ಬೆಂಗಳೂರು: ಭಾರೀ ಮಳೆಯಿಂದ ಅವಾಂತರ; ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ವಸ್ತುಗಳಿಗೆ ಹಾನಿ
ಬೆಂಗಳೂರಿನ ಲಕ್ಷ್ಮೀನಾರಾಯಣಪುರ, ಬಸವೇಶ್ವರನಗರ, ಗಾಯತ್ರಿ ನಗರ, ಆರ್.ಆರ್.ನಗರ, ಐಡಿಯಲ್ ಹೋಮ್ಸ್, ಪೀಣ್ಯ, ಗುಂಡಪ್ಪ ಲೇಔಟ್, ಬಿಟಿಎಂ ಲೇಔಟ್, ಚೊಕ್ಕಸಂದ್ರದಲ್ಲಿನ ಮನೆಗಳಿಗೆ ನೀರು ನುಗ್ಗಿದೆ
ಬೆಂಗಳೂರು: ನಗರದಲ್ಲಿ ಭಾರೀ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಬೆಂಗಳೂರಿನ ಲಕ್ಷ್ಮೀನಾರಾಯಣಪುರ, ಬಸವೇಶ್ವರನಗರ, ಗಾಯತ್ರಿ ನಗರ, ಆರ್.ಆರ್.ನಗರ, ಐಡಿಯಲ್ ಹೋಮ್ಸ್, ಪೀಣ್ಯ, ಗುಂಡಪ್ಪ ಲೇಔಟ್, ಬಿಟಿಎಂ ಲೇಔಟ್, ಚೊಕ್ಕಸಂದ್ರದಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಪರಿಣಾಮ ಮನೆಗಳಲ್ಲಿದ್ದ ಅಪಾರ ಪ್ರಮಾಣದ ವಸ್ತುಗಳಿಗೆ ಹಾನಿಯಾಗಿದೆ.
ದಾಸರಹಳ್ಳಿಯ ಭಾಗದಲ್ಲಿ ವರುಣನ ಆರ್ಭಟ ದಾಸರಹಳ್ಳಿ ವಲಯದಲ್ಲಿ ಭಾರೀ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಬೆಂಗಳೂರಿನ ಬಾಗಲಗುಂಟೆ, ಮೇದರಹಳ್ಳಿ, ಚೊಕ್ಕಸಂದ್ರ, ರಾಯಲ್ ಎನ್‌ಕ್ಲೇವ್ ಬಡಾವಣೆಗೆ ಮಳೆ ನೀರು ನುಗ್ಗಿದೆ. ಮಳೆಯಿಂದ ರಾಜಕಾಲುವೆ ಬ್ಲಾಕ್ ಆಗಿದೆ. ಈ ಹಿನ್ನೆಲೆಯಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಸದ್ಯ ಸ್ಥಳಕ್ಕೆ ಶಾಸಕ ಆರ್.ಮಂಜುನಾಥ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ತಗ್ಗು ಪ್ರದೇಶಗಳಲ್ಲಿ ಮಳೆ ನೀರು ತುಂಬಿ ಹರಿಯುತ್ತಿದೆ. ಅಲ್ಲದೇ ರಸ್ತೆ ಮೇಲೆ ಕೂಡ ನದಿ ನೀರು ಹರಿಯುತ್ತಿದೆ. ಪರಿಣಾಮ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಶ್ರೀಕಂಠಪುರದಲ್ಲಿ ರಾತ್ರಿ ಇಡೀ ಸುರಿದ ಧಾರಾಕಾರ ಮಳೆಗೆ ಜನಜೀವನ ತತ್ತರಿಸಿದೆ.
10ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ಮಳೆ ನೀರು ದಾಸರಹಳ್ಳಿಯಲ್ಲಿ ಭಾರೀ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದೆ. ಸಿಡೇದಹಳ್ಳಿ, ಬಿಟಿಎಸ್ ಲೇಔಟ್ ನಲ್ಲಿನ ಮನೆಗಳಿಗೆ ಮಳೆ ನೀರು ನುಗ್ಗಿದೆ. ದಿವಾಕರ್, ಜಂಮ್ಮಯ್ಯ, ಮಾಲ ಸೇರಿದಂತೆ 10ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದೆ. ಪರಿಣಾಮ ಮಂಚದ ಮೇಲೇರಿ ಹೆಂಗಸರು, ಮಕ್ಕಳು ಕಳಿತಿದ್ದು, ಅಡುಗೆ ಮನೆಯ ಪಾತ್ರೆಗಳು ನೀರಿನಲ್ಲಿ ತೇಲುತ್ತಿವೆ. ಸೋಪ, ಮಂಚ, ಫ್ರಿಡ್ಜ್ ಸೇರಿದಂತೆ ಇನ್ನಿತರ ವಸ್ತುಗಳು ನೀರಿನಲ್ಲಿ ಮುಳುಗಿವೆ. ಮಳೆಯಿಂದಾದ ಅವಾಂತರ ಸರಿಪಡಿಸಲು ಬಿಬಿಎಂಪಿ ಆಯುಕ್ತರಿಗೆ ಶಾಸಕ ಆರ್.ಮಂಜುನಾಥ್ ಮನವಿ ಮಾಡಿದ್ದು, ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಸ್ಥಳಕ್ಕೆ ಆಗಮಿಸಲಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಮುಂದುವರಿದ ಮಳೆ ಅವಾಂತರ ಕೋಲಾರ ತಾಲೂಕಿನ ಮುದುವಾಡಿ ಕೆರೆ ಕೋಡಿ ಒಡೆವ ಭೀತಿ ಎದುರಾಗಿದೆ. ಸುಮಾರು 500 ಎಕರೆ ವಿಸ್ತೀರ್ಣವಿರುವ ಮುದುವಾಡಿ ಕೆರೆ ಮಳೆಯಿಂದಾಗಿ ಒಡೆಯುವ ಸ್ಥಿತಿ ತಲುಪಿದೆ. ಮುದುವಾಡಿ ಸೇತುವೆ ದಾಟಲು ವಾಹನ ಸವಾರರು ಸರ್ಕಸ್ ಮಾಡುವಂತಾಗಿದೆ. ಇನ್ನು ಕೈಯಲ್ಲಿ ಕೋಲು ಹಿಡಿದು ಮಕ್ಕಳು, ವೃದ್ಧರು ರಸ್ತೆ ದಾಟುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
ಬೆಂಗಳೂರಿನಲ್ಲಿ ಮುಂದುವರಿದ ಮಳೆ ಅಬ್ಬರ: ಮೆಜೆಸ್ಟಿಕ್ ಬಳಿ ಕೆಎಸ್ಆರ್ಟಿಸಿ ಬಸ್ ಮೇಲೆ ಬಿದ್ದ ಮರ
Karnataka Weather Today: ಬೆಂಗಳೂರಿನಲ್ಲಿ ಅ. 17ರವರೆಗೆ ವಿಪರೀತ ಮಳೆ; ಕರಾವಳಿಯಲ್ಲೂ ನಿಲ್ಲದ ವರುಣನ ಆರ್ಭಟ
Published On - 7:54 am, Fri, 15 October 21