ಇಂದು ಬೆಂಗಳೂರಿನಲ್ಲಿ ಶಕ್ತಿ ಯೋಜನೆಗೆ ಚಾಲನೆ: ಸಂಚಾರ ಮಾರ್ಗದಲ್ಲಿ ಬದಲಾವಣೆ
ವಿಧಾನಸೌಧದ ಮುಂದೆ ನಾಳೆ ಶಕ್ತಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಹೀಗಾಗಿ ಅಂಬೇಡ್ಕರ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.
ಬೆಂಗಳೂರು: ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸುವ ಅವಕಾಶವನ್ನು ನೀಡುವ ಶಕ್ತಿ ಯೋಜನೆಗೆ (Shakti Scheme) ಇಂದು (ಜೂನ್ 11) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ವಿಧಾನಸೌಧದ ಮುಂದೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಗೊಂಡರೆ ಸಂಚಾರ ದಟ್ಟಣೆಯಾಗಬಹುದು. ಹೀಗಾಗಿ ವಾಹನ ಸವಾರರ ಸುಗಮ ಸಂಚಾರಕ್ಕೆ ಪರ್ಯಾಯ ಮಾರ್ಗವನ್ನು ಪೊಲೀಸ್ ಇಲಾಖೆ ಸೂಚಿಸಿದೆ.
ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಮುಂಭಾಗದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅಂಬೇಡ್ಕರ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾದರೆ ಕೆ.ಆರ್.ಸರ್ಕಲ್ ಕಡೆಯಿಂದ ಬಾಳೆಕುಂದ್ರಿ ಸರ್ಕಲ್ ಕಡೆಗೆ ತೆರಳುವ ವಾಹನ ನೃಪತುಂಗ ರಸ್ತೆ ಮಾರ್ಗವಾಗಿ ಸಂಚರಿಸಬಹುದು. ಬಾಳೇಕುಂದ್ರಿ ಸರ್ಕಲ್ನಿಂದ ಕೆ.ಆರ್.ಸರ್ಕಲ್ ರಸ್ತೆಕಡೆಗೆ ಹೋಗುವ ಸವಾರರು ಕ್ವೀನ್ಸ್ ರಸ್ತೆ ಸಿದ್ದಲಿಂಗಯ್ಯ ರಸ್ತೆ ಮೂಲಕ ಸಂಚರಿಸಬಹುದು. ಸಿಟಿಓ ವೃತ್ತದಿಂದ ಬರುವ ಸವಾರರಿಗೆ ಪೊಲೀಸ್ ತಿಮ್ಮಯ್ಯ ಸರ್ಕಲ್ನಲ್ಲಿ ಎಡ ತಿರುವು ನಿಷೇಧ ಇದ್ದು, ರಾಜಭವನ ರಸ್ತೆ ಮೂಲಕ ಸಂಚರಿಸಲು ಅವಕಾಶ ಇದೆ.
ಇದನ್ನೂ ಓದಿ: Power tariff hike: ವಿದ್ಯುತ್ ದರ ಹೆಚ್ಚಿಸಿದ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಧಾರವಾಡ ಮಹಿಳೆಯರ ಆಕ್ರೋಶ!
ಕಾಂಗ್ರೆಸ್ನ ಐದು ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಗೆ ವಿಧಾನಸೌಧದ ಗ್ರ್ಯಾಂಡ್ ಸ್ಟೇಪ್ಸ್ ಮುಂಭಾಗದಲ್ಲಿ ಚಾಲನೆ ನೀಡಲಾಗುತ್ತಿದೆ. ಈ ಯೋಜನೆ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತದೆ. ಕಾರ್ಯಕ್ರಮಕ್ಕೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಅವರಿಗೂ ಆಹ್ವಾನ ನೀಡಲಾಗಿದೆ. ಆದರೆ ಕಾರ್ಯಕ್ರಮಕ್ಕೆ ಆಗಮಿಸುವುದು ಬಹುತೇಕ ಅನುಮಾನವಾಗಿದೆ.
ವಿಧಾನ ಸೌಧದ ಮುಂಭಾಗ 4 ನಿಗಮದ (BMTC, KSRTC, NWKRTC, KKRTC) ಸಾಮಾನ್ಯ ಬಸ್ ನಿಲ್ಲಿಸಲು ಫ್ಲಾನ್ ಮಾಡಲಾಗಿದೆ. ನಾಡಗೀತೆ ಹಾಡುವ ಮೂಲಕ ಚಾಲನೆಗೊಳ್ಳುವ ಈ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಶಕ್ತಿ ಯೋಜನೆ ಲೋಗೋ ಅನಾವರಣಗೊಳಿಸಲಿದ್ದಾರೆ. ನಂತರ ಸಿದ್ದರಾಮಯ್ಯ ಅವರು ಬಸ್ನಲ್ಲೇ ಸಿಟಿ ರೌಂಡ್ಸ್ ಹಾಕಲಿದ್ದಾರೆ. ವಿಧಾನ ಸೌಧ ಒಂದು ರೌಂಡ್, ಮೆಜೆಸ್ಟಿಕ್ ಅಥವಾ ಮೈಸೂರು ಬ್ಯಾಂಕ್ ಸರ್ಕಲ್ ವರೆಗೆ ಬಿಎಂಟಿಸಿಯಲ್ಲಿ ಒಂದು ರೌಂಡ್ ಹೋಗಲಿದ್ದಾರೆ.
ವಿಧಾನಸೌಧದಲ್ಲಿ ಶಕ್ತಿ ಯೋಜನೆಗೆ ಚಾಲನೆ ದೊರೆಯುತ್ತಿದ್ದಂತೆ ಎಲ್ಲ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಶಕ್ತಿ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತೆ. ಅಲ್ಲಿನ ಸ್ಥಳೀಯ ಶಾಸಕರು ಅಥವಾ ಜನಪ್ರತಿನಿಧಿಗಳಿಂದ ಶಕ್ತಿ ಯೋಜನೆಗೆ ಚಾಲನೆ ನೀಡಲಾಗುತ್ತೆ. ಮಧ್ಯಾಹ್ನ 1 ಗಂಟೆಯ ನಂತ್ರ ಬಿಎಂಟಿಸಿ, ಕೆಎಸ್ಆರ್ಟಿಸಿ, ಎನ್ ಡಬ್ಲ್ಯೂಆರ್ಟಿಸಿ, ಕೆಕೆಆರ್ಟಿಸಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:03 pm, Sat, 10 June 23