Crime News: ವಿವಿಧೆಡೆ ಅಪಘಾತ; 6 ಮಂದಿ ಸಾವು, ಬಾಗಲಕೋಟೆಯಲ್ಲಿ ಪೆಟ್ರೋಲ್ ಕಳ್ಳತನ

ಬೊಲೆರೊ ವಾಹನ ಡಿಕ್ಕಿ ಹೊಡೆದು ಬೈಕ್​ನಲ್ಲಿ ತೆರಳುತ್ತಿದ್ದ ಮೂವರು ಮೃತಪಟ್ಟಿರುವ ಘಟನೆ ಯಾದಗಿರಿ ತಾಲೂಕಿನ ಬಾಚವಾರ್​ ಗ್ರಾಮದ ಬಳಿ ನಡೆದಿದೆ.

Crime News: ವಿವಿಧೆಡೆ ಅಪಘಾತ; 6 ಮಂದಿ ಸಾವು, ಬಾಗಲಕೋಟೆಯಲ್ಲಿ ಪೆಟ್ರೋಲ್ ಕಳ್ಳತನ
ಪ್ರಾತಿನಿಧಿಕ ಚಿತ್ರ
Edited By:

Updated on: May 01, 2022 | 12:26 PM

ಯಾದಗಿರಿ: ಬೊಲೆರೊ ವಾಹನ ಡಿಕ್ಕಿ ಹೊಡೆದು ಬೈಕ್​ನಲ್ಲಿ ತೆರಳುತ್ತಿದ್ದ ಮೂವರು ಮೃತಪಟ್ಟಿರುವ ಘಟನೆ ಯಾದಗಿರಿ ತಾಲೂಕಿನ ಬಾಚವಾರ್​ ಗ್ರಾಮದ ಬಳಿ ನಡೆದಿದೆ. ಮೃತರನ್ನು ಬಸವರಾಜ (24), ಬಸವರಾಜ ಮೇದಾರ (23), ಶಿವಪ್ಪ (25) ಎಂದು ಗುರುತಿಸಲಾಗಿದೆ. ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಭೀಮನಹಳ್ಳಿ ನಿವಾಸಿಗಳಾದ ಇವರೆಲ್ಲರೂ ಯಾದಗಿರಿಯಿಂದ ಭೀಮನಹಳ್ಳಿಗೆ ತೆರಳುತ್ತಿದ್ದರು. ಸ್ಥಳಕ್ಕೆ ಯಾದಗಿರಿ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ನೈಸ್ ರಸ್ತೆಯಲ್ಲಿ ಅಪಘಾತ: ಮಹಿಳೆ ಸಾವು
ಬೆಂಗಳೂರು: ನೈಸ್ ರಸ್ತೆಯ ಮಾಗಡಿ ಟೋಲ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಟ್ಟಿದ್ದು, ಬಾಲಕ ಗಾಯಗೊಂಡಿದ್ದಾನೆ. ಮೃತರನ್ನು ಆನೇಕಲ್​ನ ಸುಲೋಚನಾ (24) ಎಂದು ಗುರುತಿಸಲಾಗಿದೆ. ಧರ್ಮಸ್ಥಳದಿಂದ ಹಿಂದಿಗುತ್ತಿದ್ದ ಕಾರಿಗೆ ಮದ್ಯದ ಲಾರಿ ಡಿಕ್ಕಿಯಾಗಿತ್ತು. ಮೂವರು ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇವನಹಳ್ಳಿ ಬಳಿ ಸರಣಿ ಅಪಘಾತ: ಕಾರ್ಮಿಕ ಸಾವು
ವಿಶ್ವ ಕಾರ್ಮಿಕರ ದಿನದಂದೇ ಸಂಭವಿಸಿದ ಅಪಘಾತದಲ್ಲಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ಹೊಸಕೋಟೆ ತಾಲ್ಲೂಕಿನ ದೊಡ್ಡಹುಲ್ಲೂರು ಬಳಿ 2 ಕ್ಯಾಂಟರ್, ಲಾರಿ ನಡುವೆ ಸರಣಿ ಅಪಘಾತ ಸಂಭವಿಸಿತು. ಕ್ಯಾಂಟರ್​ಗಳಲ್ಲಿದ್ದ ಇತರ 6 ಮಂದಿಗೆ ಗಂಭೀರ ಗಾಯಗಳಾಗಿವೆ. ಅಪಘಾತದ ರಭಸಕ್ಕೆ ಕ್ಯಾಂಟರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರ್ಮಿಕರು ಸೂಲಿಬೆಲೆ‌ ಬಳಿ ಕೆಲಸಕ್ಕೆ ತೆರಳುತ್ತಿದ್ದರು. ಮೊದಲಿಗೆ ಒಂದು ಕ್ಯಾಂಟರ್​ಗೆ ಮತ್ತೊಂದು ಕ್ಯಾಂಟರ್ ಡಿಕ್ಕಿ ಹೊಡೆಯಿತು. ನಂತರ ಹಿಂದಿನಿಂದ ಬಂದ ಲಾರಿ ಎರಡೂ ಕ್ಯಾಂಟರ್​ಗಳಿಗೆ ಡಿಕ್ಕಿಯಾಯಿತು. ಮೃತನ ಗುರುತು ಪತ್ತೆಯಾಗಿಲ್ಲ.

