AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋರ್ಟ್​​ನ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನ: ಚಿಕಿತ್ಸೆ ಫಲಿಸದೆ ಆರೋಪಿ ಸಾವು

ಕೋರ್ಟ್​​ ನ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಆರೋಪಿ ವಿರುದ್ಧ ಆಡುಗೋಡಿ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಡಿಎನ್​ಎ ಪರೀಕ್ಷೆ ವೇಳೆ ಮ್ಯಾಚ್​ ಆಗಿದ್ದ ಹಿನ್ನಲೆ ಆತನನ್ನು ಬಂಧಿಸಿದ್ದ ಪೊಲೀಸರು, ಚಾರ್ಜ್​ಶೀಟ್​ ದಾಖಲಿಸಿದ್ದರು. ಪ್ರಕರಣ ಸಂಬಂಧ ಇಂದಿನಿಂದ ಟ್ರಯಲ್ ನಡೆಯಲಿದ್ದ ಹಿನ್ನಲೆ ಆರೋಪಿಯನ್ನು ಕೋರ್ಟ್​ಗೆ ಕರೆತರಲಾಗಿತ್ತು.

ಕೋರ್ಟ್​​ನ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನ: ಚಿಕಿತ್ಸೆ ಫಲಿಸದೆ ಆರೋಪಿ ಸಾವು
ಕ್ರೈಂImage Credit source: Google
ಪ್ರಸನ್ನ ಹೆಗಡೆ
|

Updated on:Oct 09, 2025 | 5:46 PM

Share

ಬೆಂಗಳೂರು, ಅಕ್ಟೋಬರ್​ 09: ವಿಚಾರಣೆಗೆ ಕರೆತಂದಿದ್ದ ವೇಳೆ ನ್ಯಾಯಾಲಯದ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಪೋಕ್ಸೋ ಪ್ರಕರಣದ ಆರೋಪಿ ಸಾವನ್ನಪ್ಪಿರುವ ಘಟನೆ ಬೆಂಗಳೂರಲ್ಲಿ (Bengaluru) ನಡೆದಿದೆ. ಮೃತ ವ್ಯಕ್ತಿಯನ್ನು ಗೌತಮ್​ (35) ಎಂದು ಗುರುತಿಸಲಾಗಿದೆ. ನಗರದ ಸಿಟಿ ಸಿವಿಲ್​ ಕೋರ್ಟ್​ಗೆ ಆರೋಪಿಯನ್ನು ಪ್ರಕರಣದ ವಿಚಾರಣೆಗೆಂದು ಪೊಲೀಸರು ಕರೆತಂದಿದ್ದರು. ಈ ವೇಳೆ ಮಹಡಿಯಿಂದ ಹಾರಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸಿಲ್ಲ.

ಕಳೆದ ಏಪ್ರಿಲ್​ನಲ್ಲಿ ಆರೋಪಿ ಗೌತಮ್​ ವಿರುದ್ಧ ಬೆಂಗಳೂರಿನ ಆಡುಗೋಡಿ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಡಿಎನ್​ಎ ಪರೀಕ್ಷೆ ವೇಳೆ ಮ್ಯಾಚ್​ ಆಗಿದ್ದ ಹಿನ್ನಲೆ ಆರೋಪಿ ಬಂಧಿಸಿದ್ದ ಪೊಲೀಸರು, ಆತನ ವಿರುದ್ಧ ಚಾರ್ಜ್​ಶೀಟ್​ ದಾಖಲಿಸಿದ್ದರು. ಪ್ರಕರಣ ಸಂಬಂಧ ಇಂದಿನಿಂದ ಟ್ರಯಲ್ ನಡೆಯಲಿದ್ದ ಹಿನ್ನಲೆ ಗೌತಮ್​ನನ್ನು ಕೋರ್ಟ್​ ಗೆ ಕರೆತರಲಾಗಿತ್ತು. ಕುಟುಂಬದವರು ಆರೋಪಿಯ ಭೇಟಿಗೆ ಬಂದಿದ್ದ ಕಾರಣ, ಗೌತಮ್​ ಕೈಗೆ ಹಾಕಿದ್ದ ಬೇಡಿಯನ್ನ ಪೊಲೀಸರು ಕಳಚಿದ್ದರು. ಕುಟುಂಬಸ್ಥರ ಜೊತೆ ಮಾತನಾಡಿದ ಬಳಿಕ ಏಕಾಏಕಿಯಾಗಿ ನ್ಯಾಯಾಲಯದ 5ನೇ ಮಹಡಿಯಿಂದ ಗೌತಮ್​ ಜಿಗಿದಿದ್ದ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಆತ ಅಂತಿಮವಾಗಿ ಉಸಿರು ಚೆಲ್ಲಿದ್ದು, ಮರಣೋತ್ತರ ಪರೀಕ್ಷೆಗಾಗಿ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ: ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯನ್ನು ಕರೆದೊಯ್ದು ಎರಡು ಬಾರಿ ಸಾಮೂಹಿಕ ಅತ್ಯಾಚಾರ

ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ ಶಂಕೆ

ಮನೆಯಿಂದ ಹೊರಗೆ ಹೋಗಿದ್ದ ಮಹಿಳೆಯೋರ್ವರು ಬಾವಿಯಲ್ಲಿ ಹೆಣವಾಗಿ ಪತ್ತೆಯಾಗಿರೋ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಶಾಕಾಪೂರ (ಎಸ್.ಎ) ಗ್ರಾಮದಲ್ಲಿ ನಡೆದಿದೆ. ಭಾಗ್ಯಶ್ರೀ (31) ಮೃತ ಮಹಿಳೆಯಾಗಿದ್ದು, ಕೌಟುಂಬಿಕ ಕಲಹದ ಹಿನ್ನಲೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಮೃತ ಮಹಿಳೆಗೆ ಮೂವರು ಮಕ್ಕಳಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಘಟನೆ ಬಗ್ಗೆ ಜೇವರ್ಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಧಿಕಾರಿಗಳಿಂದ ನಿಂದನೆ ಆರೋಪ: ಆತ್ಮಹತ್ಯೆಗೆ ಯತ್ನ

ಕಿರ್ಲೋಸ್ಕರ್​ ಕಾರ್ಖಾನೆಯ ಮೇಲಧಿಕಾರಿಗಳಿಂದ ನಿಂದನೆ  ಹಿನ್ನೆಲೆ ಕೆಮಿಕಲ್ ಸೇವಿಸಿ ಸಹಾಯಕ ಇಂಜಿನಿಯರ್​ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಬಸವರಾಜ ಅಡಗಿ ಆತ್ಮಹತ್ಯೆಗೆ ಯತ್ನಿಸಿದ ಸಹಾಯಕ ಇಂಜಿನಿಯರ್ ಆಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ನಿನ್ನೆ ಕಾರ್ಖಾನೆಯಲ್ಲಿ ಬಸವರಾಜ ಕೆಲಸ ಮಾಡುವ ವೇಳೆ ಮಷೀನ್ ಕೆಟ್ಟುಹೋಗಿತ್ತು. ಈ ಕಾರಣಕ್ಕೆ ಮೇಲಧಿಕಾರಿಗಳು ನೀನು ಸರಿಯಾಗಿ ಕೆಲಸ ಮಾಡಿಲ್ಲವೆಂದು ಬೈದಿದ್ದರು. ಇದರಿಂದ ಮನನೊಂದಿದ್ದ ಬಸವರಾಜ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:46 pm, Thu, 9 October 25