ಬೆಂಗಳೂರು, ಡಿಸೆಂಬರ್ 3: ಇತ್ತೀಚೆಗಷ್ಟೇ ಹನಿಟ್ರ್ಯಾಪ್, ಜಾತಿನಿಂದನೆ ಕೇಸ್ನಲ್ಲಿ ಜೈಲು ಮೆಟ್ಟಿಲುಹತ್ತಿದ್ದ ಆರ್ಆರ್ ನಗರ ಶಾಸಕ ಮುನಿರತ್ನ ವಿರುದ್ಧ ಇದೀಗ ಮತ್ತೊಂದು ಆರೋಪ ಕೇಳಿಬಂದಿದೆ. ಬಿಬಿಎಂಪಿಯ ಮಾಜಿ ಕಾರ್ಪೋರೇಟರ್ ಹಾಗೂ ಅವರು ಪತಿ ಮುನಿರತ್ನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಮುನಿರತ್ನ ವಿರುದ್ಧ ದೂರು ದಾಖಲಿಸಿರುವ ದಂಪತಿ ಇದೀಗ ಎಸ್ಐಟಿ ಮುಂದೆ ದಾಖಲೆಗಳನ್ನು ಸಲ್ಲಿಸಲು ಸಜ್ಜಾಗಿದ್ದಾರೆ. ಮುನಿರತ್ನ ವಿರುದ್ಧ ಹನಿಟ್ರ್ಯಾಪ್, ಕೊಲೆ ಯತ್ನದ ಆರೋಪ ಮಾಡಿರುವ ಮಾಜಿ ಕಾರ್ಪೋರೇಟರ್, ವಿಡಿಯೋ ಕೂಡ ಬಿಡುಗಡೆ ಮಾಡಿರುವುದು ಚರ್ಚೆ ಹುಟ್ಟುಹಾಕಿದೆ.
ಶಾಸಕ ಮುನಿರತ್ನ ನಾಯ್ಡು ವಿರುದ್ಧ ಲಗ್ಗೆರೆಯ ಮಾಜಿ ಕಾರ್ಪೋರೇಟರ್ ಹಾಗೂ ಅವರ ಪತಿ ಗಂಭೀರ ಆರೋಪ ಮಾಡಿದ್ದಾರೆ. ಖಾಸಗಿ ಹೊಟೇಲ್ ಒಂದರಲ್ಲಿ ಸುದ್ದಿಗೊಷ್ಠಿ ನಡೆಸಿದ ಅವರು, ಮುನಿರತ್ನ ತಮ್ಮ ಕುಟುಂಬಕ್ಕೆ ನೀಡಿರುವ ಕಿರುಕುಳದ ಬಗ್ಗೆ ಸಾಕ್ಷಿ ಸಮೇತ ಅಳಲು ತೋಡಿಕೊಂಡಿದ್ದಾರೆ.
ಶನಿವಾರವಷ್ಟೇ ನಂದಿನಿ ಲೇಔಟ್ನಲ್ಲಿ ಮುನಿರತ್ನ ವಿರುದ್ಧ ದಂಪತಿ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿತ್ತು. ಇದೀಗ ದಂಪತಿ ಸುದ್ದಿಗೋಷ್ಠಿ ನಡೆಸಿ ಶಾಸಕ ಮುನಿರತ್ನ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಮುನಿರತ್ನ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ. ನನ್ನ ಬಳಿ ಇದಕ್ಕೆ ಬೇಕಾದ ಆಡಿಯೋ, ವೀಡಿಯೋ ದಾಖಲೆ ಇದೆ. ನನ್ನ ಅಶ್ಲೀಲ ವೀಡಿಯೋ ಮಾಡಲು ಮುನಿರತ್ನ ಷಡ್ಯಂತ್ರ ಮಾಡಿದ್ದರು. ಕೊನೆಗೆ ನಾನು ನನ್ನ ಹೆಂಡತಿ ಇರುವುದನ್ನು ಚಿತ್ರೀಕರಿಸಲು ಬೆಡ್ ರೂಂನಲ್ಲಿ ಕ್ಯಾಮರಾ ಇಡಲು ಪ್ರಯತ್ನ ಪಟ್ಟಿದ್ದರು ಎಂದು ಮುನಿರತ್ನ ವಿರುದ್ಧ ಸಂತ್ರಸ್ತೆಯ ಪತಿ ಆರೋಪ ಮಾಡಿದ್ದಾರೆ.
