ವೈದ್ಯರ ಎಡವಟ್ಟಿಗೆ 10 ವರ್ಷದ ಬಾಲಕ ಸಾವು, ಜ್ವರ ಎಂದು ಆಸ್ಪತ್ರೆಗೆ ಹೋಗಿ ಇಂಜೆಕ್ಷನ್‌ ಹಾಕಿಸಿದ್ದೇ ತಪ್ಪಾಯ್ತಾ?

| Updated By: ಆಯೇಷಾ ಬಾನು

Updated on: Oct 10, 2023 | 2:11 PM

ಮೂರು-ನಾಲ್ಕು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದೆ ಎಂದು ಪೋಷಕರು ಕೋಣನಕುಂಟೆಯ ರಾಜನಂದಿನಿ ಆಸ್ಪತ್ರೆಗೆ ಮಗನನ್ನು ಕರೆದುಕೊಂಡು ಹೋಗಿದ್ದರು, ಅಲ್ಲಿ ವೈದ್ಯ ನೀಡಿದ ಇಂಜೆಕ್ಷನ್​ನಿಂದ ಬಾಲಕ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. ಇಂಜೆಕ್ಷನ್ ನೀಡಿದ ಜಾಗದಲ್ಲಿ ನೋವು, ಊತ ಕಾಣಿಸಿಕೊಂಡಿದ್ದು ಎಷ್ಟೇ ಆಸ್ಪತ್ರೆಗಳನ್ನು ಸುತ್ತಾಡಿ ಸರ್ಜರಿ ಮಾಡಿದರೂ ಬಾಲಕನನ್ನು ಉಳಿಸಿಕೊಳ್ಳಲಾಗಿಲ್ಲ.

ವೈದ್ಯರ ಎಡವಟ್ಟಿಗೆ 10 ವರ್ಷದ ಬಾಲಕ ಸಾವು, ಜ್ವರ ಎಂದು ಆಸ್ಪತ್ರೆಗೆ ಹೋಗಿ ಇಂಜೆಕ್ಷನ್‌ ಹಾಕಿಸಿದ್ದೇ ತಪ್ಪಾಯ್ತಾ?
ಪ್ರೀತಮ್ ನಾಯ್ಕ್
Follow us on

