
ಬೆಂಗಳೂರು, ಅಕ್ಟೋಬರ್ 23: ಮಧ್ಯಪ್ರಾಚ್ಯದಲ್ಲಿ ಮತ್ತೆ ಸಂಘರ್ಷ ಭೀತಿ ಎದುರಾಗಿದೆ. ಹೀಗಾಗಿ ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ. ಇದರಿಂದಾಗಿ ಕರ್ನಾಟಕ ಸೇರಿದಂತೆ 4 ಸಾವಿರ ಭಾರತೀಯ ಯಾತ್ರಾರ್ಥಿಗಳು ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಹೀಗಾಗಿ 600ಕ್ಕೂ ಹೆಚ್ಚು ಕರ್ನಾಟಕದ ಉಮ್ರಾ ಯಾತ್ರಿಕರನ್ನು ಸುರಕ್ಷಿತವಾಗಿ ಹಾಗೂ ಶೀಘ್ರವಾಗಿ ತಾಯ್ನಾಡಿಗೆ ಕರೆತರಲು ತುರ್ತು ಮಧ್ಯಪ್ರವೇಶ ಕೋರಿ ಕೇಂದ್ರ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ಗೆ ಸಿಎಂ ಡಿಕೆ ಶಿವಕುಮಾರ್ ಪತ್ರ ಬರೆದಿದ್ದಾರೆ.
ಕಳೆದ ಎರಡು-ಮೂರು ವಾರಗಳಿಂದ ಸೌದಿ ಅರೇಬಿಯಾದ ವಿವಿಧ ನಗರಗಳಲ್ಲಿ ಸುಮಾರು 4 ಸಾವಿರ ಭಾರತೀಯ ಉಮ್ರಾ ಯಾತ್ರಾರ್ಥಿಗಳು ಸಿಲುಕಿಕೊಂಡಿದ್ದು, ಅವರಲ್ಲಿ 600ಕ್ಕೂ ಹೆಚ್ಚು ಕನ್ನಡಿಗರಿದ್ದಾರೆ. ವಿಮಾನಯಾನ ಸೇವೆ ವ್ಯತ್ಯಯಗೊಂಡಿರುವುದರಿಂದ ಯಾತ್ರಾರ್ಥಿಗಳು ಭಾರತಕ್ಕೆ ಮರಳಲಾಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಬಗ್ಗೆ ಚಿಕ್ಕಮಗಳೂರಿನ ವ್ಯಕ್ತಿಯೊಬ್ಬರು ವಿಡಿಯೋ ಮೂಲಕ ನೆರವು ನೀಡುವಂತೆ ಮನವಿ ಮಾಡಿದ್ದಾರೆ.
‘ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಭದ್ರತಾ ಪರಿಸ್ಥಿತಿ ಕಳವಳಿ ತರಿಸಿದೆ. ಸೌದಿ ಅರೇಬಿಯಾದ ಮಕ್ಕಾ ಮತ್ತು ಮದೀನಾದಲ್ಲಿ ಸಿಲುಕಿಕೊಂಡಿರುವ ಕರ್ನಾಟಕದ 600ಕ್ಕೂ ಹೆಚ್ಚು ಉಮ್ರಾ ಯಾತ್ರಾರ್ಥಿಗಳಿಗೆ ಸಮಸ್ಯೆ ಆಗಿದೆ. ಈ ಕಠಿಣ ಪರಿಸ್ಥಿತಿಯನ್ನ ನಾನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಬೆಂಗಳೂರು ಹಾಗೂ ಭಾರತದ ಇತರೆ ಭಾಗಗಳಿಗೆ ತೆರಳಬೇಕಿದ್ದ ವಿಮಾನಯಾನ ಸೇವೆ ಸ್ಥಗಿತವಾಗಿದೆ. ಹೀಗಾಗಿ ಎಲ್ಲರೂ ಅಲ್ಲಿಯೇ ಉಳಿದುಕೊಳ್ಳುವಂತಾಗಿದೆ’ ಎಂದಿದ್ದಾರೆ ಸಿಎಂ ಡಿಕೆ ಶಿವಕುಮಾರ್.
