ಬೆಂಗಳೂರು, (ಸೆಪ್ಟೆಂಬರ್ 20): ಆರ್ಎಸ್ಎಸ್ (RSS) ಕಾರ್ಯಾಕರ್ತರೆಂದು ಹೇಳಿಕೊಂಡು ಗೋಮಾಂಸ (beef) ಸಾಗಿಸುತ್ತಿದ್ದ ವ್ಯಕ್ತಿಯನ್ನು ಕಿಡ್ನಾಪ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ(Bengaluru) ನಡೆದಿದೆ. ಸೆಪ್ಟೆಂಬರ್ 10ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಹಮದ್ ಎನ್ನುವಾತ ಮೂವರು ಯುವಕರನ್ನು ಬಿಟ್ಟು ಗೋಮಾಂಸ ಸಾಗಿಸುತ್ತಿದ್ದ ಜಾವೀದ್ ಎನ್ನುವಾತನನ್ನು ಗಾಡಿ ಸಮೇತ ಕಿಡ್ನಾಪ್ ಮಾಡಿಸಿದ್ದಾನೆ. ಈ ಬಗ್ಗೆ ದೂರು ದಾಖಲಾದ ಬಳಿಕ ದನದ ಮಾಂಸ ಕಳ್ಳತನದ ಅಸಲಿ ಕಹಾನಿ ಬಯಲಾಗಿದೆ.
ಹೌದು…ಸೆಪ್ಟೆಂಬರ್ 10ರಂದು ಜಾವೀದ್, ಮಹಮದ್ ಎನ್ನುವಾತನ ಅಂಗಡಿಗೆ ವಾಹನದಲ್ಲಿ ಗೋಮಾಂಸ ತುಂಬಿಕೊಂಡು ರಾಮನಗರದಿಂದ ಬೆಂಗಳೂರಿನ ತಿಲಕನಗರಕ್ಕೆ ಬರುತಿದ್ದ. ಈ ಗೋಮಾಂಸ ಕದಿಯಲೆಂದು ಅಂಗಡಿ ಮಾಲೀಕ ಮೂವರು ಯುವಕರನ್ನು ಕಳುಹಿಸಿ ಜಾವೀದ್ನನ್ನು ಕಿಡ್ನಾಪ್ ಮಾಡಲು ಹೇಳಿದ್ದ. ಅದರಂತೆ ದನದ ಮಾಂಸ ಗಾಡಿಯಲ್ಲಿಟ್ಟುಕೊಂಡು ಅಂಗಡಿಗೆ ಡೆಲವರಿಗೆ ಮಾಡಲು ಬರುತ್ತಿದ್ದ ಜಾವೀದ್ನನ್ನು ಮೈಕ್ರೋ ಲೇಔಟ್ ಸಿಗ್ನಲ್ ಬಳಿ ಅಡ್ಡಗಟ್ಟಿ ತಾವು ಆರ್ಎಸ್ಎಸ್ ಕಾರ್ಯಕರ್ತರು ಎಂದು ಹೇಳಿದ್ದಾರೆ. ಬಳಿಕ ಗಾಡಿ ಸಮೇತ ಜಾವೀದ್ನನ್ನು ಕಿಡ್ನಾಪ್ ಮಾಡಿದ್ದರು.
ಇದನ್ನೂ ಓದಿ: ಎಗ್ ರೈಸ್ ಜೊತೆ ಕಬಾಬ್ ಕೇಳಿದ ಯುವಕ; ಇಲ್ಲ ಎಂದಿದ್ದಕ್ಕೆ ಅಂಗಡಿ ಮಾಲೀಕನನ್ನೇ ಚಾಕುವಿನಿಂದ ಇರಿದು ಕೊಂದ
ನಂತರ ಜಾವೀದ್ನನ್ನು ಬಿಟ್ಟು ಕಳುಹಿಸಲು ಒಂದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟು, ಕೊನೆಗೆ ಹತ್ತು ಸಾವಿರ ಪಡೆದು ಜಾವೀದ್ನನ್ನು ಬಿಟ್ಟು ಕಳುಹಿಸಿದ್ದಾರೆ. ಇನ್ನು ತನ್ನ ಗಾಡಿ ಕೊಡಿ ಎಂದು ಕಿಡ್ನಾಪ್ ಮಾಡಿದ್ದವನ್ನು ಕೇಳಿದ್ದಾನೆ. ಸೆಂಟ್ ಜಾನ್ ಸಿಗ್ನಲ್ ಬಳಿ ಗಾಡಿ ಇದೆ ತಗೆದುಕೋ ಎಂದು ಹೇಳಿ ಕಳುಹಿಸಿದ್ದಾರೆ. ಅದರಂತೆ ಬಳಿಕ ಸಿಗ್ನಲ್ ಬಳಿ ಹೊದಾಗ ಕೇವಲ ಗಾಡಿ ಇತ್ತೆ ಹೊರತು ಅದರಲ್ಲಿದ್ದ ಗೋಮಾಂಸ ಇರಲಿಲ್ಲ. ಬಳಿಕ ಈ ಬಗ್ಗೆ ಜಾವೀದ್ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಈ ದೂರಿನ ಮೇರೆಗೆ ಕಾರ್ಯಚರಣೆಗಿಳಿದ ಆಡುಗೋಡಿ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದಾಗ ಆರ್ಎಸ್ಎಸ್ ಹೆಸರಿನಲ್ಲಿ ಗೋಮಾಂಸ್ ಕಳ್ಳತನ ಕಹಾನಿ ಬಯಲಿಗೆ ಬಂದಿದೆ.
ಕಿಡ್ನಾಪ್ ಮಾಡಿದ್ದವರನ್ನು ಹಿಡಿದು ವಿಚಾರಣೆಗೊಳಪಡಿಸಿದಾಗ ಅಂಗಡಿ ಮಾಲೀಕ ಮಹಮದ್ನ ಗೋಮಾಂಸ ಕಳ್ಳತದ ಪ್ಲ್ಯಾನ್ ಬಟಾಬಯಲಾಗಿದೆ. ಜಾವೀದ್ ಡೆಲವರಿ ಮಾಡಬೇಕಿದ್ದ ಗೋಮಾಂಸದ ಅಂಗಡಿಯ ಮಾಲೀಕನೇ ಕಿಡ್ನಾಪ್ ಮಾಡಿಸಿದ್ದು ಎನ್ನುವುದು ಗೊತ್ತಾಗಿದೆ.
ಕಿಡ್ನಾಪ್ ಮಾಡಿದ್ದ ಬಳಿಕ ಮಾಂಸ ತನ್ನ ಅಂಗಡಿಗೆ ತರಿಸಿಕೊಂಡು ಗಾಡಿ ಕಳುಹಿಸಿದ್ದ.ನಂತರ ಮಾಂಸ ಡೆಲವರಿಯಾಗಿಲ್ಲ ಎಂದು ಕಥೆ ಬಿಟ್ಟಿದ್ದ. ಬಳಿಕ ಪೊಲೀಸರ ತನಿಖೆ ವೇಳೆ ಅಸಲಿ ಕಹಾನಿ ಬೆಳಕಿಗೆ ಬಂದಿದ್ದು, ಗೋಮಾಂಸ ಕದಿಯಲೆಂದೇ ಈ ಕೃತ್ಯ ಮಾಡಿರುವುದಾಗಿ ವಿಚಾರಣೆ ವೇಳೆ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಸದ್ಯ ಅಂಗಡಿ ಮಾಲೀಕ ಮಹಮದ್ ಸಹಿತ ನಾಲ್ವರನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