ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಮತ್ತು ಸಹಚರರು ತಮ್ಮನ್ನು ಸಿಐಡಿ ಹುಡುಕುತ್ತಿರುವ ಮಾಹಿತಿ ತಿಳಿದು, ದೇಗುಲಗಳಿಗೆ ಸಂಚರಿಸುವ ಮೂಲಕ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಗುಜರಾತ್ ಮತ್ತು ಮಹಾರಾಷ್ಟ್ರದ ವಿವಿಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ದರ್ಶನ ಪಡೆದಿದ್ದರು. ಎರಡು ದಿನಗಳ ಕಾಲ ದೇವಸ್ಥಾನಗಳಲ್ಲೇ ದಿವ್ಯಾ ಕಾಲ ಕಳೆದಿದ್ದರು. ಕಲಬುರಗಿಯಿಂದ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಹೋಗಿದ್ದ ದಿವ್ಯಾ ಅಲ್ಲಿ ಉದ್ಯಮಿ ಸುರೇಶ್ ಅವರ ಸಹಾಯ ಪಡೆದಿದ್ದರು. ಬಳಿಕ ಅಲ್ಲಿಂದ ಪುಣೆಗೆ ಹೋಗಿದ್ದರು. ಪುಣೆಯಿಂದ ಗುಜರಾತ್ನ ವಿವಿಧೆಡೆ ಸಂಚರಿಸಿ, ಮೂರುಗಳ ಹಿಂದಷ್ಟೇ ಪುಣೆಗೆ ವಾಪಸ್ ಬಂದಿದ್ದರು. ಪುಣೆಯಲ್ಲಿ ಉದ್ಯಮಿ ಸುರೇಶ್ ಸಹಾಯದಿಂದ ಮನೆಯೊಂದರಲ್ಲಿ ವಾಸ್ತವ್ಯ ಹೂಡಿದ್ದರು. ದಿವ್ಯಾ ಅವರ ಶಾಲೆಯಲ್ಲಿ ಕೆಲಸ ಮಾಡುವ ಅರ್ಚನಾ ಮತ್ತು ಸುನೀತ ತಮ್ಮೊಂದಿಗೆ 2 ವರ್ಷದ ಮಕ್ಕಳನ್ನೂ ಕರೆದೊಯ್ದಿದ್ದರು.
ದಿವ್ಯಾ ಹಾಗರಗಿ ಬಂಧನ ತಡವಾಯ್ತು, ಇದೊಂದೇ ಹಗರಣವಲ್ಲ ನಡೆದಿರೋದು: ಸಿದ್ದರಾಮಯ್ಯ
ಬಾಗಲಕೋಟೆ: ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಂಧನದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಆದರೆ ಹಗರಣ ಬೆಳಕಿಗೆ ಬಂದ ತಕ್ಷಣ ದಿವ್ಯಾ ಹಾಗರಗಿಯನ್ನು ಬಂಧಿಸಬೇಕಿತ್ತು. ಇಷ್ಟು ತಡವಾಗಿ ಬಂಧಿಸಿದ್ದು ಕೂಡ ಪೊಲೀಸರ ವೈಫಲ್ಯವೇ ಆಗಿದೆ. ಆರೋಪಿಗಳಿಗೆ ಪೊಲೀಸರೇ ರಕ್ಷಣೆ ಕೊಟ್ಟರೆ ಬೇರೊಂದು ತನಿಖಾ ಸಂಸ್ಥೆಯು ಹೇಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯ ಎಂದು ಬಂಧಿತ ದಿವ್ಯಾ ಹಾಗರಗಿ ಈ ಹಿಂದೆಯೂ ಇಂಥದ್ದೇ ಅಕ್ರಮ ನಡೆಸಿರಬಹುದು. ಪ್ರಕರಣ ಬೆಳಕಿಗೆ ಬಂದು 20 ದಿನ ಕಳೆದರೂ ಆರೋಪಿಯನ್ನು ಬಂಧಿಸಲು ಆಗದಿದ್ದರೆ ಹೇಗೆ? ಆರೋಪಿಯ ಬಂಧನಕ್ಕೆ ಇಷ್ಟು ದಿನ ಯಾಕೆ ಬೇಕಿತ್ತು? ಇದು ಪೊಲೀಸರ ವೈಫಲ್ಯ ಅಲ್ಲವೇ ಎಂದು ಹುನಗುಂದ ತಾಲೂಕಿನ ಸುಳಿಬಾವಿ ಗ್ರಾಮದಲ್ಲಿ ಸಿದ್ದರಾಮಯ್ಯ ಪ್ರಶ್ನಿಸಿದರು.
