ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಪೂರ್ವಜರ ಮನೆಗಳ ನಾಯಿಯೂ ಸತ್ತಿಲ್ಲ ಅಂತ ಹೇಳಿದ್ದು, ಖರ್ಗೆ ಮಾತನ್ನು ತಿರುಚಲಾಗಿದೆ- ರಾಮಲಿಂಗ ರೆಡ್ಡಿ

| Updated By: ಸಾಧು ಶ್ರೀನಾಥ್​

Updated on: Dec 22, 2022 | 1:26 PM

ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯವರು ಪಾಲ್ಗೊಂಡಿಲ್ಲ. ಬ್ರಿಟೀಷ್ ಸೇನೆಯನ್ನು ಬಲಪಡಿಸಲು ಹೋದವರು ಇವರು. ಮುಸ್ಲಿಮರು, ಹಿಂದುಳಿದವರು, ಪರಿಶಿಷ್ಟರಿಗೆ ಅಧಿಕಾರ ಸಿಗೋದಾದ್ರೆ ಅಂತಹ ಸ್ವಾತಂತ್ರ್ಯ ಬೇಡ ಅಂದವರು ಇವರೇ -ರಾಮಲಿಂಗ ರೆಡ್ಡಿ

ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಪೂರ್ವಜರ ಮನೆಗಳ ನಾಯಿಯೂ ಸತ್ತಿಲ್ಲ ಅಂತ ಹೇಳಿದ್ದು, ಖರ್ಗೆ ಮಾತನ್ನು ತಿರುಚಲಾಗಿದೆ- ರಾಮಲಿಂಗ ರೆಡ್ಡಿ
ರಾಮಲಿಂಗ ರೆಡ್ಡಿ
Follow us on

ಬೆಂಗಳೂರು: ಕಾಂಗ್ರೆಸ್ ಪಕ್ಷದ ವತಿಯಿಂದ ಮಾಜಿ‌ ಸಚಿವ ರಾಮಲಿಂಗ ರೆಡ್ಡಿ (Ramalinga Reddy) ಪತ್ರಿಕಾಗೋಷ್ಟಿ ನಡೆಸಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಸ್ವಾತಂತ್ರ್ಯ ಚಳುವಳಿಯಲ್ಲಿ ಬಿಜೆಪಿ ಪೂರ್ವಜರು ಭಾಗವಹಿಸಿಲ್ಲ ಅಂತ ಹೇಳಿದ್ದಾರೆ ವಿನಃ, ಬಿಜೆಪಿ (BJP) ನಾಯಿಗಳು ಅಂತಾ ಖರ್ಗೆ ಹೇಳಿಲ್ಲ. ಬಿಜೆಪಿ ಯವರು ಮಲ್ಲಿಕಾರ್ಜುನ ಖರ್ಗೆಯವರ ಮಾತನ್ನು ತಿರುಚುತ್ತಿದ್ದಾರೆ. ಅಷ್ಟಕ್ಕೂ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯ (Kharge’s dog remarks) ಅರ್ಥ ಬಿಜೆಪಿ ಯವರ ಪೂರ್ವಜರ‌ ನಾಯಿಯೂ ಸತ್ತಿಲ್ಲ ಅಂತಾ ಅಷ್ಟೇ. ಸ್ವಾತಂತ್ರ್ಯ ಹೋರಾಟಗಲ್ಲಿ ಕಾಂಗ್ರೆಸ್ಸಿಗರು ಪ್ರಾಣ ತೆತ್ತಿದ್ದಾರೆ, ಆದರೆ ಬಿಜೆಪಿ ಪೂರ್ವಜರ ಮನೆ ನಾಯಿಯೂ ಸತ್ತಿಲ್ಲ ಅಂತ ಹೇಳಿದ್ದು ಎಂದು ವ್ಯಾಖ್ಯಾನಿಸಿದ್ದಾರೆ.

