ಪಟ್ಟದ ಫೈಟ್​​ಗೆ ಹೊಸ ಟ್ವಿಸ್ಟ್​​: ಸಿದ್ದರಾಮಯ್ಯ ಪರ ಅಖಾಡಕ್ಕಿಳಿದ ಅಹಿಂದ ನಾಯಕರು

ಕರ್ನಾಟಕದಲ್ಲಿ ಸಿಎಂ ಪಟ್ಟದ ಕಾಳಗ ತೀವ್ರಗೊಂಡಿದೆ. ಡಿಸಿಎಂ ಡಿಕೆಶಿ ಪರ ಅವರ ಬೆಂಬಲಿಗರು ಸೇರಿ ಕೆಲ ಸ್ವಾಮೀಜಿಗಳು ಧ್ವನಿ ಎತ್ತಿದ್ದಾರೆ. ಇತ್ತ ಸಿದ್ದರಾಮಯ್ಯ ಅವರ ಬಣವೂ ಪ್ರತಿತಂತ್ರ ರೂಪಿಸುತ್ತಿದೆ. ಈ ನಡುವೆ ಕಾಂಗ್ರೆಸ್​​ನಲ್ಲಿನ ರಾಜಕೀಯ ಬೆಳವಣಿಗೆಗಳಿಗೆ ಹೊಸ ಟ್ವಿಸ್ಟ್​​ ಸಿಕ್ಕಿದೆ. ಕಾಂಗ್ರೆಸ್​​ನ ವೋಟ್​​ ಬ್ಯಾಂಕ್​​ ಎಂದೇ ಕರೆಸಿಕೊಳ್ಳುವ ವರ್ಗ ಇದರಲ್ಲಿ ಎಂಟ್ರಿಯಾಗಿದ್ದು, ಖಡಕ್​​ ಎಚ್ಚರಿಕೆ ರವಾನಿಸಿದೆ.

ಪಟ್ಟದ ಫೈಟ್​​ಗೆ ಹೊಸ ಟ್ವಿಸ್ಟ್​​: ಸಿದ್ದರಾಮಯ್ಯ ಪರ ಅಖಾಡಕ್ಕಿಳಿದ ಅಹಿಂದ ನಾಯಕರು
ಡಿಕೆ ಶಿವಕುಮಾರ್-ಸಿದ್ದರಾಮಯ್ಯ

Updated on: Nov 27, 2025 | 6:28 PM

ಬೆಂಗಳೂರು, ನವೆಂಬರ್​​ 27: ಸಿಎಂ ಪಟ್ಟಕ್ಕಾಗಿ ಕಾಂಗ್ರೆಸ್​​ ನಾಯಕರ ಕಾಳಗಕ್ಕೆ ಅಹಿಂದ ನಾಯಕರ ಎಂಟ್ರಿಯಾಗಿದೆ. ಹಿಂದುಳಿದ ವರ್ಗಗಳ ನಾಯಕ ಎಂದೇ ಪ್ರಸಿದ್ಧಿ ಪಡೆದಿರುವ ಸಿದ್ದರಾಮಯ್ಯ ಸಂಕಷ್ಟಕ್ಕೆ ಸಿಲುಕಿದಾಗೆಲ್ಲ ಅವರ ಬೆನ್ನಿಗೆ ನಿಂತಿದ್ದ ಅಹಿಂದ, ಈಗಲೂ ಅವರ ಪರ ಅಕಾಡಕ್ಕಿಳಿದಿದೆ. ಡಿಸಿಎಂ ಡಿ.ಕೆ. ಶಿವಕುಮಾರ್​​ ಸೇರಿ ಅವರ ಪರ ಮಾತನಾಡಿರುವ ನಾಯಕರು, ಸ್ವಾಮೀಜಿಗಳಿಗೆ ಟಾಂಗ್​​ ಕೊಟ್ಟಿದೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ, ಅಹಿಂದ ವರ್ಗದವರು ಕಾಂಗ್ರೆಸ್​​ಗೆ ಮತ್ತು ಲಿಂಗಾಯತರು ಬಿಜೆಪಿ ಗೆ ಮತ ಹಾಕಿದ್ದಾರೆ. ಹೀಗಿರುವಾಗ ನನ್ನಿಂದ ಸರ್ಕಾರ ಬಂತು, ನಮ್ಮ ನಾಯಕರೇ ಸರ್ಕಾರ ಅಧಿಕಾರಕ್ಕೆ ತಂದಿದ್ದಾರೆ ಅನ್ನೋದು ತಪ್ಪು ಎಂದಿದ್ದಾರೆ. ಸದ್ಯ ಉಂಟಾಗಿರುವ ಗೊಂದಲಗಳಿಗೆ ಕಾರಣ ಏನು ಅನ್ನೋದು ನಮಗೆ ಅರಿವಿಲ್ಲ. ಆದರೆ ಈಗ ನಡೆಯುತ್ತಿರುವ ವಿಷಯದಲ್ಲಿ ಸಂಘಟನೆಗಳು ಪಾಲ್ಗೊಳ್ಳುತ್ತಿರುವುದು ನಮಗೆ ಆತಂಕವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಡಿಕೆಶಿ ಅಸ್ತ್ರಕ್ಕೆ ಸಿದ್ದರಾಮಯ್ಯ ಬಣದಿಂದ ‘ಅಹಿಂದ’ ಬ್ರಹ್ಮಾಸ್ತ್ರ

