ಬೆಂಗಳೂರಿನ 10 ವರ್ಷದ ಬಾಲಕನ ಚಿತ್ರಕ್ಕೆ ಜಾಗತಿಕ ಅತ್ಯುತ್ತಮ ವನ್ಯಜೀವಿ ಛಾಯಾಚಿತ್ರ ಪ್ರಶಸ್ತಿ
ಲಂಡನ್‌ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಆಯೋಜಿಸುವ ಜಾಗತಿಕ ಅತ್ಯುತ್ತಮ ವನ್ಯಜೀವಿ ಛಾಯಾಚಿತ್ರಗಳ ಪ್ರದರ್ಶನದಲ್ಲಿ ಬೆಂಗಳೂರು ಮೂಲದ ವಿಹಾನ್ ತಾಳ್ಯ ವಿಕಾಸ್‌ಗೆ ವನ್ಯಜೀವಿ ಛಾಯಾಗ್ರಾಹಕ ಪ್ರಶಸ್ತಿ ಲಭಿಸಿದೆ. ಯಾವ ಚಿತ್ರಕ್ಕೆ ಜಾಗತಿಕ ಅತ್ಯುತ್ತಮ ಪ್ರಶಸ್ತಿ ಸಿಕ್ಕಿದೆ? ಇಲ್ಲಿದೆ ವಿವರ.
ಬೆಂಗಳೂರು (ಅಕ್ಟೋಬರ್.23) : ಲಂಡನ್‌ನ (London)ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಆಯೋಜಿಸುವ ಜಾಗತಿಕ ಅತ್ಯುತ್ತಮ ವನ್ಯಜೀವಿ ಛಾಯಾಚಿತ್ರಗಳ(Wildlife Photographer (WPY)) ಪ್ರದರ್ಶನದಲ್ಲಿ ಬೆಂಗಳೂರು (Bengaluru) ಮೂಲದ ವಿಹಾನ್ ತಾಳ್ಯ ವಿಕಾಸ್‌ಗೆ ವನ್ಯಜೀವಿ ಛಾಯಾಗ್ರಾಹಕ ಪ್ರಶಸ್ತಿ ಲಭಿಸಿದೆ. ಜೇಡದ ಜೊತೆಗೆ ಕೃಷ್ಣನ ಕೆತ್ತನೆಯಿರುವ ಕಲ್ಲಿನ ಫೋಟೋ ಕ್ಲಿಕ್ಗೆ ಪ್ರಶಸ್ತಿ ಸಿಕ್ಕಿದೆ.
ಕರ್ನಾಟಕದ ನಲ್ಲೂರಿನ ಪಾರಂಪರಿಕ ಹುಣಸೆ ತೋಪಿನ ಬಳಿಯ ಪುರಾತನ ದೇವಸ್ಥಾನದ ಗೋಡೆ ಮೇಲೆ ಮರದ ಕಾಂಡದ ಜೇಡವು ತನ್ನ ಬೇಟೆ ತಪ್ಪಿಸಿಕೊಳ್ಳದಂತೆ ತಡೆಯುವ ಚಿತ್ರವನ್ನು ಸೆರೆ ಹಿಡಿದಿದ್ದ. ಹಾಗೇ ಕೃಷ್ಣನ ಕೆತ್ತನೆಯಿರುವ ಕಲ್ಲಿನ ಫೋಟೋ ಕ್ಲಿಕ್ಕಿಸಿದ್ದ. ಬಳಿಕ ಅದನ್ನು ವಿಹಾನ್ ತಾಳ್ಯ ವಿಕಾಸ್ ಲಂಡನ್‌ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನ ಅತ್ಯುತ್ತಮ ವನ್ಯಜೀವಿ ಛಾಯಾಗ್ರಹಣ ಪ್ರದರ್ಶನಕ್ಕೆ ಕಳುಹಿಸಿದ್ದರು. ಇದೀಗ ಆ ಛಾಯಾಚಿತ್ರಕ್ಕೆ 10 ವರ್ಷದೊಳಗಿನ ವಿಭಾಗದಲ್ಲಿ ಪ್ರಶಸ್ತಿ ದೊರೆತಿದೆ.
ಇನ್ನು ವನ್ಯಜೀವಿ ಛಾಯಾಗ್ರಹಣದಲ್ಲಿ ತಮ್ಮ ತಂದೆಯ ಉತ್ಸಾಹದಿಂದ ಸ್ಫೂರ್ತಿ ಪಡೆದ ವಿಹಾನ್ ಈ ಬಗ್ಗೆ ಪ್ರತಿಕ್ರಿಯಿಸಿ, ಇದು ನನಗೆ ತುಂಬಾ ಸಂತೋಷನ್ನುಂಟು ಮಾಡಿದ್ದು, ಈ ಪ್ರಶಸ್ತಿಯನ್ನು ಸ್ವೀಕರಿಸಲು ಉತ್ಸುಕನಾಗಿದ್ದೇನೆ. ನಾನು ಫೋಟೋಗ್ರಫಿ ಇಷ್ಟಪಡುತ್ತೇನೆ. ಏಕೆಂದರೆ ಇದು ನಮಗೆ ಸೃಜನಾತ್ಮಕವಾಗಿ ಯೋಚಿಸಲು ಮತ್ತು ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸಲು ಸಹಾಯಕವಾಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾನೆ.
ಲಂಡನ್‌ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಆಯೋಜಿಸುವ ಜಾಗತಿಕವಾಗಿ ಹೆಸರಾಂತ ಸ್ಪರ್ಧೆಯು ಪ್ರಪಂಚದಾದ್ಯಂತದ ಅತ್ಯುತ್ತಮ ವನ್ಯಜೀವಿ ಛಾಯಾಚಿತ್ರವನ್ನು ಪ್ರದರ್ಶಿಸುತ್ತದೆ. ಜಗತ್ತಿನಾದ್ಯಂತ ಅರ್ಧಕ್ಕಿಂತ ಹೆಚ್ಚು ದೇಶಗಳನ್ನು ಪ್ರತಿನಿಧಿಸುತ್ತದೆ. ಪ್ರತಿ ವರ್ಷ ಸ್ಪರ್ಧೆಗೆ ಸಾವಿರಾರು ಚಿತ್ರಗಳನ್ನು ಪಡೆಯುತ್ತದೆ. ಈ ಪೈಕಿ, ಕೇವಲ 100 ಚಿತ್ರಗಳನ್ನು ಗುರುತಿಸಿ ಅವುಗಳಲ್ಲಿ ಪ್ರಶಸ್ತಿಗಳಿಗಾಗಿ ಶಾರ್ಟ್‌ಲಿಸ್ಟ್ ಮಾಡುತ್ತದೆ. ಈ ವರ್ಷದ ಸ್ಪರ್ಧೆಗೆ 95 ದೇಶಗಳಿಂದ 50ಸಾವಿರ ಚಿತ್ರಗಳನ್ನು ಸ್ವೀಕರಿಸಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