ಉಡುಪಿ: ಆದಿಉಡುಪಿಯ ಪ್ರೌಢಶಾಲೆಯಲ್ಲಿ ಗುಂಡುಹಾರಿಸಿಕೊಂಡು ಹೆಡ್ಕಾನ್ಸ್ಟೇಬಲ್ ರಾಜೇಶ್ ಕುಂದರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ರಾಜೇಶ್, ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಹೆಡ್ಕಾನ್ಸ್ಟೇಬಲ್ ಆಗಿದ್ದರು. SSLC ಉತ್ತರ ಪತ್ರಿಕೆ ಇಟ್ಟಿರುವ ಕೊಠಡಿ ಭದ್ರತೆಗೆ ಇವರನ್ನು ನಿಯೋಜಿಸಲಾಗಿತ್ತು. ಇವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎಂ.ಕೆ.ನಗರದ ನಿವಾಸದಲ್ಲಿ ವ್ಯಕ್ತಿಯ ಕೊಲೆ ಬೆಂಗಳೂರು: ಎಂ.ಕೆ.ನಗರದ ಮನೆಯಲ್ಲಿ ಇರಿತಕ್ಕೆ ಒಳಗಾದ ಸ್ಥಿತಿಯಲ್ಲಿ ಶಂಕರ ರೆಡ್ಡಿ(35) ಶವ ಪತ್ತೆಯಾಗಿದೆ. ಹತ್ಯೆಯಾದ ಶಂಕರರೆಡ್ಡಿ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿದ್ದರು. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಡಿದು ಗಲಾಟೆ ಮಾಡ್ತಾನೆ ಎಂದು ಅಣ್ಣನನ್ನೇ ಕೊಂದ ತಂಗಿ ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಸುಂದರನಗರ ಗ್ರಾಮದಲ್ಲಿ ಸಹೋದರಿಯಿಂದಲೇ ಅಣ್ಣನ ಕೊಲೆಯಾಗಿದೆ. ಊಟದಲ್ಲಿ ನಿದ್ದೆ ಮಾತ್ರೆ ಬೆರೆಸಿ ನೀಡಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಸಹೋದರಿ ಭವ್ಯಾ(32) ತನ್ನ ಅಣ್ಣ ಸುರೇಶ್(38)ನ ಕೊಲೆ ಮಾಡಿದ್ದಾಳೆ. ಮೃತ ಸುರೇಶ್, ಮನೆಯಲ್ಲಿ ಕುಡಿದು ತೀವ್ರ ಗಲಾಟೆ ಮಾಡುತ್ತಿದ್ದ. ಹೀಗಾಗಿ ಭವ್ಯಾ ಕೊಲೆ ಮಾಡಲು ಮುಂದಾಗಿದ್ದಾಳೆ. ಕೊಲೆ ಮಾಡಿ ಬಳಿಕ ಸಹಜ ಸಾವೆಂದು ಬಿಂಬಿಸಿದ್ದಾರೆ. ಅನುಮಾನ ಬಂದು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ರಹಸ್ಯ ಬಯಲಾಗಿದೆ. ಸದ್ಯ ಭವ್ಯಾ ಮತ್ತು ಕೊಲೆಯ ಸಹಾಯ ಮಾಡಿದ ಹರೀಶ್, ಮಹೇಶ್ನನ್ನು ಪೊಲೀಸರು ಬಂಧಿಸಿದ್ದಾರೆ. ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳಮುಖಿ ಅನಿಕಾ ಕೊಲೆ ಅರೋಪಿಗಳ ಬಂಧನ ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಓರ್ವ ಅಪ್ರಾಪ್ತ ಸೇರಿದಂತೆ 5 ಜನರನ್ನು ಬಂಧಿಸಿದ್ದಾರೆ. ನವೀನ್(22), ಸಂತೋಷ(20), ಮಹೇಶ್(20), ಮಣಿಕಂಠ(21) ಓರ್ವ ಅಪ್ರಾಪ್ತ. 8ನೇ ತಾರೀಖಿನಂದು ಮಧ್ಯೆ ರಾತ್ರಿ ಮಂಗಳಮುಖಿ ಅನಿಕಾಳನ್ನ ರಾಡ್ ನಿಂದ ಬಡಿದು ಕೊಲೆ ಮಾಡಲಾಗಿತ್ತು. ಮಹದೇವಪುರ ಅಮಾಮ್ ಬಳಿ ಕೊಲೆ ನಡೆದಿತ್ತು. ಈ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದೆ.
