ಬ್ಯಾಂಕ್ ಸಾಲ ತೀರಿಸಲಾಗದೆ ಪತಿ-ಪತ್ನಿ ನಡುವೆ ಗಲಾಟೆ: ಹೆಂಡತಿಯನ್ನು ಮಚ್ಚಿನಿಂದ ಕೊಚ್ಚಿ ಸಾಯಿಸಿ, ಆತ್ಮಹತ್ಯೆಗೆ ಶರಣಾದ ಗಂಡ

| Updated By: ಸಾಧು ಶ್ರೀನಾಥ್​

Updated on: Aug 03, 2023 | 9:37 AM

Anekal Muder Suicide: ಆರ್ಥಿಕ ಹೊರೆಯಿಂದ ಹೊರಬರಲು ಸಾಧ್ಯವಾಗದೆ ನೊಂದು ಹೋಗಿದ್ದ ದಂಪತಿ ಇಬ್ಬರೂ ಕಿತ್ತಾಡಿಕೊಂಡು ಕೊನೆಗೆ ಪತ್ನಿಯನ್ನು ಕೊಲೆ ಮಾಡಿ, ಪತಿ ಆತ್ಮಹತ್ಯೆಗೆ ಶರಣಾಗಿರುವುದು ವಿಪರ್ಯಾಸ. ಇನ್ನು ಆನೇಕಲ್ ನಲ್ಲಿ 2 ದಿನಗಳಿಂದ 3 ಪ್ರತ್ಯೇಕ ಮರ್ಡರ್ ನಡೆದಿದ್ದು, ಜನರನ್ನ ಬೆಚ್ಚಿಬೀಳಿಸುವಂತೆ ಮಾಡಿದೆ. 

ಬ್ಯಾಂಕ್ ಸಾಲ ತೀರಿಸಲಾಗದೆ ಪತಿ-ಪತ್ನಿ ನಡುವೆ ಗಲಾಟೆ: ಹೆಂಡತಿಯನ್ನು ಮಚ್ಚಿನಿಂದ ಕೊಚ್ಚಿ ಸಾಯಿಸಿ, ಆತ್ಮಹತ್ಯೆಗೆ ಶರಣಾದ ಗಂಡ
ಸರ್ಜಾಪುರ: ಸಾಲ ತೀರಿಸಲಾಗದೆ ಪತಿ-ಪತ್ನಿ ಗಲಾಟೆ ವಿಕೋಪಕ್ಕೆ
Follow us on

