ಆನೇಕಲ್: ಕಲುಷಿತ ನೀರು ಕುಡಿದು ಅಪಾರ್ಟ್ಮೆಂಟ್ನ 127 ಜನ ಅಸ್ವಸ್ಥ; ಅವಘಡಕ್ಕೆ ಟ್ಯಾಂಕರ್ ನೀರು ಕಾರಣ
ಆನೇಕಲ್ನ ಮಹಾವೀರ್ ರಾಂಚಸ್ ಅಪಾರ್ಟ್ಮೆಂಟ್ನಲ್ಲಿ ಸೋಮವಾರ (ಜೂ.05) ಕಲುಷಿತ ನೀರು ಕುಡಿದು 88 ಮಕ್ಕಳು ಸೇರಿದಂತೆ ಕನಿಷ್ಠ 127 ನಿವಾಸಿಗಳು ಅಸ್ವಸ್ಥಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ಯಾಂಕರ್ ನೀರು ಸೇವನೆಯಿಂದ ಅಪಾರ್ಟ್‌ಮೆಂಟ್ ನಿವಾಸಿಗಳು ಅಸ್ವಸ್ಥರಾಗಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ: ಆನೇಕಲ್ನ (Anekal) ಮಹಾವೀರ್ ರಾಂಚಸ್ ಅಪಾರ್ಟ್ಮೆಂಟ್ನಲ್ಲಿ ಸೋಮವಾರ (ಜೂ.05) ಕಲುಷಿತ ನೀರು (Contaminated water) ಕುಡಿದು 88 ಮಕ್ಕಳು ಸೇರಿದಂತೆ ಕನಿಷ್ಠ 127 ನಿವಾಸಿಗಳು ಅಸ್ವಸ್ಥಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ಯಾಂಕರ್ ನೀರು ಸೇವನೆಯಿಂದ ಅಪಾರ್ಟ್‌ಮೆಂಟ್ ನಿವಾಸಿಗಳು ಅಸ್ವಸ್ಥರಾಗಿದ್ದಾರೆ. ವಾಂತಿ ಮತ್ತು ಬೇಧಿಯಿಂದ ಬಳಲುತ್ತಿದ್ದ ನಾಲ್ಕು ಮಕ್ಕಳನ್ನು ಮಂಗಳವಾರ (ಜೂ.06) ನಗರದ ಮದರ್‌ಹುಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಮಕ್ಕಳನ್ನು ಡಿಸ್ಚಾರ್ಜ್ ಮಾಡಲಾಗಿದ್ದು, ಇನ್ನಿಬ್ಬರನ್ನು ಶೀಘ್ರದಲ್ಲೇ ಡಿಸ್ಚಾರ್ಜ್ ಮಾಡಲಾಗುವುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಆನೇಕಲ್ನ ಹೊಸ ರಸ್ತೆಯಲ್ಲಿರುವ 1,000 ಫ್ಲ್ಯಾಟ್‌ಗಳನ್ನು ಹೊಂದಿರುವ ಮಹಾವೀರ್ ರಾಂಚಸ್ ಅಪಾರ್ಟ್‌ಮೆಂಟ್ ಸಮುಚ್ಚಯದ ನಿವಾಸಿಗಳು ಅನಾರೋಗ್ಯದ ಬಗ್ಗೆ ದೂರು ನೀಡಿದ್ದರು. ಈ ಹಿನ್ನೆಲೆ ಬಿಬಿಎಂಪಿ ಆರೋಗ್ಯ ಇಲಾಖೆಯ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಲಾಯ್ತು ಎಂದರು.