‘ಇತ್ತೀಚೆಗೆ ಈ ಪವಿತ್ರ ನಗರಗಳಿಗೆ ಭೇಟಿ ನೀಡಿದ್ದ ಕರ್ನಾಟಕ ರಾಜ್ಯ ಹಜ್ ಸಮಿತಿಯ ಅಧ್ಯಕ್ಷರು ಮತ್ತು ಅವರ ತಂಡವೂ ಸಮಸ್ಯೆ ಅನುಭವಿಸಿದೆ. ವಿಮಾನ ಸೇವೆ ವ್ಯತ್ಯಯದಿಂದಾಗಿ ಅನೇಕ ಯಾತ್ರಾರ್ಥಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹಲವರು ಹಣಕಾಸಿನ ಸಮಸ್ಯೆಯುಂಟಾಗಿದೆ. ಊಟ ಮತ್ತು ವಸತಿಯಂತಹ ಮೂಲಭೂತ ಅಗತ್ಯಗಳ ಪೂರೈಕೆಗೆ ಪರದಾಡುತ್ತಿದ್ದಾರೆ. ಹೋಟೆಲ್‌ಗಳಲ್ಲಿ ರೂಮ್ ಖಾಲಿ ಮಾಡುವಂತೆ ಯಾತ್ರಾರ್ಥಿಗಳಿಗೆ ಸೂಚಿಸಲಾಗುತ್ತಿದೆ. ಇದರಿಂದಾಗಿ ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ಉಲ್ಲೇಖಿಸಿದ್ದಾರೆ.
‘ಭಾರತೀಯ ಮತ್ತು ಕರ್ನಾಟಕದ ಸ್ವಯಂಸೇವಾ ಸಂಸ್ಥೆಗಳು ನೀಡುತ್ತಿರುವ ತಾತ್ಕಾಲಿಕ ನೆರವು, ಸಂಕಷ್ಟದಲ್ಲಿರುವ ಎಲ್ಲರಿಗೂ ಸಾಕಾಗುತ್ತಿಲ್ಲ. ಈ ತುರ್ತುಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಜೆಡ್ಡಾದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಕಚೇರಿಯ ಅಧಿಕಾರಿಗಳು ಸೌದಿ ಅರೇಬಿಯಾದ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಬೇಕು. ವಿಮಾನ ಸಂಸ್ಥೆಗಳು ಮತ್ತು ಇತರೆ ಸಂಬಂಧಿತ ಏಜೆನ್ಸಿಗಳೊಂದಿಗೆ ಚರ್ಚಿಸಿ ಸಂಕಷ್ಟದಲ್ಲಿರುವ ಯಾತ್ರಾರ್ಥಿಗಳನ್ನ ಮರಳಿ ಕರೆತರಬೇಕು. ಅಗತ್ಯವಿರುವ ಕಡೆಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ವಿಶೇಷ ವಿಮಾನಗಳ ವ್ಯವಸ್ಥೆ ಮಾಡುವಂತೆ’ ಮನವಿ ಮಾಡಿದ್ದಾರೆ.
‘ಯಾತ್ರಾರ್ಥಿಗಳು ವಾಪಸಾಗುವವರೆಗೆ ಅವರಿಗೆ ಸೂಕ್ತವಾದ ತಾತ್ಕಾಲಿಕ ನೆರವು ದೊರೆಯುವಂತೆ ಖಚಿತಪಡಿಸಲು ಸಚಿವಾಲಯವು ಕ್ರಮಕೈಗೊಳ್ಳಬೇಕೆಂದು’ ಕೋರಿದ್ದಾರೆ. ‘ಸಂಕಷ್ಟಕ್ಕೀಡಾದ ಯಾತ್ರಾರ್ಥಿಗಳು ಸುರಕ್ಷಿತವಾಗಿ ಮತ್ತು ಶೀಘ್ರವಾಗಿ ಮರಳಲು ಅಗತ್ಯವಿರುವ ಎಲ್ಲ ಸಹಕಾರವನ್ನು ನೀಡಲು ಕರ್ನಾಟಕ ಸರ್ಕಾರ ಸಿದ್ಧವಾಗಿದೆ’ ಎಂದು ಸಿಎಂ ಡಿಕೆ ಶಿವಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಡಿಸಿಎಂ ಡಾ.ಜಿ.ಪರಮೇಶ್ವರ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಕರ್ನಾಟಕದಿಂದ ತೆರಳಿದ್ದ 600 ಯಾತ್ರಾರ್ಥಿಗಳು ವಿಮಾನಯಾನ ವ್ಯತ್ಯಯದಿಂದ ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿದ್ದಾರೆ. ಯಾತ್ರಾರ್ಥಿಗಳನ್ನ ಶೀಘ್ರ ಕರೆತರಲು ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಜೆಡ್ಡಾದ ಭಾರತೀಯ ಕಾನ್ಸುಲೇಟ್ ಜನರಲ್ ಕಚೇರಿ ಸಂಪರ್ಕದಲ್ಲಿದ್ದೇವೆ. ವಿಮಾನಯಾನ ಸಂಸ್ಥೆಗಳ ಜೊತೆ ಸಮನ್ವಯ ಸಾಧಿಸ್ತಿದ್ದೇವೆ. ಕನ್ನಡಿಗರು ಆತಂಕಗೊಳ್ಳದೆ ಶಾಂತವಾಗಿರಬೇಕು. ಭಾರತೀಯ ರಾಯಭಾರ ಕಚೇರಿ ಮಾರ್ಗಸೂಚಿ ಪಾಲಿಸುವಂತೆ ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.