ಹೆಡ್ ಕಾನ್ಸ್ಟೇಬಲ್ ಆತ್ಮಹತ್ಯೆ ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟದಲ್ಲಿ ಕೋಡಿಗೆಹಳ್ಳಿ ಠಾಣೆ ಹೆಡ್ ಕಾನ್ಸ್ಟೇಬಲ್ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಿನ್ನತೆಯಿಂದಾಗಿ ಮಂಜುನಾಥ್(44) ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಸೋಲದೇವನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯವರೆಲ್ಲರೂ ಊರಿಗೆ ತೆರಳಿದ್ದಾಗ ಘಟನೆ ನಡೆದಿದೆ. ಮೂರು ತಿಂಗಳಿಂದ ಕೆಲಸಕ್ಕೆ ತೆರಳದೆ ಮನೆಯಲ್ಲೇ ಇದ್ದ ಹೆಡ್ ಕಾನ್ಸ್ಟೇಬಲ್ ಮಂಜುನಾಥ್ ಈ ಹಿಂದೆಯೂ ಇದೇ ರೀತಿ ಖಿನ್ನತೆಗೊಳಗಾಗಿದ್ದರು. ಆದ್ರೆ ಈ ಬಾರಿ ಖೀನ್ನತೆಯಿಂದ ಆಚೆ ಬರಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಪಘಾತ ಬೈಕ್ ಸವಾರ ಸಾವು ಶಿವಮೊಗ್ಗದ ಆಯನೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಹಾಗೂ ಪಿಕಪ್ ವಾಹನದ ನಡುವೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಠಗೊಂಡನಕೊಪ್ಪ ಗ್ರಾಮದ ಆಕಾಶ್ (20) ಮೃತ ದುರ್ದೈವಿ. ಶಿವಮೊಗ್ಗದಿಂದ ಆಯನೂರಿನ ಕಡೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ.
ಅಕ್ರಮ ಗ್ಯಾಸ್ ಫಿಲ್ಲಿಂಗ್ ಅಡ್ಡೆ ಮೇಲೆ ದಾಳಿ ಗದಗನ ಬೆಟಗೇರಿಯ ಕುರಟ್ಟಿಪೇಟಿಯಲ್ಲಿ ಅಕ್ರಮ ಗ್ಯಾಸ್ ಫಿಲ್ಲಿಂಗ್ ಅಡ್ಡೆ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆಟೋ, ಟಂಟಂ ವಾಹನಗಳಿಗೆ ಅಕ್ರಮವಾಗಿ ಮಷಿನ್ ಮೂಲಕ ಗ್ಯಾಸ್ ಫಿಲಿಂಗ್ ಮಾಡಲಾಗುತ್ತಿತ್ತು. ಸದ್ಯ ದಾಳಿ ನಡೆದಿದ್ದು 14.2 ಕೆಜಿಯ 14 ಸಿಲಿಂಡರ್, 19 ಕೆಜಿಯ 2 ಕರ್ಮರ್ಷಿಯಲ್ ಸಿಲಿಂಡರ್, ಐದು ಕೆಜಿಯ 2 ಸಿಲಿಂಡರ್, ಹಾಗೂ ಗ್ಯಾಸ್ ಫಿಲ್ಲಿಂಗ್ ಮಷಿನ್ ವಶಕ್ಕೆ ಪಡೆಯಲಾಗಿದೆ. ಸಾರ್ವಜನಿಕರ ದೂರು ಆಧರಿಸಿ ಎಚ್ಪಿ ಕಂಪನಿಗೆ ಸೇರಿದ್ದ ಸಿಲಿಂಡರ್ ಬಳಸಿ ನಡೆಯುತ್ತಿದ್ದ ಅಕ್ರಮ ಗ್ಯಾಸ್ ರೀ ಫಿಲ್ಲಿಂಗ್ ದಂಧೆಯನ್ನು ಅಧಿಕಾರಿಗಳು ತಡೆದಿದ್ದಾರೆ. ಅಕ್ರಮ ಸಿಲಿಂಡರ್ ರೀಫಿಲಿಂಗ್ ಮಾಡುತ್ತಿದ್ದ ಮಲ್ಲಿಕಾರ್ಜುನ್ ಕುಂಬಾರ್, ಗಿರೀಶ್ ಕುಂಬಾರ್ ವಿರುದ್ಧ ಕೇಸ್ ದಾಖಲಾಗಿದೆ. ಆಹಾರ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್ ನಾಯಕ್ ನೇತೃತ್ವದಲ್ಲಿ ದಾಳಿ ನಡೆದಿದೆ.
ಇದನ್ನೂ ಓದಿ: ಅಸ್ಸಾಂನಲ್ಲಿ ಜನರ ಮನಗೆದ್ದ ರತನ್ ಟಾಟಾ ಭಾಷಣ; ಮೋದಿ ಜತೆ ವೇದಿಕೆ ಹಂಚಿಕೊಂಡ ಹಿರಿಯ ಉದ್ಯಮಿ ಹೇಳಿದ್ದೇನು?