ಬೆಂಗಳೂರು: ಸಂಪೂರ್ಣ ಹದಗೆಟ್ಟ ಆನೇಕಲ್- ಚಂದಾಪುರ ಮುಖ್ಯರಸ್ತೆ; ವಾಹನ ಸವಾರರು ಹೈರಾಣು

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 09, 2023 | 10:20 PM

ಸಿಲಿಕಾನ್ ಸಿಟಿ ಬೆಂಗಳೂರನ್ನ ಐಟಿ ಸಿಟಿ ಹಾಗೂ ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುತ್ತದೆ. ಆದ್ರೆ, ಇಲ್ಲಿನ ರಸ್ತೆಗಳು ಮಾತ್ರ ಹಳ್ಳಗುಂಡಿಗಳಿಂದ ಹದಗೆಟ್ಟಿದ್ದು, ಯಮಸ್ವರೂಪಿ ರಸ್ತೆಯಲ್ಲಿ ಸಂಚರಿಸಲಾಗದೆ ವಾಹನ ಸವಾರರು ಹೈರಾಣಾಗಿ ಹೋಗಿದ್ದಾರೆ. ಬೆಂಗಳೂರು ಹೊರವಲಯದ ಬಹುತೇಕ ರಸ್ತೆಗಳಲ್ಲಿ ಯಮಸ್ವರೂಪಿ ಹಳ್ಳಗುಂಡಿಗಳದ್ದೇ ಕಾರುಬಾರಾಗಿದ್ದು, ವಾಹನ ಸವಾರರಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ.

ಬೆಂಗಳೂರು: ಸಂಪೂರ್ಣ ಹದಗೆಟ್ಟ ಆನೇಕಲ್- ಚಂದಾಪುರ ಮುಖ್ಯರಸ್ತೆ; ವಾಹನ ಸವಾರರು ಹೈರಾಣು
ಹದಗೆಟ್ಟ ರಸ್ತೆ
Follow us on

ಬೆಂಗಳೂರು, ನ.09: ಜಿಲ್ಲೆಯ ಆನೇಕಲ್(Anekal) ತಾಲ್ಲೂಕಿನಿಂದ ಚಂದಾಪುರಕ್ಕೆ ಸಂಪರ್ಕ ಕಲ್ಪಿಸುವ ಸರಿಸುಮಾರು ಹದಿಮೂರು ಕಿಲೋಮೀಟರ್ ರಸ್ತೆ, ಸಂಪೂರ್ಣ ಹಳ್ಳಗುಂಡಿಗಳಿಂದ ಕೂಡಿದ್ದು ವಾಹನ ಸವಾರರನ್ನ ನಿತ್ಯ ಹೈರಾಣಾಗುವಂತೆ ಮಾಡಿದೆ. ಕಳೆದ ಮೂರು ವರ್ಷಗಳಿಂದ ರಸ್ತೆ, ಇದೇ ರೀತಿ ಹಳ್ಳಗುಂಡಿಗಳಿಂದ ಕೂಡಿದೆ. ರಸ್ತೆಯಲ್ಲಿ ಬಾರಿ ಗಾತ್ರದ ಗುಂಡಿಗಳು ಬಿದ್ದಿದ್ದು, ಮಳೆ ಬಂದಂತಹ ಸಂಧರ್ಭದಲ್ಲಿ ಗುಂಡಿಗಳಲ್ಲಿ ನೀರು ತುಂಬಿಕೊಂಡು ಬೈಕ್ ಸವಾರರು ಬಿದ್ದು, ಕೈಕಾಲು ಮುರಿದುಕೊಂಡು ಆಸ್ಪತ್ರೆ ಸೇರುವಂತಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕನಿಷ್ಠ ರಸ್ತೆಯಲ್ಲಿನ ಹಳ್ಳಗುಂಡಿಗಳನ್ನು ಮುಚ್ಚಿಸುವಂತಹ ಕೆಲಸವನ್ನು ಸಹ ಮಾಡುತ್ತಿಲ್ಲ ಎಂದು ವಾಹನ ಸವಾರರ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರು ನಗರ ಜಿಲ್ಲೆಗೆ ಒಳಪಡುವ ಆನೇಕಲ್​ನಿಂದ ದಿನನಿತ್ಯ ಸಾವಿರಾರು ಜನರು ಬೊಮ್ಮಸಂದ್ರ, ಎಲೆಕ್ಟ್ರಾನಿಕ್ ಸಿಟಿ ಹಾಗೂ ಬೆಂಗಳೂರು ಕಡೆಗಳಿಗೆ ಕೆಲಸಗಳಿಗೆ ಹೋಗಲು ವಾಹನಗಳಲ್ಲಿ ಸಂಚಾರ ಮಾಡುತ್ತಾರೆ. ಆದ್ರೆ, ಈವೊಂದು ಹಳ್ಳಗುಂಡಿಗಳಿಂದ ಕೂಡಿರುವ ಹದಗೆಟ್ಟ ರಸ್ತೆಯಲ್ಲಿ ಸಂಚರಿಸಲಾಗದೆ ವಾಹನ ಸವಾರರು ನಿತ್ಯ ಹೈರಾಣಾಗುತ್ತಿದ್ದಾರೆ. ಇದೇ ರಸ್ತೆಯಲ್ಲಿ ಪ್ರತಿಷ್ಠಿತ ಶಾಲಾ-ಕಾಲೇಜುಗಳಿದ್ದು, ನಿತ್ಯ ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಬಿಸಿಲಿನ ಸಮಯದಯಲ್ಲಿ ಧೂಳಿನ ಸಮಸ್ಯೆ ಎದುರಾದ್ರೆ, ಮಳೆಬಂದಂತಹ ಸಂಧರ್ಭದಲ್ಲಿ ರಸ್ತೆ ಕೆಸರು ಗದ್ದೆಯಾಗಿ ಮಾರ್ಪಾಡಾಗುತ್ತದೆ.

