ಬೆಂಗಳೂರು: ಬೆಂಗಳೂರು ಜಿಲ್ಲಾಧಿಕಾರಿ ಕಚೇರಿ ಮೇಲೆ ಎಸಿಬಿ ದಾಳಿ (ACB Raid) ಪ್ರಕರಣದಲ್ಲಿ ಜಿಲ್ಲಾಧಿಕಾರಿ ಮಂಜುನಾಥ್ (Manjunath) 2ನೇ ಬಾರಿ ವಿಚಾರಣೆಗೆ ಹಾಜರಾಗಿದ್ದಾರೆ. ಎಸಿಬಿಗೆ ಹೈಕೋರ್ಟ್ (High Court) ಚಾಟಿ ಬೀಸುತ್ತಿದ್ದಂತೆ ಪ್ರಕರಣಕ್ಕೆ ಚುರುಕು ಮುಟ್ಟಿದೆ. ಮೇ 21ರಂದು ಜಿಲ್ಲಾಧಿಕಾರಿ ಕಚೇರಿ ಮೇಲೆ ಎಸಿಬಿ ದಾಳಿ ನಡೆದಿದ್ದು, ಉಪ ತಹಶೀಲ್ದಾರ್ ಮಹೇಶ್, ಗುತ್ತಿಗೆ ನೌಕರ ಚೇತನ್ ಅವರನ್ನು ಬಂದಿಸಲಾಗಿತ್ತು. ದೂರುದಾರರಿಂದ 5 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ದಾಳಿ ನಡೆದಿದ್ದು ಡಿಸಿ ಮಂಜುನಾಥ್ ಪಾತ್ರದ ಕುರಿತು ಆರೋಪ ಕೇಳಿ ಬಂದಿತ್ತು. ಕಳೆದ ವಾರವಷ್ಟೇ ಡಿಸಿ ಮಂಜುನಾಥ್ ವಿಚಾರಣೆ ಮಾಡಲಾಗಿದ್ದು ಎರಡನೇ ಬಾರಿವಿಚಾರಣೆಗೆ ಹಾಜರಾಗುವಂತೆ ಎಸಿಬಿ ನೋಟಿಸ್ ಜಾರಿ ಮಾಡಿತ್ತು.
ಏನಿದು ಪ್ರಕರಣ?
ಅಜಂ ಪಾಷಾ ಎಂಬುವವರಿಂದ ಹಣಕ್ಕೆ ಬೇಡಿಕೆಯಿಟ್ಟ ಆರೋಪ ಮಂಜುನಾಥ್ ವಿರುದ್ಧ ಕೇಳಿ ಬಂದಿತ್ತು. ಆನೇಕಲ್ ತಾಲ್ಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನಿಗಾಗಿ ಗಲಾಟೆಯಾಗಿತ್ತು. ಜಮೀನು ಒಡೆತನಕ್ಕೆ ಸಂಬಂಧಿಸಿದ ವ್ಯಾಜ್ಯ ಡಿಸಿ ಕೋರ್ಟಿಗೆ ಬಂದಿತ್ತು. ಪರವಾಗಿ ಆದೇಶ ನೀಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದಾಗಿ ದೂರುದಾರ ಆರೋಪಿಸಿದ್ದರು. ಜಿಲ್ಲಾಧಿಕಾರಿ ಮಂಜುನಾಥ್ 5 ಲಕ್ಷ ಲಂಚ ಪಡೆದಿದ್ದಾರೆ ಎಂದು ಆರೋಪ ಕೇಳಿ ಬಂದಿದ್ದು ತನ್ನ ಅಧೀನ ಅಧಿಕಾರಿಯ ಮೂಲಕ ಹಣ ಪಡೆದಿದ್ದ ಆರೋಪಿಸಲಾಗಿತ್ತು.
ಮೇ 21ರಂದು ಡಿ.ಸಿ ಕಚೇರಿ ಮೇಲೆ ದಾಳಿ ನಡೆಸಿದ್ದ ಎಸಿಬಿ5 ಲಕ್ಷ ಹಣದ ಸಮೇತ ಉಪ ತಹಶಿಲ್ದಾರ್ ಮಹೇಶ್ ಹಾಗೂ ಗುತ್ತಿಗೆ ನೌಕರ ಚೇತನ್ ಅವರನ್ನು ಬಂಧಿಸಿತ್ತು. ಬಳಿಕ ಎಫ್‌ಐಆರ್ ದಾಖಲಿಸಿ ಎಸಿಬಿ ತನಿಖೆ ಕೈಗೊಂಡಿತ್ತು. ತನ್ನ ವಿರುದ್ಧದ ಎಫ್‌ಐಆರ್ ಹಾಗೂ ಎಸಿಬಿ ತನಿಖೆ ರದ್ದುಪಡಿಸುವಂತೆ ಕೋರಿ ಅರ್ಜಿ ಮಂಜುನಾಥ್ ಅರ್ಜಿ ಸಲ್ಲಿಸಿದ್ದರು.
Published On - 1:32 pm, Thu, 30 June 22