ಬಿಬಿಎಂಪಿ ಅಧಿಕಾರಿಗಳ ಪ್ರಕಾರ, ಅಪಾರ್ಟ್‌ಮೆಂಟ್ ನಿರ್ಮಾಣ ಹಂತದಲ್ಲಿದ್ದು ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಬಿಲ್ಡರ್ ಮತ್ತು ಅಪಾರ್ಟ್ಮೆಂಟ್ ಮಾಲೀಕರ ನಡುವೆ ವಿವಾದಗಳಿವೆ. ಅಪಾರ್ಟ್‌ಮೆಂಟ್‌ಗೆ ಖಾಸಗಿ ಟ್ಯಾಂಕರ್‌ಗಳ ಜೊತೆಗೆ ನಾಲ್ಕು ಬೋರ್‌ವೆಲ್‌ಗಳ ನೀರು ಕೂಡ ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಇದನ್ನೂ ಓದಿ: Koppal: ಬಸರಿಹಾಳ ಗ್ರಾಮದ ಹೊನ್ನಮ್ಮ ಸಾವಿಗೆ ಕಲುಷಿತ ನೀರು ಕಾರಣವಲ್ಲ -ಡಿಹೆಚ್ಓ ಸ್ಪಷ್ಟನೆ
ಆವರಣದಲ್ಲಿರುವ ನಾಲ್ಕು ಕೊಳವೆಬಾವಿಗಳ ಮೂಲಕ ನೀರು ಪಡೆಯುತ್ತಿದ್ದಾರೆ. ಈ ನೀರನ್ನು ಕುಡಿಯಲು ಮತ್ತು ಇತರ ಉದ್ದೇಶಗಳಿಗೆ ಬಳಸಲಾಗುತ್ತಿದೆ. ಬೋರ್‌ವೆಲ್ ನೀರಿನ ಕೊರತೆಯಾದರೆ ಇಲ್ಲಿನ ನಿವಾಸಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಜೂನ್ 5 ರಂದು (ಸೋಮವಾರ) ನಿವಾಸಿಗಳಿಗೆ ಟ್ಯಾಂಕರ್ ನೀರು ಸರಬರಾಜು ಮಾಡಲಾಗಿತ್ತು. ನಂತರ ರಾತ್ರಿ ಹಲವಾರು ಜನರು ವಾಂತಿ ಮತ್ತು ಭೇದಿಯಿಂದ ಬಳಲಿದರು ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಎ.ಎಸ್.ಬಾಲಸುಂದರ್ ಹೇಳಿದರು.
ಜೂನ್ 6 ರ ಬೆಳಿಗ್ಗೆ, ಕೆಲವು ಮಕ್ಕಳಿಗೆ ವಾಂತಿ ಮತ್ತು ಭೇದಿ ಶುರುವಾಗಿದೆ. ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಸ್ಥಳಕ್ಕೆ ಧಾವಿಸಿದೆವು. 88 ಮಕ್ಕಳು ಮತ್ತು 39 ವಯಸ್ಕರು ಸೇರಿದಂತೆ 120 ಕ್ಕೂ ಹೆಚ್ಚು ನಿವಾಸಿಗಳು ಬಾಧಿತರಾಗಿದ್ದಾರೆ. ಈ ಪೈಕಿ ನಾಲ್ವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೂ.10 ರಂದು ಇಬ್ಬರನ್ನು ಡಿಸ್ಚಾರ್ಜ್ ಮಾಡಲಾಗಿದ್ದು, ಇನ್ನಿಬ್ಬರನ್ನು ಶೀಘ್ರದಲ್ಲೇ ಡಿಸ್ಚಾರ್ಜ್ ಮಾಡಲಾಗುವುದು ಎಂದು ಬಾಲಸುಂದರ್ ಹೇಳಿದ್ದಾರೆ.
ಈ ನಡುವೆ ಬಿಲ್ಡರ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಿಲ್ಲ ಎಂದು ಆರೋಪಿಸಿ ಬಿಬಿಎಂಪಿ ದೂರು ದಾಖಲಿಸಿದೆ. ಭಾರತೀಯ ದಂಡ ಸಂಹಿತೆಯ IPC ಸೆಕ್ಷನ್ 277, 338 ಮತ್ತು ಇತರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಒಂದು ತಿಂಗಳ ಅವಧಿಯಲ್ಲಿ ಕರ್ನಾಟಕದಲ್ಲಿ ನಡೆದ ನಾಲ್ಕನೇ ಘಟನೆ ಇದಾಗಿದೆ. ಮೇ 24 ರಂದು ರಾಯಚೂರು ಜಿಲ್ಲೆಯ ರೇಕಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಮೂರು ವರ್ಷದ ಮಗು ಸಾವನ್ನಪ್ಪಿದ್ದು, 26 ಜನರು ಅಸ್ವಸ್ಥರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಕೂಡಲೇ ಸೂಕ್ತ ಚಿಕಿತ್ಸೆಗೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಕೊಪ್ಪಳ ಜಿಲ್ಲೆಯಲ್ಲಿ ಗುರುವಾರ ಒಂಬತ್ತು ವರ್ಷದ ಬಾಲಕಿಯೊಬ್ಬಳು ಕಲುಷಿತ ನೀರು ಕುಡಿದು ವಾಂತಿ ಭೇದಿಯಾಗಿ ಆಸ್ಪತ್ರೆಗೆ ದಾಖಲಾದ ಬಳಿಕ ಮೃತಪಟ್ಟಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ 5 ರಂದು ಜಿಲ್ಲೆಯ ಬಸರಿಹಾಳ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಒಂಬತ್ತು ತಿಂಗಳ ಹಸುಳೆ ಹಾಗೂ 60 ವರ್ಷದ ಮಹಿಳೆ ಮೃತಪಟ್ಟಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