ಅವರದ್ದು ಪುಟ್ಟ ಸಂಸಾರ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಗಂಡ ಹೆಂಡತಿ ಅನ್ಯೋನ್ಯವಾಗಿ ವಾಸವಿದ್ದರು. ಆದ್ರೆ ಬ್ಯಾಂಕಿನಲ್ಲಿ ಸ್ವಲ್ಪ ಸಾಲ ಮಾಡಿಕೊಂಡು ಸಾಲವನ್ನು (Bank Loan) ತೀರಿಸಲು ಸಾಧ್ಯವಾಗದೆ ಪತಿ-ಪತ್ನಿ ನಡುವೆ ನಿತ್ಯ ಗಲಾಟೆ ನಡೆಯುತ್ತಿತ್ತು. ಅದೇ ಗಲಾಟೆ ವಿಕೋಪಕ್ಕೆ ತಿರುಗಿ ಘೋರ ಘಟನೆಯೊಂದು ನಡೆದಿದ್ದು, ಇಡೀ ಗ್ರಾಮಸ್ಥರನ್ನ ಬೆಚ್ಚಿ ಬೀಳಿಸಿದೆ… ಅಷ್ಟಕ್ಕೂ ಅಲ್ಲಿ ನಡೆದಿದಾದ್ರು ಏನು ನೋಡಿ ಈ ಕಂಪ್ಲೀಟ್ ರಿಪೋರ್ಟ್ ನಲ್ಲಿ… ರಕ್ತದ ಮಡುವಿನಲ್ಲಿ ಬಿದ್ದಿರುವ ಮಹಿಳೆ.. ಇನ್ನೊಂದೆಡೆ ಮಚ್ಚು ಹಾಗೂ ವಿಷದ ಬಾಟಲಿಯ ಜೊತೆ ಶವವಾಗಿ ಮಲಗಿರುವ ವ್ಯಕ್ತಿಯ ದೇಹ (Murder, Suicide). ಈ ಎಲ್ಲಾ ದೃಶ್ಯ ಕಂಡು ಬಂದಿದ್ದು ಬೆಂಗಳೂರು ಹೊರವಲಯದ ಆನೇಕಲ್ (Anekal) ತಾಲೂಕಿನ ಸರ್ಜಾಪುರ ಸಮೀಪದ ಬಿಕ್ಕನಹಳ್ಳಿಯಲ್ಲಿ.. ಗ್ರಾಮದ ಜನತಾ ಕಾಲೋನಿಯ ನಿವಾಸಿ ವೆಂಕಟಸ್ವಾಮಿ ಹಾಗೂ ಲಕ್ಷ್ಮಮ್ಮ ವಾಸವಿದ್ದರು. ಕಳೆದ ಕೆಲ ವರ್ಷಗಳ ಹಿಂದೆ ಮನೆಯ ಮೇಲೆ ಬ್ಯಾಂಕ್ ನಿಂದ ಲೋನ್ ಪಡೆದಿದ್ದು, ಸಾಲ ತೀರಿಸಲಾಗದೆ ನಿತ್ಯ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು.

ಅದೇ ರೀತಿ ಮೊನ್ನೆ ಮಂಗಳವಾರ ರಾತ್ರಿ ಗಂಡ ಹೆಂಡತಿ ನಡುವೆ ಗಲಾಟೆ ನಡೆದು ಅದು ವಿಕೋಪಕ್ಕೆ ಹೋಗಿದೆ. ಪತ್ನಿ ಲಕ್ಷ್ಮಮ್ಮ ಮಲಗಿದ್ದ ವೇಳೆ ವೆಂಕಟಸ್ವಾಮಿ ಮನೆಯಲ್ಲಿದ್ದ ಮಚ್ಚಿನಿಂದ ಕತ್ತಿನ ಭಾಗಕ್ಕೆ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಸ್ವಲ್ಪ ದೂರದಲ್ಲೇ ಇದ್ದ ನಿರ್ಮಾಣ ಹಂತದಲ್ಲಿನ ಮನೆಗೆ ಹೋಗಿ ಮಚ್ಚನ್ನ ಪಕ್ಕದಲ್ಲಿಯೇ ಇಟ್ಟುಕೊಂಡು ವಿಷವನ್ನು ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಿಗ್ಗೆ ಮನೆಯ ಬಳಿ ಹಿರಿಯ ಮಗಳು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು, ತಾಯಿಯನ್ನು ಕುತ್ತಿಗೆ ಭಾಗದಲ್ಲಿ ಕೊಚ್ಚಿ ಕೊಲೆ ಮಾಡಿರುವುದನ್ನು ನೋಡಿ ಅಕ್ಕಪಕ್ಕದ ನಿವಾಸಿಗಳು ತಿಳಿಸಿದ್ದಾರೆ.

ಇನ್ನು ತಾಯಿ ಕೊಲೆಯಾಗಿದ್ದು ತಂದೆ ಕಾಣಿಸುತ್ತಿಲ್ಲ ಎಂದು ತಂದೆಗೆ ಕರೆ ಮಾಡಿದಾಗ ಅವರು ಸ್ವೀಕರಿಸಿರಲಿಲ್ಲ. ಹುಡುಕಾಡಿದಾಗ ಅವರದ್ದೇ ನಿರ್ಮಾಣ ಹಂತದ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಘಟನಾ ಸಂಬಂಧ ಸ್ಥಳಕ್ಕೆ ಬಂದ ಸರ್ಜಾಪುರ ಪೊಲೀಸರು ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಸಿಕೊಂಡು ಮಹಜರು ನಡೆಸಿದ್ದಾರೆ.

