ಗೆ ಕೇಂದ್ರಸರ್ಕಾರದ ವಿರುದ್ಧ ಹೋರಾಟಕ್ಕೆ ರೂಪುರೇಷೆ ಸಿದ್ಧಪಡಿಸಿ ಎಂದು ಹಿರಿಯ ಸಚಿವರಿಗೆ ಸೂಚಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