
ಬೆಂಗಳೂರು: ಕರ್ನಾಟಕ ಹಲವು ಜಿಲ್ಲೆಗಳಲ್ಲಿ ‘108 ಆಂಬುಲೆನ್ಸ್’ ಸೇವೆ ಸ್ಥಗಿತಗೊಂಡಿದೆ. ತಾಂತ್ರಿಕ ಕಾರಣಗಳಿಂದಾಗಿ ಸೇವೆಯು ಸ್ಥಗಿತಗೊಂಡಿದೆ. ಕಂಟ್ರೋಲ್ ರೂಮ್ನ ಸಾಫ್ಟ್ವೇರ್ ಹಾಗೂ ಹಾರ್ಡ್ವೇರ್ ಸರಿಪಡಿಸಿದ ನಂತರ ಆಂಬುಲೆನ್ಸ್ ಸೇವೆ ಮರುಸ್ಥಾಪಿಸಲಾಗುವುದು ಎಂದು ಆರೋಗ್ಯ ಸಚಿವ ಡಾ ಕೆ.ಸುಧಾಕರ್ (Health Minister Dr K Sudhakar) ಹೇಳಿದರು. ಏಕಾಏಕಿ ಉದ್ಭವಿಸಿರುವ ಈ ಪರಿಸ್ಥಿತಿಗೆ ತಾಂತ್ರಿಕ ಸಮಸ್ಯೆಯೇ ಮುಖ್ಯ ಕಾರಣ. ಸಾಫ್ಟ್ವೇರ್ನ ಮದರ್ಬೋರ್ಡ್ ಹಾಳಾಗಿದ್ದು, ಅದರ ಬಿಡಿಭಾಗ ಎಲ್ಲಿಯೂ ಸಿಗುತ್ತಿಲ್ಲ ಎಂದು ಅವರು ವಿವರಿಸಿದರು.
ಈ ಸಾಫ್ಟ್ವೇರ್ ರೂಪುಗೊಂಡಿದ್ದು 2008ರಲ್ಲಿ. ಸರ್ವೀಸಸ್ನಲ್ಲಿ ಬಳಸಿದ ಬೋರ್ಡ್ ಸರಿಪಡಿಸಲು ಇನ್ನೂ ಎರಡುಮೂರು ದಿನ ಬೇಕಾಗಬಹುದು. ಅದನ್ನು ತರಿಸಲು ಕ್ರಮವಹಿಸಿದ್ದೇವೆ. ಸದ್ಯಕ್ಕೆ ಕಾಲ್ಸೆಂಟರ್ ಮೂಲಕ ಕರೆಗಳನ್ನು ಸ್ವೀಕರಿಸಲು ಕ್ರಮ ತೆಗೆದುಕೊಂಡಿದ್ದೇವೆ. ರೋಗಿಗಳ ಸಂಬಂಧಿಕರ ಫೋನ್ ಕರೆಗಳನ್ನು ಸ್ವೀಕರಿಸಲಾಗುತ್ತಿದೆ. ಸಪೋರ್ಟ್ಗಾಗಿ ಸದ್ಯ ಎಚ್ಪಿ ಕಂಪನಿಯ ಎಂಜಿನಿಯರ್ಗಳನ್ನು ಭೇಟಿ ಮಾಡಿ, ಈ ಬಗ್ಗೆ ಮಾಹಿತಿ ಪಡೆಯಲಾಗಿದೆ. ಅವರ ನೆರವು ಪಡೆಯಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.
108 ಆಂಬುಲೆನ್ಸ್ ವ್ಯವಸ್ಥೆಯು ತುರ್ತುಸೇವೆಯಾಗುತ್ತದೆ. ಶೀಘ್ರ ಸೇವೆಯ ಮರುಸ್ಥಾಪನೆಗೆ ಕ್ರಮತೆಗೆದುಕೊಂಡಿದ್ದೇವೆ. ಸಂಬಂಧಿಸಿದ ತಂತ್ರಜ್ಞರೊಂದಿಗೆ ಅಧಿಕಾರಿಗಳು ಸಭೆ ನಡೆಸಿ ಶೀಘ್ರ ನಮಗೆ ಮಾಹಿತಿ ನೀಡಲಿದ್ದಾರೆ. ಕಾಲ್ ಸೆಂಟರ್ಗೆ ಸ್ವತಃ ನಾನೇ ಹೋಗುತ್ತಿದ್ದೇನೆ. ನಮ್ಮ ಎಂಜಿನಿಯರ್ ಜೊತೆಗೆ ಮಾತನಾಡಿ, ಮಧ್ಯಾಹ್ನದ ಒಳಗೆ ವ್ಯವಸ್ಥೆ ಸರಿಪಡಿಸಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.
108 ಹಾಗೂ 112 ಕಾಲ್ ಸೆಂಟರ್ ಗಳಲ್ಲಿ ಅಧಿಕ ಕರೆ ಸ್ವೀಕರಿಸಲು ಅನುಕೂಲವಾಗುವಂತೆ ಪ್ರಸ್ತುತ ಇರುವ ಸಿಬ್ಬಂದಿಗಳ ಜೊತೆಗೆ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಅಂಬ್ಯುಲೆನ್ಸ್ ಡ್ರೈವರ್ ಗಳಿಗೆ ತಮ್ಮ ಮೊಬೈಲ್ ಮೂಲಕ ಆಸ್ಪತ್ರೆಗಳಿಂದ ನೇರವಾಗಿ ಕರೆಗಳನ್ನು ಸ್ವೀಕರಿಸಲು ಸಹ ಸೂಚನೆ ನೀಡಲಾಗಿದೆ.
3/4
— Dr Sudhakar K (@mla_sudhakar) September 25, 2022
ಸರ್ವರ್ನ ಮದರ್ಬೋರ್ಡ್ ಹಾಳಾಗಿರುವ ಕಾರಣ ಜನರ ಕಾಲ್ಗೆ ಸ್ಪಂದನೆ ಸಿಗಲು ಸರಾಸರಿ 8 ನಿಮಿಷ ಬೇಕಾಗುತ್ತಿದೆ. ಜನರು ಕಾದುಕಾದು ಬೇಸರಗೊಂಡಿದ್ದಾರೆ. ಪ್ರತಿದಿನ 7ರಿಂದ 8 ಸಾವಿರದಷ್ಟು ಕಾಲ್ ರಿಸೀವ್ ಮಾಡುತ್ತೇವೆ. ಆದರೆ ತಾಂತ್ರಿಕ ದೋಷದಿಂದಾಗಿ ಕೇವಲ 2ರಿಂದ 2,500 ದಷ್ಟು ಜನರಿಗೆ ಮಾತ್ರ ಸೌಲಭ್ಯ ಒದಗಿಸಲಾಗುತ್ತಿದೆ. ಬಾಕಿ 5 ಸಾವಿರ ಕರೆಗಳನ್ನು ಸ್ವೀಕರಿಸಲು ಆಗುತ್ತಿಲ್ಲ ಎಂದು ಹೇಳಿದರು.