ಮೆಟ್ರೊ ಕಾಮಗಾರಿಗಾಗಿ ಮರ ಕಡಿತ; ಆಕ್ಷೇಪಣೆ ಸಲ್ಲಿಕೆಗೆ ಅಂತಿಮ ದಿನಾಂಕ ಮುಂದೂಡುವಂತೆ ಮನವಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 06, 2021 | 10:11 PM

BBMP: 1026 ಮರಗಳನ್ನು ಕಡಿಯಲು ಆಕ್ಷೇಪಣೆ ಸಲ್ಲಿಸಲು ಸದ್ಯ ನೀಡಿರುವ ಕೊನೆಯ ದಿನಾಂಕ ಮೇ 10ರೊಳಗೆ ಸಾರ್ವಜನಿಕರು ಅರಣ್ಯ ಇಲಾಖೆಯನ್ನು ಸಂಪರ್ಕಿಸಲು ತೊಡಕಾಗಲಿದೆ. ಈ ಕಾರಣಗಳಿಂದ ಆಕ್ಷೇಪಣೆ ಸಲ್ಲಿಸುವ ನಿಗದಿಪಡಿಸಿರುವ ಅಂತಿಮ ದಿನಾಂಕವನ್ನು ಮುಂದೂಡುವಂತೆ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ವಿನಂತಿಸಿದೆ.

ಮೆಟ್ರೊ ಕಾಮಗಾರಿಗಾಗಿ ಮರ ಕಡಿತ; ಆಕ್ಷೇಪಣೆ ಸಲ್ಲಿಕೆಗೆ ಅಂತಿಮ ದಿನಾಂಕ ಮುಂದೂಡುವಂತೆ ಮನವಿ
ನಮ್ಮ ಮೆಟ್ರೋ (ಸಾಂಕೇತಿಕ ಚಿತ್ರ)
Follow us on

ಬೆಂಗಳೂರು: ನಗರದ ಔಟರ್ ರಿಂಗ್ ರೋಡ್​ ಫೇಸ್ 2 ಮೆಟ್ರೊ ಲೈನ್​ನ ಸೆಂಟ್ರಲ್ ಸಿಲ್ಕ್ ಬೋರ್ಡ್​ನಿಂದ ಕೆ.ಆರ್.ಪುರಂಗೆ ಸಂಪರ್ಕಿಸಲಿರುವ ಮೆಟ್ರೊ ಕಾಮಗಾರಿಗಾಗಿ ಒಟ್ಟು 1026 ಮರಗಳನ್ನು ಕಡಿಯಲು ಸಾರ್ವಜನಿಕರ ಆಕ್ಷೇಪಣೆ ಇದ್ದಲ್ಲಿ ತಿಳಿಸುವಂತೆ ಕೋರಿ ಬೆಂಗಳೂರು ಮೆಟ್ರೊ ರೈಲ್ವೆ ಕಾರ್ಪೊರೇಶನ್​ ಲಿಮಿಟೆಡ್​ ಜಾಹೀರಾತು ನೀಡಿತ್ತು. ಆದರೆ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ ಮೇ 10 ಇದ್ದು, ಕೊರೊನಾ ಲಾಕ್​ಡೌನ್ ಇರುವ ಕಾರಣ ಈ ದಿನಾಂಕವನ್ನು ಮುಂದೂಡಬೇಕು. ಲಾಕ್​ಡೌನ್ ಪ್ರಹಸನ ಮುಗಿದ ನಂತರ ಮತ್ತೊಮ್ಮೆ ಆಕ್ಷೇಪಣೆ ಸಲ್ಲಿಸದಲು ಅನುವು ಮಾಡಿಕೊಡಬೇಕು ಎಂದು ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ಮಾಡಿದೆ.

ರಾಜ್ಯ ಮತ್ತು ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕು ಅತ್ಯಂತ ವೇಗವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಸೋಂಕು ಹರಡುವುದನ್ನು ತಡೆಯಲು ಕರ್ನಾಟಕ ಸರ್ಕಾರ ಈಗಾಗಲೇ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಅನಿವಾರ್ಯ ಮತ್ತು ಅಗತ್ಯ ಸೇವೆಗಳನ್ನು ಹೊರತುಪಡಿಸಿ ಮಿಕ್ಕ ಯಾವ ಕೆಲಸ ಕಾರ್ಯಗಳಿಗೂ ಮನೆಯಿಂದ ಹೊರಬಾರದಂತೆ ನಾಗರಿಕರಲ್ಲಿ ಮನವಿ ಮಾಡಿದೆ. ಈ ಕಾರಣದಿಂದ 1026 ಮರಗಳನ್ನು ಕಡಿಯಲು ಆಕ್ಷೇಪಣೆ ಸಲ್ಲಿಸಲು ಸದ್ಯ ನೀಡಿರುವ ಕೊನೆಯ ದಿನಾಂಕ ಮೇ 10ರೊಳಗೆ ಸಾರ್ವಜನಿಕರು ಅರಣ್ಯ ಇಲಾಖೆಯನ್ನು ಸಂಪರ್ಕಿಸಲು ತೊಡಕಾಗಲಿದೆ. ಈ ಕಾರಣಗಳಿಂದ ಆಕ್ಷೇಪಣೆ ಸಲ್ಲಿಸುವ ನಿಗದಿಪಡಿಸಿರುವ ಅಂತಿಮ ದಿನಾಂಕವನ್ನು ಮುಂದೂಡುವಂತೆ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ವಿನಂತಿಸಿದೆ.