ಹಾಗಾದ್ರೆ ಕಾಂಗ್ರೆಸ್ ಮುಖಂಡರನ್ನು ನಾಯಿಗೆ ಹೋಲಿಸಿರುವ ಬಿಜೆಪಿ ನಾಯಕರನ್ನು ಯಾವುದಕ್ಕೆ ಹೋಲಿಸಬೇಕು? ನಾಯಿಗಳಿಗೆ ಹೋಲಿಸೋದು ತಪ್ಪು, ಅದು ಕೂಡ ನಿಯತ್ತಿನ ಪ್ರಾಣಿ. ಡಿಕ್ಷನರಿ ನೋಡಿ ನಾನು ಹೇಳ್ತೀನಿ. ಇನ್ಯಾವುದಾದ್ರೂ ಪ್ರಾಣಿಗೆ ಹೋಲಿಸಬಹುದ ಅಂತಾ. ಜಾನ್ ಎಫ್ ಕೆನಡಿ ಒಂದು ಮಾತು ಹೇಳಿದ್ದಾರೆ: ಒಂದೇ ಕಡೆ‌ ಹಲವು ಮೂರ್ಖರು ಸೇರಿದ್ರೂ ಬಹುಮತ ಆಗುತ್ತೆ ಅಂತ ಎಂದು ಮಾರ್ಮಿಕವಾಗಿ ರಾ. ರೆಡ್ಡಿ ಹೇಳಿದ್ದಾರೆ.

1947 ಸ್ವಾತಂತ್ರ್ಯ ದಲ್ಲಿ ಬಿಜೆಪಿಯವರು ಪಾಲ್ಗೊಂಡಿಲ್ಲ. ಬ್ರಿಟೀಷ್ ಸೇನೆಯನ್ನು ಬಲಪಡಿಸಲು ಹೋದವರು ಇವರು. ಮುಸ್ಲಿಮರು, ಹಿಂದುಳಿದವರು, ಪರಿಶಿಷ್ಟರಿಗೆ ಅಧಿಕಾರ ಸಿಗೋದಾದ್ರೆ ಅಂತಹ ಸ್ವಾತಂತ್ರ್ಯ ಬೇಡ ಅಂದವರು ಇವರೇ. ಬ್ರಿಟೀಷರಿಗೆ ಕ್ಷಮಾಪಣೆ ಪತ್ರ ಬರೆದು, ಬ್ರಟೀಷರ ಕಾಲಿಗೆ ಬಿದ್ದವರು ಇವರು. ಸೋನಿಯಾ ಗಾಂಧಿ ಇಟಲಿಯವರಾದ್ರೂ ರಾಜೀವ್ ಗಾಂಧಿ ಜತೆಯೇ ಮದುವೆ ಆದರೂ ಭಾರತದ ಹೆಣ್ಣು ಸೋನಿಯಾ ಗಾಂಧಿ. ದೇಶಕ್ಕಾಗಿ ಪ್ರಾಣ ಒತ್ತೆ ಇಟ್ಟವರು. ಇಂಥವರನ್ನು ಚುಚ್ವಿ ಚುಚ್ಚಿ ಮಾತಾಡ್ತೀರಲ್ಲ‌ನಾಚಿಕೆ ಆಗಲ್ವಾ ನಿಮಗೆ? ಇದೇನಾ ನಿಮ್ಮ ಸಂಸ್ಕೃತಿ‌? ಎಂದು ರಾಮಲಿಂಗ ರೆಡ್ಡಿ ಖಾರವಾಗಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲೂ ಕೊರೊನಾ ಆತಂಕ: ಕ್ರಿಸ್ಮಸ್, ಹೊಸ ವರ್ಷಾಚರಣೆಗೆ ಬೀಳುತ್ತಾ ಬ್ರೇಕ್? ಕೆಂಪೇಗೌಡ ಏರ್​​ಪೋರ್ಟ್​ನಲ್ಲಿ ವಿದೇಶಿ ಪ್ರಯಾಣಿಕರಿಗೆ ಸ್ಕ್ರೀನಿಂಗ್ ಶುರು