ಇದನ್ನೂ ಓದಿ:ರಸ್ತೆ ಗುಂಡಿ ಮುಚ್ಚಲು ಪ್ರತಿ ವಾರ್ಡ್​ಗೆ 15 ಲಕ್ಷ ರೂ ಬಿಡುಗಡೆ ಮಾಡಿದ ಬಿಬಿಎಂಪಿ, ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆ ಹಂಚಿಕೆ

ನಿತ್ಯ ರಸ್ತೆಯಲ್ಲಿ ಓಡಾಟ ನಡೆಸುವ ವಾಹನ ಸವಾರರು ಜೀವ ಭಯದಲ್ಲಿಯೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ‌. ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು, ಇಂತಹ ಹದಗೆಟ್ಟ ರಸ್ತೆಯಲ್ಲಿಯೇ ಸಂಚಾರ ಮಾಡುತ್ತಾರೆ. ಆದ್ರೆ, ಈ ಸಮಸ್ಯೆಯನ್ನ ಸರಿಪಡಿಸುವಂತಹ ಕೆಲಸವನ್ನು ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ವಾಹನ ಸವಾರರು ಕಿಡಿಕಾರಿದ್ದಾರೆ. ಒಟ್ಟಿನಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಹೊರವಲಯದ ಆನೇಕಲ್- ಚಂದಾಪುರ ಮುಖ್ಯರಸ್ತೆ ಸಂಪೂರ್ಣ ಹಳ್ಳಗುಂಡಿಗಳಿಂದ ಕೂಡಿದ್ದು ವಾಹನ ಸವಾರರಿಗೆ ಯಮಸ್ವರೂಪಿ ರಸ್ತೆಯಾಗಿ ಮಾರ್ಪಾಡಾಗಿದೆ. ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಹದಗೆಟ್ಟ ರಸ್ತೆಗೆ ಮುಕ್ತಿ ಕಲ್ಪಿಸಿಕೊಡುತ್ತಾರಾ? ಎಂದು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