ಬೆಂಗಳೂರು: ವರ್ಷಧಾರೆಯ ಆಗಮನದಿಂದ ಸಿಲಿಕಾನ್ ಸಿಟಿ ಮತ್ತೆ ತಂಪಾಗಿದೆ. ಕಳೆದ ಕೆಲವು ದಿನಗಳಿಂದ ಬಿಟ್ಟು ಬಿಟ್ಟು ಸುರಿಯುತ್ತಿದ್ದ ಮಳೆ ಇಂದು ಕೂಡ ಮುಂದುವರೆದಿದೆ. ನಗರದ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು ಶಾಂತಿನಗರ, ಕೋರಮಂಗಲ, ಕೆ.ಆರ್.ಮಾರ್ಕೆಟ್, ಮೆಜೆಸ್ಟಿಕ್, ರಾಜಾಜಿನಗರ, ಜೆ.ಪಿ.ನಗರ, ಜಯನಗರ, ಜೆ.ಪಿ.ನಗರ, ವಿಜಯನಗರ, ಬನಶಂಕರಿ, ಹೆಬ್ಬಾಳ ಸೇರಿದಂತೆ ಹಲವೆಡೆ ಮಳೆ ಆರ್ಭಟ ಮುಂದುವರೆದಿದೆ.
ನಗರದಲ್ಲಿ ಸುರಿಯುತ್ತಿರುವ ಮಳೆಗೆ ರಾಜರಾಜೇಶ್ವರಿ ನಗರದ ಜನಪ್ರಿಯ ಲೇಔಟ್ ಹಾಗೂ ಬೊಮ್ಮನಹಳ್ಳಿ, ಕೋಡಿ ಚಿಕ್ಕನಹಳ್ಳಿಯಲ್ಲಿ ರಸ್ತೆಗಳು ಕೆರೆಯಂತಾಗಿವೆ. ತಗ್ಗು ಪ್ರದೇಶ ರಸ್ತೆಗಳಲ್ಲಿ ಮಳೆ ನೀರು ಸಂಗ್ರಹವಾಗುತ್ತಿದೆ. ವಾಹನ ಸವಾರರು ಪರದಾಡುತ್ತಿದ್ದಾರೆ.
ಬೆಂಗಳೂರಿನ ಬೊಮ್ಮನಹಳ್ಳಿ ಸುತ್ತಮುತ್ತ ಧಾರಾಕಾರ ಮಳೆಯಾಗಿದೆ. ಭಾರಿ ಮಳೆಯಿಂದ ಅಂಗಡಿಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮಂಗಮ್ಮನಪಾಳ್ಯದ ಮದೀನ ನಗರ, ಹೆಚ್ಎಸ್ಆರ್ ಬಡಾವಣೆ, ಹೊಂಗಸಂದ್ರ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಅವಾಂತರ ಉಂಟಾಗಿದೆ. ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಭಾರಿ ಮಳೆ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ ಸಿಟಿಯ ಅನಂತನಗರದಲ್ಲಿ ರಸ್ತೆಗಳು ಜಲಾವೃತವಾಗಿದೆ. ಮಳೆ ನೀರು ಮುಖ್ಯರಸ್ತೆಯಲ್ಲಿ ನದಿಯಂತೆ ಹರಿಯುತ್ತಿದೆ. ಮನೆಗೆ ತೆರಳಲಾಗದೆ ಜನರು ರಸ್ತೆಯಲ್ಲೇ ಪರದಾಡುತ್ತಿದ್ದಾರೆ.
ಜಂಬೂ ಸವಾರಿ ಬಳಿಕ ಮೈಸೂರಿನಲ್ಲಿ ಮಳೆ
ಮೈಸೂರು ನಗರದಲ್ಲಿ ಸತತ 2 ಗಂಟೆ ಕಾಲ ಮಳೆ ಸುರಿದಿದೆ. ಇದರಿಂದ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಜನರ ಪರದಾಟ ಕಂಡುಬಂದಿದೆ. ಭಾರಿ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮೈಸೂರು ದಸರಾ, ಜಂಬೂ ಸವಾರಿ ಸಂಭ್ರಮದ ಬೆನ್ನಲ್ಲೇ ಮೈಸೂರಿನಲ್ಲಿ ಭಾರೀ ಮಳೆ ಸುರಿದಿದೆ.
ಭಾರಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಅವಾಂತರ
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನಲ್ಲಿ ಮಳೆ ಅಬ್ಬರ ಜೋರಾಗಿದೆ. ಹೆಬ್ಬಾಟ, ಚಲ್ದಿಗಾನಹಳ್ಳಿಯಲ್ಲಿ ಮಳೆಯಿಂದ ಮನೆ ಕುಸಿತಗೊಂಡಿದೆ. ಚಲ್ದಿಗಾನಹಳ್ಳಿಯ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
3 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ
ಇಂದಿನಿಂದ 3 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇಂದಿನಿಂದ ಅ. 17ರವರೆಗೆ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಿಪರೀತ ಮಳೆಯಾಗಲಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಕರ್ನಾಟಕದಲ್ಲಿ ಮಳೆ ಹೆಚ್ಚಾಗಿದೆ.
ಕರ್ನಾಟಕ ಮಾತ್ರವಲ್ಲದೆ ಪಕ್ಕದ ರಾಜ್ಯವಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶದಲ್ಲೂ ಮಳೆ ಹೆಚ್ಚಾಗಲಿದೆ. ಕರ್ನಾಟಕದ ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿದಂತೆ ಉತ್ತರ ಒಳನಾಡಿನಲ್ಲಿ ಇಂದು ಭಾರೀ ಮಳೆಯಾಗಲಿದೆ.
ಜವಾದ್ ಚಂಡಮಾರುತ ಏಳುವ ಸಾಧ್ಯತೆ ಇರುವುದರಿಂದ ದಕ್ಷಿಣ ಭಾರತದಲ್ಲಿ ಮಳೆ ಹೆಚ್ಚಾಗಿದೆ. ಬೆಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಹಾಸನ, ಹಾವೇರಿ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಅ. 17ರವರೆಗೂ ಮಳೆ ಮುಂದುವರೆಯುವ ನಿರೀಕ್ಷೆಯಿದೆ. ಕಳೆದ ತಿಂಗಳ ಅಂತ್ಯದಿಂದಲೂ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿತ್ರದುರ್ಗ, ತುಮಕೂರು, ಬಾಗಲಕೋಟೆ, ಬೆಳಗಾವಿ, ಗದಗ, ಕೊಪ್ಪಳ, ರಾಯಚೂರು, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಕೊಡಗು, ರಾಮನಗರ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಚಿಕ್ಕಬಳ್ಳಾಪುರಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಭಾರೀ ಮಳೆಯಿಂದ ಅವಾಂತರ; ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ವಸ್ತುಗಳಿಗೆ ಹಾನಿ
Published On - 6:53 pm, Fri, 15 October 21