ಬೆಂಗಳೂರು, ಆಗಸ್ಟ್ 15: ಟೊಮೆಟೊ ಸೇರಿದಂತೆ ತರಕಾರಿ ಬೆಲೆ ಏರಿಕೆಯ ಬಿಸಿಯಿಂದ ಜನ ಇನ್ನೂ ಹೊರಬಂದಿಲ್ಲ. ಇನ್ನೇನು ಹಬ್ಬಗಳ ಋತು ಕೂಡ ಆರಂಭವಾಗಲಿದೆ. ಇಂಥ ಸಂದರ್ಭದಲ್ಲೇ ಬಾಳೆಹಣ್ಣಿನ (Banana Price) ಬೆಲೆ ಕೂಡ ಏರಿಕೆಯಾಗಿರುವ ಬಗ್ಗೆ ವರದಿಯಾಗಿದೆ. ಹಬ್ಬದ ಸಂದರ್ಭದಲ್ಲಿ ಬಹುಮುಖ್ಯ ಬೇಡಿಕೆಯುಳ್ಳ ಬಾಳೆ ಹಣ್ಣಿನ ಬೆಲೆಯು ಮೂರಂಕಿ ತಲುಪಿರುವುದು ಗ್ರಾಹಕರಿಗೆ ತಲೆಬಿಸಿ ಉಂಟುಮಾಡಿದೆ. ಬೇಡಿಕೆ ಹಾಗೂ ಪೂರೈಕೆ ವ್ಯತ್ಯಾಸದಿಂದ (Demand And Supply) ಈ ವಾರ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಒಂದು ಕೆಜಿ ಬಾಳೆಹಣ್ಣಿನ ದರ 100 ರೂ. ತಲುಪಿದೆ.
ಬೆಂಗಳೂರಿನಲ್ಲಿ ಹೆಚ್ಚಾಗಿ ಏಲಕ್ಕಿ ಬಾಳೆ, ಪಚ್ಚೆ ಬಾಳೆ ಹಣ್ಣಿಗೆ ಬೇಡಿಕೆಯಿದ್ದು, ತಮಿಳುನಾಡಿನಿಂದ ಪೂರೈಕೆಯಾಗುತ್ತಿವೆ. ಆದರೆ ಈ ಬಾರಿ ತಮಿಳುನಾಡಿನಿಂದ ಪೂರೈಕೆಯಾಗುವ ಪ್ರಮಾಣದಲ್ಲಿ ಗಣನೀಯ ಕುಸಿತ ಕಂಡುಬಂದಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಬೆಂಗಳೂರು ಎಪಿಎಂಸಿ ಕಾರ್ಯದರ್ಶಿ ರಾಜಣ್ಣ ತಿಳಿಸಿದ್ದಾರೆ. ಈ ಮೊದಲು ಬಿನ್ನಿಪೇಟೆ ಮಾರುಕಟ್ಟೆಗೆ ತಮಿಳುನಾಡಿನಿಂದ 1500 ಕ್ವಿಂಟಲ್ ಬಾಳೆಹಣ್ಣುಗಳನ್ನು ಪೂರೈಸಲಾಗುತ್ತಿತ್ತು. ಆದರೆ ಈ ಬಾರಿ ಕೇವಲ 1000 ಕ್ವಿಂಟಲ್ ಮಾತ್ರ ಪೂರೈಕೆಯಾಗಿವೆ ಎಂದು ಅವರು ತಿಳಿಸಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಇದಲ್ಲದೆ ಬೆಂಗಳೂರು ಎಪಿಎಂಸಿ ಘಟಕಕ್ಕೆ ತುಮಕೂರು, ರಾಮನಗರ ಚಿಕ್ಕಬಳ್ಳಾಪುರ ಹಾಗು ಬೆಂಗಳೂರು ಗ್ರಾಮಾಂತರದಿಂದ ಬಾಳೆಹಣ್ಣು ಪೂರೈಕೆಯಾಗುತ್ತವೆ. ಹಾಗೆಯೇ ತಮಿಳುನಾಡಿಗೆ ಹೊಸೂರು ಹಾಗೂ ಕೃಷ್ಣಗಿರಿಯಿಂದ ಹಣ್ಣುಗಳು ಪೂರೈಕೆಯಾಗುತ್ತವೆ. ಹೊರರಾಜ್ಯಗಳಿಂದ ಪೂರೈಕೆ ಕಡಿಮೆಯಿರುವುದರಿಂದ ಏಲಕ್ಕಿ ಬಾಳೆ ಹಣ್ಣಿನ ಸಗಟು ಮಾರಾಟ ಬೆಲೆ ಪ್ರತಿ ಕೆಜಿಗೆ 78 ರೂಪಾಯಿ ಇದ್ದರೆ ಪಚ್ಚಬಾಳೆ 18 ರಿಂದ 20 ರೂ. ಇದೆ. ಆದರೆ ಸಾಗಾಣಿಕೆ ವೆಚ್ಚವನ್ನೂ ಸೇರಿಸಿ ಚಿಲ್ಲರೆ ಮಾರಾಟ ಬೆಲೆಯೇ ಕ್ರಮವಾಗಿ 100 ರೂ. ಹಾಗೂ 40 ರೂ. ತಲುಪಿದೆ.
ಇದನ್ನೂ ಓದಿ; ಕೆಂಪುಸುಂದರಿ ಕಾಟದ ಬಳಿಕ, ಗೃಹಿಣಿಯರಿಗೆ ಶ್ರಾವಣ ಮಾಸದಲ್ಲೇ ಈರುಳ್ಳಿ-ಬೆಳ್ಳುಳ್ಳಿ ಟೆನ್ಷನ್!
ಬೆಲೆ ಏರಿಕೆಯ ಹಿಂದೆ ಮಧ್ಯವರ್ತಿಗಳ ಕೈವಾಡ ಇದೆ ಎಂದು ಕೆಲ ರೈತರು ಅಭಿಪ್ರಾಯಪಟ್ಟಿದ್ದಾರೆ. ಕೊಡಗು, ಮೈಸೂರು, ಬೆಂಗಳೂರು ಗ್ರಾಮಾಂತರ ಪ್ರದೇಶಗಳು ನಗರದಿಂದ ಹತ್ತಿರದಲ್ಲಿಯೇ ಇದ್ದರು ಅವರು ಬೆಳೆದಂತಹ ಉತ್ಪನ್ನಗಳು ನಗರವನ್ನು ತಲುಪುತ್ತಿಲ್ಲ. ಸಣ್ಣ ಹಿಡುವಳಿದಾರರು ಸಾಗಾಣಿಕಾ ವಾಹನ ಭರ್ತಿಯಾಗುವವರೆಗೂ ಕಾಯುತ್ತಿಲ್ಲ. ಬೇರೆ ಮಾರ್ಗವಿಲ್ಲದ ಕಾರಣ, ರೈತರು ಗ್ರಾಹಕರನ್ನು ತಲುಪಲು ಸೋಲುತ್ತಾರೆ ಎನ್ನಲಾಗಿದೆ.
ಓಣಂ, ಗಣೇಶ ಚತುರ್ಥಿ ಸೇರಿದಂತೆ ಹಬ್ಬಗಳು ಸಮೀಪಿಸುತ್ತಿರುವುದರಿಂದ ಬೇಡಿಕೆಯಲ್ಲಿಯೂ ಹೆಚ್ಚಳ ಕಂಡುಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