ಬೆಂಗಳೂರು: ರಾತ್ರಿ 12:30 ರ ಸಮಯ ಬಡಾವಣೆಯ ಜನರೆಲ್ಲ ನಿದ್ದೆಗೆ ಜಾರಿದ್ರು, ಅದೇ ಸಮಯಕ್ಕೆ ಸರಿಯಾಗಿ ದೊಡ್ಡದಾಗಿ ಭೂಮಿ ಕಂಪಿಸಿದ ಶಬ್ದ. ಜನ ಬಾಂಬ್ ಸಿಡಿಯಿತೋ ಅಥವಾ ಭೂಕಂಪ ಆಯಿತೋ ಎಂದು ಗಾಬರಿಗೊಂಡು ತಮ್ಮ ಮನೆ ಬಾಗಿಲು, ಕಿಟಕಿ ಬಳಿ ಬಂದು ನೋಡಿದರೆ ಮುಖ್ಯರಸ್ತೆಯ ಬಿಲ್ಡಿಂಗ್ ಬಿದ್ದಿರೋದು ಗೊತ್ತಾಗಿದೆ. ಹೌದು ಆನೇಕಲ್ ತಾಲೂಕಿನ ಮುತ್ಯಾನಲ್ಲೂರು ಗ್ರಾಮದಲ್ಲಿ ನಡೆದ ಘಟನೆ ಇಡೀ ಬಡವಾಣೆಯ ಜನರನ್ನ ಆತಂಕಕ್ಕೀಡು ಮಾಡಿದೆ. ಹೌದು ಮುತ್ಯಾನಲ್ಲೂರು ಮುಖ್ಯ ರಸ್ತೆಯಲ್ಲಿರುವ ಅಂಗಡಿಯಲ್ಲಿ ಅಕ್ರಮವಾಗಿ ಹಾಗೂ ಅವೈಜ್ಞಾನಿಕವಾಗಿ ಗ್ಯಾಸ್ ರಿಪೇರಿ ಹಾಗೂ ರಿಫಿಲ್ಲಿಂಗ್ ಮಾಡಲಾಗುತ್ತಿತ್ತು. ಇದು ಎಷ್ಟು ಡೇಂಜರ್ ಎಂದು ಪರಿವೆ ಇಲ್ಲದ ಫೈಜುಲ್ ಎಂಬಾತ ಹಳೆಯ ಗ್ಯಾಸ್ ಸಿಲಿಂಡರ್ಗಳು ಹಾಗೂ ಲಿಕೇಜ್ ಗ್ಯಾಸ್ ಸಿಲಿಂಡರ್ಗಳನ್ನ ಶೇಖರಿಸಿಟ್ಟಿದ್ದ. ರಾತ್ರಿ 12:30 ಕ್ಕೆ ಗ್ಯಾಸ್ ಲೀಕ್ ಆಗಿ ಸಿಲಿಂಡರ್ ಸ್ಫೋಟಗೊಂಡಿದೆ.
ಹೌದು ರಾತ್ರಿ ಅಂಗಡಿಯಲ್ಲೇ ಮಲಗಿದ್ದ ಫೈಜುಲ್ಗೆ ಗಂಭೀರ ಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಫೋಟದ ತೀವ್ರತೆಗೆ ಇಡೀ ಕಟ್ಟಡದ ನಾಲ್ಕು ಅಂಗಡಿಯ ಚೇಂಬರ್ಗಳು ಕೂಡ ನೆಲಸಮವಾಗಿದ್ದು, ಸಧ್ಯ ಪ್ರಕರಣ ದಾಖಲಿಸಿಕೊಂಡಿರುವ ಸೂರ್ಯಸಿಟಿ ಪೊಲೀಸರು ಘಟನೆ ಬಗ್ಗೆ ಇನ್ನಷ್ಟು ಪರಿಶೀಲನೆ ಮಾಡುತ್ತಿದ್ದಾರೆ. ಇದೇ ಘಟನೆ ಬೆಳಿಗ್ಗೆ ಸಮಯದಲ್ಲಿ ನಡೆದಿದ್ದರೇ ಬಹಳಷ್ಟು ಸಾವು ನೋವುಗಳಾಗುವ ಸಂಭವವಿತ್ತು ಎನ್ನುವುದು ಸ್ಥಳೀಯರ ಮಾತು, ಅದೇನೆ ಇರಲಿ ಇಂತಹ ಅಕ್ರಮ ಗ್ಯಾಸ್ ಫಿಲ್ಲಿಂಗ್ ಸ್ಟೋರ್ಗಳ ಬಾಗಿಲು ಮುಚ್ಚಿಸಿ ಜನರ ಜೀವ ಉಳಿಸಿ ಅನ್ನೋದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