ಇದೇ ಬಿಕ್ಕನಹಳ್ಳಿ ಗ್ರಾಮದಲ್ಲಿನ ಸ್ವಂತ ಮನೆಯ ಮೇಲೆ ಎರಡನೇ ಮಗಳ ಮದುವೆ ಮಾಡಲು ಬ್ಯಾಂಕ್ ನಲ್ಲಿ ಲೋನ್ ಪಡೆದುಕೊಂಡಿದ್ರು. ಆದ್ರೆ ಬ್ಯಾಂಕ್ ಲೋನ್ ಕಟ್ಟದೆ ಬ್ಯಾಂಕಿನವರು ಮನೆಯನ್ನ ಸೀಜ್ ಮಾಡಿದ್ದರು. ಕಳೆದ ಮೂರ್ನಾಲ್ಕು ತಿಂಗಳಿನಿಂದ ವೆಂಕಟಸ್ವಾಮಿ ಹಾಗೂ ಲಕ್ಷ್ಮಮ್ಮ ಆಗಾಗ ಗಲಾಟೆ ಮಾಡಿಕೊಳ್ಳುತ್ತಿದ್ದರು. ಮೊನ್ನೆ ರಾತ್ರಿಯೂ ಕೂಡ ಗಲಾಟೆ ನಡೆದು ಪತ್ನಿ ಲಕ್ಷ್ಮಮ್ಮನ್ನು ಕೊಲೆ ಮಾಡಿ ಬಳಿಕ ಭಯದಿಂದ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯೆತೆ ಇದ್ದು, ಬ್ಯಾಂಕಿನಿಂದ ಪಡೆದ ಸಾಲವನ್ನು ತೀರಿಸಲಾಗದೆ ಈ ಘಟನೆ ನಡೆದಿರುವ ಸಾಧ್ಯತೆ ಇದೆ ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬೆಂಗಳೂರು ಗ್ರಾಮಾಂತರ ಎಸ್ ಪಿ ಮಲ್ಲಿಕಾರ್ಜುನ್ ಬಾಲದಂಡಿ ಹೇಳಿದ್ದಾರೆ.

Also Read: ಆ ಸಭ್ಯಸ್ಥ ಯುವಕನನ್ನು ಚಾಕುವಿನಿಂದ ಇರಿದು ಬರ್ಬರ ಕೊಲೆ, ಸ್ವಿಫ್ಟ್ ಕಾರಿನಲ್ಲಿ ಹಿಂಬಾಲಿಸಿ ಹತ್ಯೆಗೈದರು: ಕಾರಣವೇನು?

ಒಟ್ಟಿನಲ್ಲಿ ಆರ್ಥಿಕ ಹೊರೆಯಿಂದ ಹೊರಬರಲು ಸಾಧ್ಯವಾಗದೆ ನೊಂದು ಹೋಗಿದ್ದ ದಂಪತಿ ಇಬ್ಬರೂ ಕಿತ್ತಾಡಿಕೊಂಡು ಕೊನೆಗೆ ಪತ್ನಿಯನ್ನು ಕೊಲೆ ಮಾಡಿ, ಪತಿ ಆತ್ಮಹತ್ಯೆಗೆ ಶರಣಾಗಿರುವುದು ವಿಪರ್ಯಾಸವೇ ಸರಿ. ಇನ್ನು ಆನೇಕಲ್ ನಲ್ಲಿ ಎರಡು ದಿನಗಳಿಂದ ಮೂರು ಪ್ರತ್ಯೇಕ ಮರ್ಡರ್ ಗಳು ನಡೆದಿದ್ದು, ಜನರನ್ನ ಬೆಚ್ಚಿ ಬೀಳಿಸುವಂತೆ ಮಾಡಿದೆ.

ಆನೇಕಲ್ ಕುರಿತಾದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