108 ಡೆಡ್: ಕರ್ನಾಟಕದಲ್ಲಿ 108 ಸೇವೆ ಹಠಾತ್ ಸ್ಥಗಿತ; ತಕ್ಷಣ ಗಮನ ಹರಿಸಲು ಆರೋಗ್ಯ ಸಚಿವರಿಗೆ ಸಿಎಂ ಬೊಮ್ಮಾಯಿ ಸೂಚನೆ
‘108 ಌಂಬುಲೆನ್ಸ್’ ಸೇವೆ ಸ್ಥಗಿತದ ಬಗ್ಗೆ ಮಾಹಿತಿ ಪಡೆಯುವೆ. ಕೂಡಲೇ ‘108 ಌಂಬುಲೆನ್ಸ್’ ಸೇವೆ ಆರಂಭಿಸಲು ಆರೋಗ್ಯ & ಕುಟುಂಬ ಕಲ್ಯಾಣ ಸಚಿವರಿಗೆ ಸೂಚಿಸುವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಹಲವೆಡೆ 108 ಆ್ಯಂಬುಲೆನ್ಸ್ಗಳ ಸೇವೆಯಲ್ಲಿ(108 Ambulance Service) ಸಮಸ್ಯೆ ಎದುರಾಗಿದೆ. ಯಾದಗಿರಿ, ವಿಜಯಪುರ, ಚಿತ್ರದುರ್ಗ, ಹಾವೇರಿ, ದಾವಣಗೆರೆ, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಳೆದ ಎರಡು ದಿನದಿಂದ 108 ಆ್ಯಂಬುಲೆನ್ಸ್ ಸೇವೆಗೆ ಎಷ್ಟೇ ಕರೆ ಮಾಡಿದರೂ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. 10 ಬಾರಿ ಕರೆ ಮಾಡಿದರೆ ಒಮ್ಮೆ ಕರೆ ಸ್ವೀಕರಿಸುತ್ತಾರೆ. ಇದರಿಂದ ತೀರ ಎಮರ್ಜೆನ್ಸಿ ಇರುವ ರೋಗಿಗಳಿಗೆ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವುದು ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಹೀಗಾಗಿ ಈ ಬಗ್ಗೆ ಟಿವಿ9 ರಿಯಾಲಿಟಿ ಚೆಕ್ ಮಾಡಿದ್ದು ಸತ್ಯ ಬಯಲಾಗಿದೆ.
108 ಕಾಲ್ ಸೆಂಟರ್ಗೆ ಪ್ರತಿದಿನ ಒಂಬತ್ತರಿಂದ ಹತ್ತು ಸಾವಿರ ಕರೆಗಳು ಬರುತ್ತವೆ. ಆದರೆ ಎರಡರಿಂದ ಮೂರು ಸಾವಿರ ಕರೆಗಳನ್ನು ಮಾತ್ರ ಸ್ವೀಕರಿಸಲಾಗುತ್ತಿದೆ. ಕಳೆದ ಎರಡು ದಿನಗಳಿಂದ ರೋಗಿಗಳ ಪರದಾಟ ಹೆಚ್ಚಾಗಿದೆ. ಹೀಗಾಗಿ ರೋಗಿಗಳು ಖಾಸಗಿ ಆ್ಯಂಬುಲೆನ್ಸ್ ಗಳ ಮೊರೆ ಹೋಗುತ್ತಿದ್ದಾರೆ. ಅಲ್ಲದೆ ಖಾಸಗಿ ಆ್ಯಂಬುಲೆನ್ಸ್ ಸಿಬ್ಬಂದಿ ಬೇಕಾಬಿಟ್ಟಿಯಾಗಿ ಹಣ ಕೇಳುತ್ತಿದ್ದಾರೆ. ಇನ್ನು 108 ಆ್ಯಂಬುಲೆನ್ಸ್ ಕಾಲ್ ಮಾಡಿದ್ರೆ ಕಾಲ್ ಪಿಕ್ ಮಾಡ್ತಿಲ್ಲ ಎಂಬ ಪ್ರಶ್ನೆಗೆ ರಾಜ್ಯ 108 ಮುಖ್ಯಸ್ಥ ಹನುಮಂತ ಜಿ.ಆರ್ ಮಾಹಿತಿ ನೀಡಿದ್ದು ತಾಂತ್ರಿಕ ಸಮಸ್ಯೆ ಇರೋದು ನಿಜಾ. ಕಳೆದ ಎರಡು ದಿನದಿಂದ ಸಮಸ್ಯೆ ಆಗ್ತಿದೆ. ಸಂಜೆ ವೇಳೆಗೆ ಎಲ್ಲಾ ಸರಿ ಆಗುತ್ತದೆ. ಮದರ್ ಬೋರ್ಡ್ ಪ್ರಾಬ್ಲಮ್ ಆಗಿದೆ. ಶನಿವಾರ, ಭಾನುವಾರ ಅಗಿರೋ ಕಾರಣ ಯಾರು ಟೆಕ್ನಿಕಲ್ ಎಕ್ಸ್ಪರ್ಟ್ ಗಳು ಸಿಗ್ತಿಲ್ಲ. ನಮ್ಮ ಇಂಜಿನಿಯರ್ಗಳು ಪ್ರಯತ್ನ ಮಾಡ್ತಿದ್ದಾರೆ ಸರಿ ಆಗುತ್ತದೆ. ಜನರು ಕರೆ ಮಾಡ್ತಿದ್ದಾರೆ ಆದರೆ ನಮ್ಮ ಕಾಲ್ ಸೆಂಟರ್ಗೆ ಕರೆಗಳು ಬರ್ತಿಲ್ಲ. ಸುಮಾರು ಏಳರಿಂದ ಎಂಟು ಸಾವಿರ ಕರೆಗಳು ನಮಗೆ ಮಿಸ್ ಆಗ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಕೂಡಲೇ ‘108 ಌಂಬುಲೆನ್ಸ್’ ಸೇವೆ ಆರಂಭಿಸಲು ಸೂಚಿಸುವೆ
