ಇಸ್ರೇಲ್‌ನ ಕಂಪೆನಿಯಲ್ಲಿ ಉದ್ಯೋಗ ನೀಡುವುದಾಗಿ ವಂಚನೆ, ಬ್ಲ್ಯಾಕ್ಮೇಲ್
ಅವರೆಲ್ಲ ದೂರದ ಇಸ್ರೇಲ್‌ನಲ್ಲಿ ಉದ್ಯೋಗ ಸಿಗುತ್ತೆ ಎಂಬ ಕನಸು ಕಂಡಿದ್ದರು. ಇದಕ್ಕಾಗಿ ಪಾಸ್‌ಪೋರ್ಟ್ ಸೇರಿದಂತೆ ಅಗತ್ಯದ ಮೂಲ ದಾಖಲೆಗಳನ್ನು ಏಜೆನ್ಸಿಯೊಂದಕ್ಕೆ ಸಲ್ಲಿಸಿದ್ದರು. ಆದರೆ, ಇದೀಗ ಉದ್ಯೋಗ ಕೊಡಿಸುವ ಆಮೀಷ ನೀಡಿದ ಆ ಏಜೆನ್ಸಿ ಉದ್ಯೋಗವನ್ನು ನೀಡದೆ, ಅತ್ತ ದಾಖಲೆಗಳನ್ನೂ ವಾಪಸ್ ನೀಡದೆ ವಂಚಿಸಿದೆ. ಸಂತ್ರಸ್ಥರು ದಾರಿ ಕಾಣದೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಏನಿದು ಘಟನೆ? ಇಲ್ಲಿದೆ ಓದಿ.
ಮಂಗಳೂರು, ನವೆಂಬರ್ 18: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಕಾರ್ಮೋಡ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಆದರೆ, ಇದೆಲ್ಲದರ ನಡುವೆ ಇಸ್ರೇಲ್‌ನಲ್ಲಿರುವ (Israel) ಕಂಪೆನಿಯೊಂದರ ಹೆಸರನ್ನು ಬಳಸಿಕೊಂಡು ಉದ್ಯೋಗ ನೀಡುವ ಆಮೀಷವೊಡ್ಡಿ ಕೇರಳ (Keral) ಮೂಲದ ಏಜೆನ್ಸಿಯೊಂದು ವಂಚಿಸಿರುವ ಆರೋಪ ಕೇಳಿಬಂದಿದೆ.
ಇಸ್ರೇಲ್‌ನ ಕಂಪೆನಿಯೊಂದರಲ್ಲಿ ಉದ್ಯೋಗ ನೀಡುವುದಾಗಿ ಪಾಸ್‌ಪೋರ್ಟ್ ಹಾಗೂ ಹಣ ಪಡೆದ ಕೇರಳದ ಏಜೆನ್ಸಿಯೊಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 130 ಮಂದಿ ಸೇರಿದಂತೆ ದೇಶದ ಸಾವಿರಾರು ಮಂದಿಗೆ ವಂಚಿಸಿರುವುದಾಗಿ ವಂಚನೆಗೊಳಗಾದವರು ಆರೋಪಿಸಿದ್ದಾರೆ.
ಉದ್ಯೋಗಾಕಾಂಕ್ಷಿಗಳು ಇಸ್ರೇಲ್‌ನಲ್ಲಿ ಉದ್ಯೋಗ ಪಡೆಯಲು ಮಂಗಳೂರಿನ ಕನ್ಸಲ್ಟೆನ್ಸಿಯವರಿಗೆ ಪಾಸ್‌ಪೋರ್ಟ್ ನೀಡಿದ್ದರು. ಅವರು ಕೇರಳದ ಏಜೆನ್ಸಿಗೆ ನೀಡಿದ್ದರು. ಆದರೆ ಕೇರಳದ ಏಜೆನ್ಸಿಯವರು ಇಸ್ರೇಲ್‌ನಲ್ಲಿ ಅಸ್ತಿತ್ವದಲ್ಲೇ ಇಲ್ಲದಿರುವ ನಕಲಿ ಕಂಪೆನಿಯೊಂದರ ಆಫರ್ ಲೆಟರ್ ನೀಡಿದ್ದಾರೆ. ಅಲ್ಲದೇ ಪಾಸ್‌ಪೋರ್ಟ್, ಹಣ ಪಡೆದುಕೊಂಡಿದ್ದಾರೆ. ಇದೀಗ ಪಾಸ್‌ಪೋರ್ಟ್ ವಾಪಸ್ ನೀಡಲು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ವಂಚನೆಗೊಳಗಾದವರು ದೂರಿದ್ದಾರೆ.