‘ಅಧಿಕಾರ ಹಂಚಿಕೆ ಬಗ್ಗೆ ವಾಗ್ದಾನ ಮಾಡಿಲ್ಲ’

ಅಹಿಂದ ವರ್ಗದ ಮತ ಪಡೆದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ನಮ್ಮ ರಕ್ಷಿಸುವ ಮುಖ್ಯಮಂತ್ರಿ ಸೀಮಿತಿಗೊಳಿಸಲು ಒಪ್ಪುವುದಿಲ್ಲ. ಎರಡೂವರೆ ವರ್ಷಕ್ಕೆ ಸಿದ್ದರಾಮಯ್ಯ ಅವರನ್ನು ಸೀಮಿತ ಮಾಡುವುದಕ್ಕೆ ನಮ್ಮ ವಿರೋಧವಿದೆ. ಹೈಕಮಾಂಡ್ ಆಗಲಿ, ಸಿಎಂ ಅಥವಾ ಡಿಸಿಎಂ ಅಧಿಕಾರ ಹಂಚಿಕೆಯ ಬಗ್ಗೆ ವಾಗ್ದಾನ ಮಾಡಿಲ್ಲ. ಕೆಲವರು ಅವರ ಹಿತಾಸಕ್ತಿಗಾಗಿ ಎರಡೂವರೆ ವರ್ಷ ಅಂತಾರೆ. ರಾಜ್ಯ ಒಕ್ಕಲಿಗರ ಸಂಘದಿಂದಲೂ ಸುದ್ದಿಗೋಷ್ಠಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಡಿ.ಕೆ. ಶಿವಕುಮಾರ್​​ ಅವರ ಶ್ರಮಕ್ಕೆ ಕೂಲಿ ಕೇಳುತ್ತಿದ್ದಾರೆ. ಕೂಲಿ ಅಂದ್ರೆ ಏನು? ಡಿಕೆಶಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ನೀಡಲಾಗಿದೆ. ಹೀಗಾಗಿ ಯಾರೇ ಆದರೂ ಹೇಳಿಕೆ ನೀಡುವಾಗ ನೋಡಿ ಮಾತಾಡಬೇಕು ಎಂದು ರಾಮವಂದ್ರಪ್ಪ ಎಚ್ಚರಿಸಿದ್ದಾರೆ.

ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಬಣದ ಕಾಂಗ್ರೆಸ್​​ ನಾಯಕರಿಂದಲೂ ಅಹಿಂದ ಅಸ್ತ್ರ ಪ್ರಯೋಗಕ್ಕೆ ತಯಾರಿ ನಡೆದಿದೆ ಎನ್ನಲಾಗಿದೆ. ಅಹಿಂದ ಅಸ್ತ್ರದ ಮೂಲಕವೇ ಹೈಕಮಾಂಡ್ ಮೇಲೆ ಒತ್ತಡ ಹೇರೋಣ. ಅಹಿಂದರ ಬಿಟ್ಟರೆ ಕಾಂಗ್ರೆಸ್​​ಗೆ ರಾಜ್ಯದಲ್ಲಿ ಭವಿಷ್ಯವಿಲ್ಲ ಎಂಬುದನ್ನು ವರಿಷ್ಠರಿಗೆ ಮನವರಿಕೆ ಮಾಡೋಣ ಎಂದು ಕೆಲ ಸಚಿವರು ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:26 pm, Thu, 27 November 25