‘108 ಌಂಬುಲೆನ್ಸ್’ ಸೇವೆ ಸ್ಥಗಿತದ ಬಗ್ಗೆ ಮಾಹಿತಿ ಪಡೆಯುವೆ. ಕೂಡಲೇ ‘108 ಌಂಬುಲೆನ್ಸ್’ ಸೇವೆ ಆರಂಭಿಸಲು ಆರೋಗ್ಯ & ಕುಟುಂಬ ಕಲ್ಯಾಣ ಸಚಿವರಿಗೆ ಸೂಚಿಸುವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈವರೆಗೂ ಚಿತ್ರದುರ್ಗ ಜಿಲ್ಲೆಯಲ್ಲಿ 108 ಸಮಸ್ಯೆ ಬಗ್ಗೆ ದೂರು ಬಂದಿಲ್ಲ
ಇನ್ನು ಚಿತ್ರದುರ್ಗದಲ್ಲೂ 108 ಆ್ಯಂಬುಲೆನ್ಸ್ ಸಂಪರ್ಕದಲ್ಲಿ ವ್ಯತ್ಯಯ ಸಂಬಂಧ 108ಗೆ ಕರೆ ಮಾಡಿದಾಗ ಕೆಲವೊಮ್ಮೆ ರಿಸೀವ್ ಮಾಡುತ್ತಾರೆ. ಹಲವು ಬಾರಿ ಕರೆ ಮಾಡಿದ್ರು ಸಿಬ್ಬಂದಿ ಕರೆ ಸ್ವೀಕರಿಸುತ್ತಿಲ್ಲ ಎಂದು ಜನರು ಹೇಳಿದ್ದಾರೆ. ಆದ್ರೆ ಈವರೆಗೂ ಜಿಲ್ಲೆಯಲ್ಲಿ 108 ಸಮಸ್ಯೆ ಬಗ್ಗೆ ದೂರು ಬಂದಿಲ್ಲ. ರೋಗಿಗಳಿಗೆ ಕರೆತರಲು ಆ್ಯಂಬುಲೆನ್ಸ್ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ತ್ರದುರ್ಗ ಡಿಹೆಚ್ಒ ಡಾ.ರಂಗನಾಥ್ ಮಾಹಿತಿ ನೀಡಿದ್ದಾರೆ.
ವಿಜಯಪುರ ಜಿಲ್ಲೆಯಲ್ಲೂ ಸಮಸ್ಯೆ, ತುರ್ತು ಸೇವೆಗೆ ಮತ್ತೊಂದು ನಂಬರ್
ಬೆಂಗಳೂರಿನಲ್ಲಿರುವ ಮೈನ್ ಸರ್ವರ್ ಸಮಸ್ಯೆಯಿಂದ ಇಡೀ ರಾಜ್ಯದಲ್ಲಿ ಸಮ್ಯಸ್ಯೆ ಕಂಡು ಬಂದಿದೆ. ಇಂದು ಬೆಳಿಗ್ಗೆಯಿಂದ ವಿಜಯಪುರ ಜಿಲ್ಲೆಯಲ್ಲಿ 108 ಆ್ಯಂಬುಲೆನ್ಸ್ಗಳ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ ಸುರೇಶ ಚವ್ಹಾಣ್ ಮಾತನಾಡಿದ್ದು, ಬೆಂಗಳೂರಿನಲ್ಲಿರೋ ಮೇನ್ ಸರ್ವರ್ ಸಮಸ್ಯೆಯಾಗಿದೆ. ಇಂದು ಮಧ್ಯಹ್ನ 3 ಗಂಟೆ ಸುಮಾರಿಗೆ ಎಲ್ಲವೂ ಸರಿಯಾಗುತ್ತದೆ ಎಂದು ಹೇಳಿದ್ದಾರೆ. ಎಲ್ಲಾ ತಾಲೂಕಾ ವೈದ್ಯಾಧಿಕಾರಿಗಳು, ಮೆಡಿಕಲ್ ಆಫೀಸರ್ಸ್ ಮೂಲಕ ಅಂಬ್ಯುಲೆನ್ಸ್ ಕಳುಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಯಾರಿಗೂ ತೊಂದರೆಯಾಗದಂತೆ ಆ್ಯಂಬುಲೆನ್ಸ್ ಸೇವೆ ನೀಡಲಾಗುತ್ತಿದೆ. ತುರ್ತು ಸೇವೆಗೆ 9740376964 ಹಫೀಜ್ ಮುಲ್ಲಾ ಜಿಲ್ಲಾ ಆ್ಯಂಬುಲೆನ್ಸ್ ಜಿಲ್ಲಾ ವ್ಯವಸ್ಥಾಪಕ ಹಾಗೂ 945108774 ಡಾ ಸುರೇಶ ಚವ್ಹಾಣ್ ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಲು ಮನವಿ ಮಾಡಿದ್ದಾರೆ.
ಹಾವೇರಿಯ ಜಿಲ್ಲಾಸ್ಪತ್ರೆಯಿಂದ ಹೋಗುವ ರೋಗಿಗಳಿಗೆ ತೊಂದರೆ ಆಗದಂತೆ 108 ಸಿಬ್ಬಂದಿ ತಮ್ಮ ಫರ್ಸನಲ್ ನಂಬರ್ ಕೊಟ್ಟು ಕಳಿಸುತ್ತಿದ್ದಾರೆ.
Published On - 12:24 pm, Sun, 25 September 22