ಮನೆ ಕೆಲಸದವರಿಗೆ ಕೋಟಿ ಕೋಟಿ ಆಫರ್ ಕೊಟ್ಟು ನಮ್ಮ ಬೆಡ್ ರೂಂನಲ್ಲಿ ಕ್ಯಾಮರಾ ಇಡಲು ಮುನಿರತ್ನ ಪ್ಲಾನ್ ಮಾಡಿದ್ದ ಎಂದು ಆರೋಪಿಸಿರುವ ಮಾಜಿ ಕಾರ್ಪೊರೇಟರ್ ಪತಿ, ಹೇಳಿದಂತೆ ಕೇಳದೆ ಇದ್ದಿದ್ದಕ್ಕೆ ಕೊಲೆಗೂ ಸಂಚು ಹೂಡಿದ್ದ ಎಂದಿದ್ದಾರೆ. ರಮೇಶ್ ಜಾರಕಿಹೊಳಿ ವಿಡಿಯೋ ಹೊರಬಂದ ಸಮಯದಲ್ಲೇ ನನ್ನ ಮೇಲೂ ವಿಡಿಯೋ ಮಾಡಲು ಯತ್ನಿಸಿದ್ದರು. ಕೊನೆಗೆ ಎಲ್ಲಾ ಮರೆತು ಕಾಂಪ್ರಮೈಸ್ ಆಗಿ ಅವರ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದೆವು. ಮುನಿರತ್ನಗೆ ಭಯ ಬಿದ್ದು ಅವರ ಪರವಾಗಿಯೂ ಕೆಲಸ ಮಾಡಿದ್ದೆವು. ಆದರೂ ನನ್ನ ಹೆಂಡತಿ ಮೇಲೆ ಕೆಂಗಣ್ಣು ಬೀರಿ ನನ್ನನ್ನು ಕೆಡವಲು ನೋಡಿದ್ದ ಎಂದು ತಮ್ಮ ಆಪ್ತರ ಜೊತೆ ಮುನಿರತ್ನ ಮಾತಾಡಿರುವ ವಿಡಿಯೋವನ್ನು ಸಂತ್ರಸ್ತೆಯ ಪರಿ ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: ಕೊಲೆ ಯತ್ನ, ಸುಪಾರಿ ಆರೋಪ: ಮುನಿರತ್ನ ವಿರುದ್ಧ ಮತ್ತೊಂದು ಎಫ್ಐಆರ್
ಮುನಿರತ್ನ ದೊಡ್ಡ ದೊಡ್ಡವರನ್ನ ಇದೇ ರೀತಿ ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಆರೋಪಿಸಿರುವ ಮಾಜಿ ಕಾರ್ಪೊರೇಟರ್ ದಂಪತಿ, ಯಾವುದೇ ಕಾರಣಕ್ಕೂ ಹೆದರುವುದಿಲ್ಲ. ಎಸ್ಐಟಿಗೆ ಎಲ್ಲಾ ದಾಖಲೆಗಳನ್ನು ಒದಗಿಸುವ ಮೂಲಕ ಮುನಿರತ್ನ ವಿರುದ್ಧ ಹೋರಾಟ ಮಾಡುತ್ತೇವೆ ಎಂದಿದ್ದಾರೆ.
ಸದ್ಯ ಮುನಿರತ್ನ ವಿರುದ್ಧ ಈಗಾಗಲೇ ದೂರು ದಾಖಲಿಸಿರುವ ದಂಪತಿ, ಇದೀಗ ಒಕ್ಕಲಿಗ ಸಮುದಾಯದ ನಿರ್ಮಲಾನಂದಸ್ವಾಮೀಜಿ, ಮಾಜಿ ಪ್ರಧಾನಿ ದೇವೇಗೌಡರು, ಆರ್.ಅಶೋಕ್ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ಗೂ ದೂರು ಸಲ್ಲಿಸಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಜೈಲಿನ ಕದತಟ್ಟಿ ಜಾಮೀನು ಪಡೆದು ಹೊರಬಂದಿರುವ ಮುನಿರತ್ನಗೆ ಇದೀಗ ಮತ್ತೆ ಕಂಬಿ ಹಿಂದೆ ಸೇರುವ ಸ್ಥಿತಿ ಎದುರಾಗುತ್ತದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:03 am, Tue, 3 December 24