ಬೈಕ್​ಗಳಿಂದ ಪೆಟ್ರೋಲ್ ಕಳ್ಳತನ
ಬಾಗಲಕೋಟೆ:
ನಗರದ ವಿವಿಧೆಡೆ ಮನೆಗಳ ಮುಂದೆ ನಿಲ್ಲಿಸಿರುವ ಬೈಕ್​ಗಳಿಂದ ಪೆಟ್ರೋಲ್ ಕಳವು ಮಾಡುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಇಂಧನ ಬೆಲೆ ಏರಿಕೆಯ ನಂತರ ಈ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಬಾಗಲಕೋಟೆಯ ನವನಗರದ ಸೆಕ್ಟರ್ ನಂಬರ್ 5ರಲ್ಲಿ ನಡೆದಿರುವ ಇಂಥದ್ದೇ ಘಟನೆಯೊಂದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಬ್ಬರು ಯುವಕರು ನಸುಕಿನ 4.22ಕ್ಕೆ ಸಾಲಾಗಿ ನಿಲ್ಲಿಸಿದ್ದ ಎಲ್ಲ ಬೈಕ್​ಗಳಿಂದಲೂ ಪೆಟ್ರೋಲ್ ಕಳವು ಮಾಡಿದ್ದಾರೆ.

ಶ್ರೀಗಂಧದ ಮರ ಕಳವು ಮಾಡಿದ್ದ ಐವರ ಬಂಧನ
ದೇವನಹಳ್ಳಿ: ಬೆಂಗಳೂರು ಉತ್ತರ ತಾಲ್ಲೂಕಿನ ಸಾದಹಳ್ಳಿ ಹಾಲಿವುಡ್​ ಟೌನ್​ ಸಮೀಪ ಶ್ರೀಗಂಧದ ಮರ ಕಳ್ಳತನ ಮಾಡಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರದಿಂದ 40 ಕೆಜಿ ತೂಕದ ₹ 50 ಸಾವಿರ ಮೌಲ್ಯದ ಶ್ರೀಗಂಧ ಮರದ ತುಂಡುಗಳನ್ನು ಜಪ್ತಿ ಮಾಡಲಾಗಿದೆ. ವೆಂಕಟೇಶ್, ವೆಂಕಟರಮಣ, ವೆಂಕಟೇಶ್, ಅನಿಲ್ ಕುಮಾರ್, ಕೃಷ್ಣಮೂರ್ತಿ ಬಂಧಿತರು. ವಿಮಾನ ನಿಲ್ದಾಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಹುಳಿಯಾರು ಪಪಂ ನೌಕರರ ಅಮಾನತು
ಹುಳಿಯಾರು: ಕಚೇರಿಯಲ್ಲಿದ್ದ ಎಂಆರ್ ಪುಸ್ತಕ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಪಟ್ಟಣ ಪಂಚಾಯಿತಿಯ ಇಬ್ಬರು ನೌಕರರನ್ನು ಅಮಾನತು ಮಾಡಲಾಗಿದೆ. ಎಂ.ಜಿ.ಕೃಷ್ಣಮೂರ್ತಿ, ಟಿ.ಎ.ವೆಂಕಟೇಶ್ ಅಮಾನತುಗೊಂಡವರು. ಕಚೇರಿಯಲ್ಲಿದ್ದ ಎಂ.ಆರ್.ಪುಸ್ತಕ ಕಾಣೆಯಾಗಿರುವ ಬಗ್ಗೆ ಕೆಲ ತಿಂಗಳ ಹಿಂದೆ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿತ್ತು. ಅಧ್ಯಕ್ಷ ಕಿರಣ್​ ಕುಮಾರ್ ಮೇಲಧಿಕಾರಿಗಳಿಗೆ ವರದಿ ನೀಡಿದ್ದರು. ಪ್ರಕರಣ ಸಂಬಂಧ ತನಿಖೆಯ ನಂತರ ಎಸ್​ಡಿಎ ಕೃಷ್ಣಮೂರ್ತಿ, ಬಿಲ್ ಕಲೆಕ್ಟರ್​ ವೆಂಕಟೇಶ್​ ಅವರ ಕರ್ತವ್ಯಲೋಪ ಸಾಬೀತಾಗಿತ್ತು. ಈ ವರದಿ ಆಧರಿಸಿ ತುಮಕೂರು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅಮಾನತು ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: SSLC ಉತ್ತರ ಪತ್ರಿಕೆ ಇಟ್ಟಿರುವ ಕೊಠಡಿ ಭದ್ರತೆಗೆ ನಿಯೋಜಿಸಲಾಗಿದ್ದ ಹೆಡ್ ಕಾನ್ಸ್ಟೇಬಲ್ ಗುಂಡುಹಾರಿಸಿಕೊಂಡು ಆತ್ಮಹತ್ಯೆ

ಇದನ್ನೂ ಓದಿ: Crime News: ಶಾಹೀನ್ ಬಾಗ್​ನ ಮನೆ ಮೇಲೆ ಎನ್​ಸಿಬಿ ದಾಳಿ; 300 ಕೋಟಿ ರೂ. ಮೌಲ್ಯದ ಡ್ರಗ್ಸ್​ ವಶ