ಔಟರ್ ರಿಂಗ್ ರೋಡ್ ಫೇಸ್ 2 ವಿವರಗಳು
ಬೆಂಗಳುರಿನ ಔಟರ್ ರಿಂಗ್ ರೋಡ್​ನ ಫೇಸ್ 2 ಹಂತದ ಮೆಟ್ರೊ ಲೈನ್ ಸೆಂಟ್ರಲ್ ಸಿಲ್ಕ್ ಬೋರ್ಡ್​ನಿಂದ ಕೆ.ಆರ್.ಪುರಂಗೆ ಸಂಪರ್ಕ ಕಲ್ಪಿಸಲಿದೆ. ಈ ಮಾರ್ಗದಲ್ಲಿ ಕೆ.ಆರ್.ಪುರಂ, ಮಹದೇವಪುರ, ಡಿಆರ್​ಡಿಒ ಸ್ಪೋರಟ್​ ಕಾಂಪ್ಲೆಕ್ಸ್, ದೊಡ್ಡನಕುಂಡಿ, ಇಸ್ರೋ, ಮಾರತಹಳ್ಳಿ, ಎಚ್​ಎಸ್​ಆರ್ ಲೇಔಟ್, ಬೆಳ್ಳಂದೂರ್ ಮತ್ತು ಕೆಲವು ನಿಲ್ದಾಣಗಳು ಸೇರಿ ಒಟ್ಟು 13 ನಿಲ್ದಾಣಗಳು ಸಿಗಲಿವೆ. ಕಾಮಗಾರಿ ಮುಗಿಸಲು ಎರಡು ವರ್ಷಗಳ ಗಡುವು ಹೊಂದಿರುವ ಔಟರ್ ರಿಂಗ್ ರೋಡ್​ನ ಫೇಸ್ 2 ಮೆಟ್ರೊ ಕಾಮಗಾರಿಗಾಗಿ 1026 ಮರಗಳನ್ನು ಕಡಿಯಲು ಅನುಮತಿ ಕೋರಿ ಈಗಾಗಲೇ ಮನವಿ ಸಲ್ಲಿಸಲಾಗಿತ್ತು.

ಸಿಲ್ವರ್ ಓಕ್, ಮಹಾಗನಿ, ಅಕೇಶಿಯಾ ಮತ್ತು ತೆಂಗು ಸೇರಿದಂತೆ ಅತ್ಯಂತ ಮಹತ್ವದ ಜಾತಿಯ ಮರಗಳು ಈ 1026 ಮರಗಳ ಪಟ್ಟಿಯಲ್ಲಿವೆ.

ಇಂದಿನ ಕೊರೊನಾ ಸೋಂಕಿತರೆಷ್ಟು?
ಕರ್ನಾಟಕದಲ್ಲಿ ಇಂದು ಒಂದೇ ದಿನ 49,058 ಜನರಲ್ಲಿ ಸೋಂಕು ಪತ್ತೆಯಾಗಿದ್ದು, 328 ಜನರು ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 17,90,104ಕ್ಕೇರಿಕೆಯಾಗಿದೆ. ರಾಜಧಾನಿ ಬೆಂಗಳೂರು ನಗರವೊಂದರಲ್ಲೇ ಒಟ್ಟು 23,706 ಜನರಲ್ಲಿ ಇಂದು ಸೋಂಕು ಕಾಣಿಸಿಕೊಂಡಿದ್ದು 139 ಜನರ ಬಲಿಯಾಗಿದ್ದಾರೆ.

ರಾಜ್ಯದಲ್ಲಿ ಇಂದು ಒಂದೇ ದಿನ ಕೊರೊನಾ ಸೋಂಕಿತರ ಪೈಕಿ 12,55,797 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಮೃತಪಟ್ಟವರನ್ನೂ ಸೇರಿಸಿ ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 17,212 ಜನರ ಸಾವನ್ನಪ್ಪಿದ್ದು, 5,17,075 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಬೆಂಗಳೂರಲ್ಲಿ ಇಂದು ಪತ್ತೆಯಾದ ಸೋಂಕಿತರನ್ನೂ ಸೇರಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 8,87,086ಕ್ಕೇರಿಕೆಯಾಗಿದೆ. ಈ ಪೈಕಿ 5,47,208 ಜನರು ಈಗಾಗಲೇ ಗುಣಮುಖರಾಗಿದ್ದಾರೆ. ಬೆಂಗಳೂರಲ್ಲಿ ಕೊರೊನಾದಿಂದ ಈವರೆಗೆ 7,145 ಜನರ ಸಾವನ್ನಪ್ಪಿದ್ದು, 3,32,732 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಮಕ್ಕಳಿಗೆ ಅಪಾಯ ಎಂಬ ಆತಂಕವಿರುವ ಕೊವಿಡ್ 3ನೇ ಅಲೆಯನ್ನು ಹೇಗೆ ನಿಭಾಯಿಸ್ತೀರಿ? ಭಾರತ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ

ಕರ್ನಾಟಕಕ್ಕೆ 1200 ಮೆಟ್ರಿಕ್ ಟನ್ ಆಕ್ಸಿಜನ್​ ಪೂರೈಸಬೇಕೆಂಬ ಹೈಕೋರ್ಟ್​ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೊರೆ ಹೋದ ಭಾರತ ಸರ್ಕಾರ

(1026 trees are chopped for Metro construction environmentalist demands re issue notice after lockdown in Bengaluru)