ಬೆಂಗಳೂರು, ಅ.10: ವೈದ್ಯರ ಎಡವಟ್ಟಿನಿಂದಾಗಿ (Doctor’s Negligence) ಹತ್ತು ವರ್ಷದ ಬಾಲಕ ಮೃತಪಟ್ಟಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಕೋಣನಕುಂಟೆ (Konanakunte) ನಿವಾಸಿ ಪ್ರೀತಮ್ ನಾಯ್ಕ್ (10) ಎಂಬ ಬಾಲಕ ವೈದ್ಯರ ಎಡವಟ್ಟಿನಿಂದಾಗಿ ಪ್ರಾಣ ಕಳೆದುಕೊಂಡಿದ್ದಾನೆ ಎನ್ನಲಾಗಿದೆ. ಘಟನೆ ಬಳಿನ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಬಾಲಕನ ಕುಟುಂಬಸ್ಥರು ದೂರು ನೀಡಿದ್ದು ರಾಜನಂದಿನಿ ಆಸ್ಪತ್ರೆ ವೈದ್ಯರ ವಿರುದ್ದ CRPC 174C ಅಡಿಯಲ್ಲಿ ಕೇಸ್ ದಾಖಲಾಗಿದೆ. ಬಾಲಕನ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಬಾಲಕ ಪ್ರೀತಮ್​ಗೆ ಅ.6ರಂದು ಜ್ವರ ಕಾಣಿಸಿಕೊಂಡಿತ್ತು. ಜ್ವರ ಹೆಚ್ಚಾದ ಹಿನ್ನೆಲೆ ಕುಟುಂಬಸ್ಥರು ತಮ್ಮ ಹತ್ತಿರದ ರಾಜನಂದಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದರು. ಈ ವೇಳೆ ಅಲ್ಲಿನ ವೈದ್ಯರು ಜ್ವರ ಕಡಿಮೆ ಆಗಲೆಂದು ಒಂದು ಇಂಜೆಕ್ಷನ್‌ ನೀಡಿ ಬಾಲಕನನ್ನು ಮನೆಗೆ ಕಳಿಸಿದ್ದಾರೆ. ವಾಪಸ್ಸು ಮನೆಗೆ ಬಂದ ಬಳಿಕ ಮರುದಿನ ಇಂಜೆಕ್ಷನ್‌ ನೀಡಿದ್ದ ಜಾಗದಲ್ಲಿ ನೋವು, ಊತ ಕಂಡು ಬಂದಿದೆ. ಆಗ ಗಾಬರಿಗೊಂಡ ಪೋಷಕರು ಮತ್ತೆ ತಕ್ಷಣ ಮಗನನ್ನು ರಾಜನಂದಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಗ ವೈದ್ಯ ಊತ ನೋಡಿ ಕೆಲ ಟಾನಿಕ್ ಮತ್ತು ಮೆಡಿಸಿನ್ ನೀಡಿ ಕಳಿಸಿದ್ದಾರೆ. ನೋವು ಕಡಿಮೆ ಆಗದೆ ಕಾಲು ಊತ ಹೆಚ್ಚಾಗಿದೆ. ಆಗ ಇಲ್ಲಿ ಏನು ಮಾಡಲು ಆಗಲ್ಲಾ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ತಿಳಿಸಿದ್ದಾರೆ. ನಂತರ ಅ.8ರಂದು ರಾಜನಂದಿನಿ ಆಸ್ಪತ್ರೆಯಿಂದ ಸ್ಥಳೀಯ ಮತ್ತೊಂದು ಆಸ್ಪತ್ರೆಗೆ ಮಗನನ್ನು ಕುಟುಂಬಸ್ಥರು ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ಕೂಡ ಚಿಕಿತ್ಸೆ ಆಗಲ್ಲ ಎಂದಾಗ ಅದೇ ದಿನ ಸ್ಥಳೀಯ ಆಸ್ಪತ್ರೆ ವೈದ್ಯರ ಸೂಚನೆ ಮೇರೆಗೆ ರಾಜಾಜಿನಗರದ ಇಎಸ್​ಐ ಆಸ್ಪತ್ರೆಗೆ ಬಾಲಕನನ್ನು ದಾಖಲಿಸಲಾಗಿದೆ.

ಇದನ್ನೂ ಓದಿ: ‘ನೀನು 16 ವರ್ಷ ಮಾತ್ರ ಬದುಕೋದು ಅಂತ ಮೊದಲೇ ತಿಳಿದಿದ್ದರೆ..’: ಮೀರಾ ಸಾವಿಗೆ ತಾಯಿಯ ಭಾವುಕ ಪತ್ರ

ರಾತ್ರಿ ಹತ್ತು ಘಂಟೆ ಸುಮಾರಿಗೆ ರಾಜಾಜಿನಗರ ಇಎಸ್​ಐ ಆಸ್ಪತ್ರೆಯಲ್ಲಿ ಸರ್ಜರಿ ಮಾಡಲಾಗಿದ್ದು ಬಾಲಕನಿಗೆ ಕಿಡ್ನಿ ಫೇಲ್ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ಅ.9ರಂದು ಬಾಲಕನನ್ನು ನಾರಾಯಣ ಹೃದಯಾಲಯಕ್ಕೆ ದಾಖಲು ಮಾಡಲು ಹೋಗುತ್ತಿದ್ದಾಗ ದಾರಿ ಮಧ್ಯೆ ಬಾಲಕ ಕೊನೆಯುಸಿರೆಳೆದಿದ್ದಾನೆ. ಘಟನೆ ಸಂಬಂಧ ಪೋಷಕರು ಕೋಣನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ರಾಜನಂದಿನಿ ಆಸ್ಪತ್ರೆ ವೈದ್ಯರ ವಿರುದ್ದ CRPC 174C ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:07 pm, Tue, 10 October 23