ಮೋದಿಯವರು ವಿಶ್ವ ಗುರು ಅಂತ ಪೋಸ್ ಕೊಡ್ತಾರೆ. ಅದೆಲ್ಲ ನೆಹರೂ ಅವರ ಕಾಲದಲ್ಲಿಯೇ ಆಗಿದೆ. ಅವರ ವಿದೇಶಾಂಗ ನೀತಿ ಕಾರಣ ದೇಶ ಬಲಾಢ್ಯ ಆಗಿದೆ, ಚೀನಾ ಗಡಿ ಅತಿಕ್ರಮಣ ಮಾಡಿದ್ದರೂ ಯಾರೂ ಗಡಿ ಪ್ರವೇಶ ಮಾಡಿಲ್ಲ ಅಂತ ಸುಳ್ಳು ಹೇಳ್ತಾರೆ. ಅದೇ ಇಂದಿರಾ ಗಾಂಧಿ ಪಾಕಿಸ್ತಾನವನ್ನು ಎರಡು ತುಂಡು ಮಾಡಿ ಹಾಕಿದರು. ಬರೀ ಸುಳ್ಳು, ಜಂಭ ಕೊಚ್ಚಿಕೊಳ್ಳೋದು ಬಿಜೆಪಿಯದ್ದು. ಕಾಂಗ್ರೆಸ್ ಬಗ್ಗೆ ಮಾತಾನಾಡುವ ನೈತಿಕ ಹಕ್ಕು ಬಿಜೆಪಿ ಗಿಲ್ಲ. ಜನ ನಿಮಗೆ ಪಾಠ ಕಲಿಸುತ್ತಾರೆ. ಮುಂದೆ‌ ನೀವು ಮನೆಗೆ ಹೋಗ್ತೀರಾ ಎಂದು ರಾಮಲಿಂಗ ರೆಡ್ಡಿ ಹೇಳಿದರು.

ಭಾರತ್ ಜೊಡೊ ಯಾತ್ರೆ ನಿಲ್ಲಿಸಲು ಕೇಂದ್ರ ಸಚಿವ ಪತ್ರ ಬರೆದಿರುವ ವಿಚಾರ ಪ್ರಸ್ತಾಪಿಸಿದ ರಾಮಲಿಂಗ ರೆಡ್ಡಿ ರಾಹುಲ್ ಗಾಂಧಿ ಟೀಂ ಆ ಬಗ್ಗೆ ತೀರ್ಮಾ‌ನ‌‌ ತೆಗೆದುಕೊಳ್ಳುತ್ತದೆ. ಕೋವಿಡ್ ಕಾಂಗ್ರೆಸ್ ನವರು ಇದ್ದ ಕಡೆ ಮಾತ್ರ ಬರುತ್ತೆ. ಕೊರೊನಾಕ್ಕೂ ಕಾಂಗ್ರೆಸ್ ಗೂ ಏನೋ ಸಂಬಂಧ ಇರೋ ಥರಾ ಬಿಜೆಪಿ ನಡೆದುಕೊಳ್ಳುತ್ತೆ. ಮುಖ್ಯಮಂತ್ರಿ ಜನಸ್ಪಂದನ ಕಾರ್ಯಕ್ರಮ ಮಾಡ್ತಾರೆ ಅಲ್ಲಿ ಕೋವಿಡ್ ಬರಲ್ಲ! ಅಧಿವೇಶನ ನಡೀತಿದೆ ಅಲ್ಲಿ ಕೋವಿಡ್ ಬರಲ್ಲ! ಭಾರತ್ ಜೊಡೊ‌ ಯಾತ್ರೆ ಮಾಡಿದ‌ ಕಡೆ ಕೊರೊನಾ ಬರುತ್ತೆ! ಕಾಂಗ್ರೆಸ್ ರ್ಯಾಲಿ ಮಾಡೋ‌ ಕಡೆ ಕೊರೊನಾ ಬರುತ್ತೆ! ಎಂದು ಅವರು ಲೇವಡಿ ಮಾಡಿದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