ಟ್ರಾಫಿಕ್ ರೂಲ್ಸ್​ ಉಲ್ಲಂಘನೆ: ದಂಡಕ್ಕೆ 50% ಡಿಸ್ಕೌಂಟ್, 8 ದಿನದಲ್ಲಿ 85‌.83 ಕೋಟಿ ರೂ.‌ ಹಣ ಸಂಗ್ರಹ

ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ದಂಡ ಪಾವತಿಸುವವರಿಗೆ ಶೇ. 50 ರಿಯಾಯಿತಿ ನೀಡಿದ್ದರಿಂದ ಭರ್ಜರಿ ಹಣ ಕಲೆಕ್ಷನ್ ಆಗುತ್ತಿದೆ. 8ನೇ ದಿನವೂ ಸಹ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ಹಣ ಹರಿದು ಬಂದಿದೆ.

ಟ್ರಾಫಿಕ್ ರೂಲ್ಸ್​ ಉಲ್ಲಂಘನೆ: ದಂಡಕ್ಕೆ 50% ಡಿಸ್ಕೌಂಟ್, 8 ದಿನದಲ್ಲಿ 85‌.83 ಕೋಟಿ ರೂ.‌ ಹಣ ಸಂಗ್ರಹ
Edited By:

Updated on: Feb 10, 2023 | 10:08 PM

ಬೆಂಗಳೂರು: ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ (Bengaluru Traffic Fines) ಪ್ರಕರಣಗಳಿಗೆ ಸಂಬಂಧಿಸಿದಂತೆ ದಂಡ ಪಾವತಿಸುವವರಿಗೆ ಶೇ. 50 ವಿನಾಯಿತಿ ಘೋಷಣೆ ಮಾಡಿದ ಬೆನ್ನಲ್ಲೇ ವಾಹನ ಸವಾರರು ದಂಡ ಪಾವತಿಸಲು ಮುಗಿಬಿದ್ದಿದ್ದಾರೆ. ಇಂದು (ಫೆಬ್ರವರಿ 10) 8ನೇ ದಿನವೂ ಸಹ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ಹಣ ಹರಿದು ಬಂದಿದೆ.

ಇದನ್ನೂ ಓದಿ: ತಮ್ಮ ದ್ವಿಚಕ್ರ ವಾಹನ ಮೌಲ್ಯದಷ್ಟೇ ಇದ್ದ ದಂಡವನ್ನು 50% ಆಫರ್​ನೊಂದಿಗೆ 14,500 ರೂ. ಪಾವತಿಸಿ ಕೇಸ್ ಕ್ಲಿಯರ್ ಮಾಡಿಕೊಂಡ ಮಹಾಶಯ

ಹೌದು…8ನೇ ದಿನವಾದ ಇಂದು 67, 0602 ಪ್ರಕರಣಗಳಲ್ಲಿ 17.61 ಕೋಟಿ‌ ರೂಪಾಯಿ ದಂಡದ ಹಣ ಸಂಗ್ರಹವಾಗಿದೆ. ಇದರೊಂದಿಗೆ 31.11 ಲಕ್ಷ ಪ್ರಕರಣಗಳಲ್ಲಿ 85‌.83 ಕೋಟಿ ರೂಪಾಯಿ ಹಣ ಕಲೆಕ್ಷನ್ ಆಗಿದೆ. 50% ರಿಯಾಯಿತಿಯಲ್ಲಿ ದಂಡ ಪಾವತಿಗೆ ನಾಳೆಯೇ (ಫೆಬ್ರವರಿ 11) ಕೊನೆಯ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಸಂಚಾರ ನಿಮಯ ಉಲ್ಲಂಘಿಸಿದ ವಾಹನ ಸವಾರರು ಕಳೆದ ಎರಡು ದಿನಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ದಂಡ ಪಾವತಿ ಮಾಡುತ್ತಿದ್ದಾರೆ. ನಾಳೆ ಕೊನೆ ದಿನವಾಗಿದ್ದರಿಂದ ದಂಡದ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

ಫೆ.11ರ ಒಳಗೆ ಪಾವತಿಸಿದರೇ ಶೇ.50 ವಿನಾಯಿತಿ

ಹೈಕೋರ್ಟ್ ನ್ಯಾಯಾಧೀಶರು ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ನ್ಯಾ.ಬಿ. ವೀರಪ್ಪ ಅವರ ಅಧ್ಯಕ್ಷತೆಯಲ್ಲಿ ಜ.27ರಂದು ನಡೆದ ಸಭೆಯಲ್ಲಿ ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಬಾಕಿ ಇರುವ ಟ್ರಾಫಿಕ್ ದಂಡ ಪಾವತಿಗೆ ವಿನಾಯಿತಿ ನೀಡುವಂತೆ ಚರ್ಚೆ ನಡೆಸಿದ್ದರು. ಇದಕ್ಕೆ ರಾಜ್ಯ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಅನುಮತಿ ನೀಡಿದ್ದರು. ಇದರ ಮೇರೆಗೆ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯಾದ್ಯಂತ ಸಂಚಾರ ಪೊಲೀಸರು ದಾಖಲಿಸಿರುವ ಸಂಚಾರ ಉಲ್ಲಂಘನೆ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50 ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಬಗ್ಗೆ ಕಾನೂನು ಇಲಾಖೆ ಅಧಿಕಾರಿಗಳ ಒಪ್ಪಿಗೆ ಪಡೆದ ಸಾರಿಗೆ ಇಲಾಖೆ, ಶೇ.50 ವಿನಾಯಿತಿ ನೀಡಿದೆ.