ಇದನ್ನೂ ಓದಿ: ಈಜುಕೊಳದಲ್ಲಿ ಮುಳುಗಿ ಪ್ರಾಣಬಿಟ್ಟ ಮೂವರು ಯುವತಿಯರ ಕೊನೆ ಕ್ಷಣ ಹೇಗಿತ್ತು? ವಿಡಿಯೋ ನೋಡಿ
ಮಂಗಳೂರಿನ ಕನ್ಸಲ್ಟೆನ್ಸಿಯ ರೋಹಿತ್ ಎಂಬವರು ತಮ್ಮ ಬಳಿ 130 ಮಂದಿ ತಂದುಕೊಟ್ಟಿದ್ದ ಪಾಸ್‌ಪೋರ್ಟ್‌ನ್ನು ಕೇರಳದ ಸ್ಪೇಸ್ ಇಂಟರ್‌ನ್ಯಾಶನಲ್ ಎಂಬ ಏಜೆನ್ಸಿಯವರಿಗೆ ನೀಡಿದ್ದರು. ಪಾಸ್‌ಪೋರ್ಟ್ ನೀಡಿದ ಸುಮಾರು 20 ದಿನಗಳ ನಂತರ ಇಸ್ರೇಲ್‌ನ ಕೊಹೇನ್ ಎಂಪ್ಲಾಯ್‌ಮೆಂಟ್ ಗ್ರೂಪ್ ಕಂಪನಿ ಎಂಬ ಹೆಸರಿನಿಂದ ಆಫರ್ ಲೆಟರ್ ಬಂದಿತ್ತು. ಆ ಆಫರ್ ಲೆಟರ್‌ನ ಬಗ್ಗೆ ಇಸ್ರೇಲ್‌ನಲ್ಲಿರುವ ಅವರ ಗೆಳೆಯನಿಗೆ ತಿಳಿಸಿದ್ದರು. ಆದರೆ, ಅವರು ಅಲ್ಲಿ ಪರಿಶೀಲನೆ ಮಾಡುವಾಗ ಆ ಹೆಸರಿನ ಕಂಪನಿ ಅಸ್ತಿತ್ವದಲ್ಲಿ ಇಲ್ಲದೆ ಇರುವುದು ಗೊತ್ತಾಯಿತು.
ಹೀಗಾಗಿ, ಸ್ಪೇಸ್ ಇಂಟರ್‌ನ್ಯಾಶನಲ್‌ನವರ ಬಳಿ ಪಾಸ್‌ಪೋರ್ಟ್‌ಗಳನ್ನು ವಾಪಸ್ ನೀಡುವಂತೆ ಹೇಳಿದರು. ಆದರೆ, ಸ್ಪೇಸ್ ಇಂಟರ್‌ನ್ಯಾಶನಲ್‌ನವರು ಪಾಸ್‌ಪೋರ್ಟ್‌ಗಳನ್ನು ನೀಡಲು ನಿರಾಕರಿಸುತ್ತಿದ್ದಾರಂತೆ. ಆಫರ್ ಲೆಟರ್ ಪಡೆದು 60,000 ರೂ. ನೀಡಬೇಕು ಅಥವಾ ಪಾಸ್‌ಪೋರ್ಟ್ ವಾಪಸ್ ಬೇಕಾದರೆ ಅದಕ್ಕೂ 60,000 ರೂ. ನೀಡಬೇಕು ಎಂದು ಬೆದರಿಸುತ್ತಿದ್ದಾರಂತೆ. ಹೀಗಾಗಿ ಸಂತ್ರಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಪಾಸ್‌ಪೋರ್ಟ್ ಸೇರಿದಂತೆ ಅಗತ್ಯದ ಮೂಲ ದಾಖಲೆಗಳು ಏಜೆನ್ಸಿಯವರ ಬಳಿ ಇರುವುದರಿಂದ ಸಂತ್ರಸ್ಥರು ಅಡ್ಡಕತ್ತರಿಯಲ್ಲಿ ಸಿಲುಕಿಕೊಂಡಂತಾಗಿದೆ. ಅತ್ತ ಕೆಲಸವೂ ಇಲ್ಲದೇ, ಇತ್ತ ದಾಖಲೆಯೂ ಸಿಗದೆ ಬೇರೆ ದೇಶದಲ್ಲಿ ಉದ್ಯೋಗಕ್ಕೆ ಹೋಗುವುದಕ್ಕೂ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸಿ ಈ ಪ್ರಕರಣದ ಸತ್ಯಾಸತ್ಯತೆ ಬಯಲಿಗೆಳೆದು ನ್ಯಾಯ ದೊರಕಿಸಿಕೊಡಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