ಬೆಂಗಳೂರು: ಬೆಂಗಳೂರಿನಿಂದ ಕೊಲ್ಕತ್ತಾಗೆ ತೆರಳುತ್ತಿದ್ದ ಏರ್ ಇಂಡಿಯಾ (Air India) ವಿಮಾನದ ಪೈಲಟ್ ತನಗೆ ಅವಮಾನ ಮಾಡಿ ವಿಮಾನಕ್ಕೆ ಹತ್ತಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂದು ವಿಕಲಚೇತನ ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ. ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಕೆಲಸ ಮಾಡುತ್ತಿರುವ ಕೌಶಿಕ್ ಕುಮಾರ್ ಮಜುಂದಾರ್ ಬೆಂಗಳೂರಿನಿಂದ ಕೊಲ್ಕತ್ತಾಗೆ ವಿಮಾನದ ಟಿಕೆಟ್ ಬುಕ್ ಮಾಡಿದ್ದರು. ಆದರೆ, ಅವರು ಮಧ್ಯರಾತ್ರಿ 2.40ಕ್ಕೆ ಕೋಲ್ಕತ್ತಾಗೆ ಟೇಕ್ ಆಫ್ ಆಗಬೇಕಿದ್ದ AI-748 ಬೆಂಗಳೂರು-ಕೋಲ್ಕತ್ತಾ ವಿಮಾನ ಹತ್ತಲು ತೆರಳಿದಾಗ ಅದರ ಪೈಲಟ್ ಅವರನ್ನು ತಡೆದು, ಅವಮಾನಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಮಜುಂದಾರ್, ವಿಮಾನದ ಪೈಲಟ್ ನನ್ನ ಎಲೆಕ್ಟ್ರಿಕ್ ವೀಲ್ಚೇರ್ನ ಬ್ಯಾಟರಿಗಳ ಸಂಪರ್ಕ ಕಡಿತಗೊಳಿಸುವಂತೆ ಆದೇಶಿಸಿದರು. ಆದರೆ, ಹಾಗೆ ಮಾಡಿದರೆ ತನಗೆ ಕಷ್ಟವಾಗುತ್ತದೆ, ವಿಮಾನವೇರಲು ಆಗುವುದಿಲ್ಲ ಎಂದು ವಿವರಿಸಲು ಮಜುಂದಾರ್ ಪ್ರಯತ್ನಿಸಿದರೂ ಪೈಲಟ್ ಅದನ್ನು ಕೇಳದೆ ಹಠ ಹಿಡಿದರು. ಬೇರೆ ಪ್ರಯಾಣಿಕರಿಗೆ ವಿಮಾನವೇರಲು ಅನುಮತಿ ನೀಡಿದ ಪೈಲಟ್ ನನ್ನನ್ನು ತಡೆದು, ಅವಮಾನಿಸಿದ್ದಾರೆ ಎಂದು ಮಜುಂದಾರ್ ಆರೋಪ ಮಾಡಿದ್ದಾರೆ.
“ಏರ್ ಇಂಡಿಯಾದ ಪೈಲಟ್ ನನ್ನನ್ನು ವಿಮಾನ ಹತ್ತದಂತೆ ತಡೆದರು. ಅವರು ನನ್ನ ವೀಲ್ ಚೇರ್ ಬ್ಯಾಟರಿಯ ಸಂಪರ್ಕ ಕಡಿತಗೊಳಿಸುವಂತೆ ಹೇಳಿದರು. ಒಂದುವೇಳೆ ಹಾಗೆ ಮಾಡದಿದ್ದರೆ ವಿಮಾನ ಹತ್ತಲು ಬಿಡುವುದಿಲ್ಲ ಎಂದು ಹೆದರಿಸಿದರು. ಒಂದು ಗಂಟೆಗೂ ಹೆಚ್ಚು ಕಾಲ ನನ್ನನ್ನು ಅಗ್ನಿಪರೀಕ್ಷೆಗೆ ಒಳಪಡಿಸಿದ ನಂತರವೂ ನನಗೆ ವಿಮಾನವೇರಲು ಅನುಮತಿ ನೀಡಲಿಲ್ಲ” ಎಂದು ಮಜುಂದಾರ್ ತಮ್ಮ ಜೊತೆ ಅನುಚಿತವಾಗಿ ವರ್ತಿಸಿದ ಪೈಲಟ್ ವರ್ತನೆಗೆ ಕಿಡಿ ಕಾರಿದ್ದಾರೆ.
ಬೆಂಗಳೂರಿನ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನ ಪ್ರಾಧ್ಯಾಪಕರಾದ ಕೌಶಿಕ್ ಕುಮಾರ್ ಮಜುಂದಾರ್ ಅವರು 2009ರಿಂದ ಏರ್ ಇಂಡಿಯಾ ವಿಮಾನಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಅವರು ಇದುವರೆಗೂ ಕನಿಷ್ಠ 25 ಬಾರಿ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಇದಕ್ಕೂ ಮೊದಲು ಒಮ್ಮೆ ಕೂಡ ಅವರಿಗೆ ಇದೇ ರೀತಿಯ ಅವಮಾನ ಆಗಿತ್ತು. ತಮ್ಮ ವೈದ್ಯರೊಂದಿಗೆ ಅಪಾಯಿಂಟ್‌ಮೆಂಟ್ ಹೊಂದಿದ್ದ ಮಜುಂದಾರ್ ಕೋಲ್ಕತ್ತಾದ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಮಹತ್ವದ ಮೀಟಿಂಗ್ಗೆ ಹೊರಟಿದ್ದರು. ಪೈಲಟ್‌ನ “ಅಮಾನವೀಯ ವರ್ತನೆ”ಯಿಂದಾಗಿ ಅವರು ಮೀಟಿಂಗ್ಗೆ ಹೋಗಲು ಸಾಧ್ಯವಾಗಲಿಲ್ಲ.
ಇದು ಎರಡನೇ ಬಾರಿಗೆ ಶ್ರೀ ಮಜುಂದಾರ್ ಅವರನ್ನು ಏರ್ ಇಂಡಿಯಾ ವಿಮಾನ ಹತ್ತದಂತೆ ತಡೆಯಲಾಗಿದೆ. ಏರ್ ಇಂಡಿಯಾ ವಿಮಾನದಲ್ಲಿ ಉಚಿತವಾಗಿ ಆಂಬು ಲಿಫ್ಟ್ ಸೌಲಭ್ಯ ನೀಡುತ್ತಾರೆ. ಇತರ ವಿಮಾನಗಳಲ್ಲಿ ಅವರು ಆಂಬು ಲಿಫ್ಟ್‌ಗೆ ಶುಲ್ಕ ವಿಧಿಸುತ್ತಾರೆ. ಹೀಗಾಗಿ, ನಾನು ಏರ್ ಇಂಡಿಯಾ ವಿಮಾನದಲ್ಲೇ ಹೆಚ್ಚಾಗಿ ಪ್ರಯಾಣ ಮಾಡುತ್ತಿದ್ದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Shocking News: ಮಾರ್ಗ ಮಧ್ಯೆ ಶಿಫ್ಟ್ ಮುಗಿದಿದ್ದರಿಂದ ವಿಮಾನ ಹಾರಿಸೋದಿಲ್ಲ ಎಂದ ಪೈಲಟ್; ಆಮೇಲೇನಾಯ್ತು?
Shocking News: ಹಸು ಕದ್ದವನ ಅರ್ಧ ತಲೆ, ಮೀಸೆ ಬೋಳಿಸಿ, ಮುಖಕ್ಕೆ ಮಸಿ ಬಳಿದು ಮೆರವಣಿಗೆ