545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಪ್ರಕರಣದಲ್ಲಿ ಬಂಧಿತರ ಒಟ್ಟು ಸಂಖ್ಯೆಯು 7ಕ್ಕೆ ಏರಿಕೆಯಾಗಿದೆ. ಇವರೆಲ್ಲರೂ ಪಿಎಸ್ಐ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳೇ ಆಗಿದ್ದಾರೆ. ಇವರೆಲ್ಲರೂ ಜ್ಞಾನಜ್ಯೋತಿ ಶಾಲೆಯಲ್ಲಿ ಪರೀಕ್ಷೆ ಬರೆದಿದ್ದರು. ಒಎಂಆರ್ ಶೀಟ್ನಲ್ಲಿ ಅಕ್ರಮ ಎಸಗಿದ ಆರೋಪಿಗಳು; ಕಲಬುರಗಿ ಜಿಲ್ಲೆಯ ಸೇಡಂ ನಿವಾಸಿ ವೀರೇಶ್, ಕಲಬುರಗಿ ತಾಲೂಕಿನ ಅರುಣ್ ಪಾಟೀಲ್, ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಚೇತನ್ ನಂದಗಾಂವ್, ರಾಯಚೂರು ಮೂಲದ ಪ್ರವೀಣ್ ಕುಮಾರ್. ಎಲೆಕ್ಟ್ರಾನಿಕ್ ಡಿವೈಸ್ ಮೂಲಕ ಅಕ್ರಮ ಎಸಗಿದ್ದವರು; ಯಾದಗಿರಿ ಜಿಲ್ಲೆಯ ಹಯ್ಯಾಳಿ ದೇಸಾಯಿ (DAR ಕಾನ್ಸ್ಟೇಬಲ್), ಕಲಬುರಗಿ ತಾಲೂಕಿನ ವಿಶಾಲ್, ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಎನ್.ವಿ.ಸುನಿಲ್, ಎಲೆಕ್ಟ್ರಾನಿಕ್ ಡಿವೈಸ್ ಮೂಲಕ ಪರೀಕ್ಷೆ ಬರೆದಿದ್ದರು.
545 ಪಿಎಸ್ಐ ನೇಮಕಾತಿ ಮರು ಪರೀಕ್ಷೆಗೆ ನಿರ್ಧಾರ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇದೊಂದು ದೊಡ್ಡ ಹಗರಣ. ಇದು ಸರ್ಕಾರ ಹಗರಣಗಳ ಸರ್ಕಾರ ಎಂದು ಹರಿಹಾಯ್ದರು. ಕೇವಲ ಗೃಹ ಇಲಾಖೆ ಮಾತ್ರವೇ ಅಲ್ಲ, ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ನಡೆದಿದೆ. ಈ ಸರ್ಕಾರದಲ್ಲಿ ನಡೆದಿರುವಷ್ಟು ಭ್ರಷ್ಟಾಚಾರ ಹಾಗೂ ಹಗರಣಗಳು ಬೇರೆಲ್ಲೂ ನಡೆದಿಲ್ಲ. ಪ್ರಶ್ನೆ ಪತ್ರಿಕೆಯನ್ನೇ ಕೊಟ್ಟಿರುವ, ಉತ್ತರ ತಿದ್ದಿರುವ ಮಾಹಿತಿ ಇದೆ. ನಮ್ಮ ಅವಧಿಯಲ್ಲೂ ಮರು ನೇಮಕಾತಿಗಳು ನಡೆದಿವೆ. ಹಿಂದಿನ ಯಾವ ಸರ್ಕಾರದಲ್ಲೂ ಈ ರೀತಿ ಭ್ರಷ್ಟಾಚಾರ ನಡೆದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಪ್ರೊಫೆಸರ್ಗಳ ನೇಮಕಾತಿಯಲ್ಲೂ ಹಗರಣ ಆಗಿದೆ ಎಂದರು.
ಧಾರವಾಡ: ಪಿಎಸ್ಐ ಆಕಾಂಕ್ಷಿಗಳ ಸ್ವಾಗತ
ಧಾರವಾಡ: ಪಿಎಸ್ಐ ನೇಮಕಾತಿಗಾಗಿ ಮರು ಪರೀಕ್ಷೆ ನಡೆಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಧಾರವಾಡದ ಪಿಎಸ್ಐ ಅಭ್ಯರ್ಥಿಗಳು ಸ್ವಾಗತಿಸಿದ್ದಾರೆ. ಇದು ನಮ್ಮ ಹೋರಾಟಕ್ಕೆ ಸಂದ ಜಯ ಎಂದು ಅಕ್ರಮ ನೇಮಕಾತಿ ವಿರುದ್ಧ ಹೋರಾಡಿದ್ದ ಆಕಾಂಕ್ಷಿ ರವಿಶಂಕರ್ ಹೇಳಿದ್ದಾರೆ. ಸರ್ಕಾರ ಉತ್ತಮ ನಿರ್ಧಾರ ಕೈಗೊಂಡಿದೆ. ಗೃಹಸಚಿವರಿಗೆ ಧನ್ಯವಾದ. ಪರೀಕ್ಷಾ ಅಕ್ರಮದ ಬಗ್ಗೆ ದಾಖಲೆ ಸಂಗ್ರಹಿಸಿ ಸಚಿವರಿಗೆ ನೀಡಿದ್ದೆವು. ಪಿಎಸ್ಐ ನೇಮಕಾತಿ ಮರು ಪರೀಕ್ಷೆಯ ನಿರ್ಧಾರ ಸ್ವಾಗತಾರ್ಹ ಕ್ರಮವಾಗಿದೆ ಎಂದು ಆಕಾಂಕ್ಷಿ ರವಿಶಂಕರ್ ಹೇಳಿದರು.
ಇದನ್ನೂ ಓದಿ: PSI Recruitment Scam: ಒಳಗೆ ಅಕ್ರಮ, ಹೊರಗೆ ದಿವ್ಯಾ; ಪಿಎಸ್ಐ ಪರೀಕ್ಷೆ ನಡೆದ ದಿನ ಶಾಲೆಯ ಹೊರಗೆ ಕಾವಲಿದ್ದ ದಿವ್ಯಾ ಹಾಗರಗಿ
ಇದನ್ನೂ ಓದಿ: PSI ನೇಮಕಾತಿ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಂಧನ