
ಬೆಂಗಳೂರು, ಜನವರಿ 12: ಬೆಂಗಳೂರಿನಲ್ಲಿ (Bangalore) ಮಂಗಳೂರು ಮೂಲದ ಟೆಕ್ಕಿ ಶರ್ಮಿಳಾ ಹತ್ಯೆ (34) (Techie Murder Case) ಪ್ರಕರಣದ ತನಿಖೆ ವೇಳೆ ಸ್ಫೋಟಕ ಮಾಹಿತಿಗಳು ಬಯಲಾಗಿವೆ. ಇದು ಕೇವಲ ಕೊಲೆ ಪ್ರಕರಣವಲ್ಲ, ಹತ್ಯೆಗೂ ಮುನ್ನ ಸಂತ್ರಸ್ತೆ ಮೇಲೆ ಆರೋಪಿ ಅತ್ಯಾಚಾರ ಎಸಗಿರುವ ಸಾಧ್ಯತೆ ಇದೆ ಎಂಬ ಗಂಭೀರ ಅನುಮಾನ ಪೊಲೀಸರಿಗೆ ವ್ಯಕ್ತವಾಗಿದೆ. ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣದಲ್ಲಿ ಆರೋಪಿಯಾಗಿರುವ ಕೇರಳ ಮೂಲದ ಕರ್ನಲ್ ಕುರೈ (18) ವಿರುದ್ಧ ಈಗಾಗಲೇ ಕೊಲೆ ಪ್ರಕರಣದ ಜೊತೆಗೆ ಲೈಂಗಿಕ ದೌರ್ಜನ್ಯ ಪ್ರಕರಣವನ್ನೂ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಬಿಎನ್ಎಸ್ ಸೆಕ್ಷನ್ 103, 64(2), 67 ಮತ್ತು 238ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರ ತನಿಖೆ ವೇಳೆ ತಿಳಿದುಬಂದ ಮಾಹಿತಿ ಪ್ರಕಾರ, ಜನವರಿ 3ರ ರಾತ್ರಿ ಸುಮಾರು 9 ಗಂಟೆ ವೇಳೆಗೆ ಕರ್ನಲ್ ಕುರೈ ಅಪಾರ್ಟ್‌ಮೆಂಟ್‌ನ ಸ್ಲೈಡಿಂಗ್ ವಿಂಡೋ ಮೂಲಕ ಶರ್ಮಿಳಾ ಮನೆಯೊಳಗೆ ನುಗ್ಗಿದ್ದಾನೆ. ಆ ವೇಳೆ ಮನೆಯಲ್ಲಿ ಶರ್ಮಿಳಾ ಒಬ್ಬರೇ ಇದ್ದರು. ಒಳನುಗ್ಗಿದ ಆರೋಪಿ, ಶರ್ಮಿಳಾಳ ಮೇಲೆ ದೌರ್ಜನ್ಯಕ್ಕೆ ಯತ್ನಿಸಿದ್ದು, ಇದಕ್ಕೆ ಆಕೆ ತೀವ್ರವಾಗಿ ಪ್ರತಿರೋಧ ವ್ಯಕ್ತಪಡಿಸಿದ್ದಾಳೆ. ಪ್ರತಿರೋಧದ ವೇಳೆ ಆರೋಪಿ ಬಲವಂತವಾಗಿ ಆಕೆಯ ಮೇಲೆ ಎರಗಿದ್ದು, ಶರ್ಮಿಳಾ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ. ತಲೆಗೆ ಪೆಟ್ಟು ಬಿದ್ದು ರಕ್ತಸ್ರಾವವಾಗಿ ಪ್ರಜ್ಞೆ ತಪ್ಪಿ ಬಿದ್ದ ಶರ್ಮಿಳಾಳನ್ನು ಬಳಿಕ ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಹತ್ಯೆ ಮಾಡಿದ ಬಳಿಕ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ರಕ್ತದಲ್ಲಿ ನೆನೆದಿದ್ದ ಬಟ್ಟೆಗಳನ್ನು ಹಾಸಿಗೆಯ ಮೇಲೆ ಹಾಕಿ, ಕೋಣೆಗೆ ಬೆಂಕಿ ಹಚ್ಚಿ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಾರಿಯಾಗುವ ವೇಳೆ ಶರ್ಮಿಳಾಳ ಮೊಬೈಲ್ ಫೋನ್‌ನ್ನು ಕೂಡ ತೆಗೆದುಕೊಂಡು ಹೋಗಿದ್ದಾನೆ. ಅದೇ ಮೊಬೈಲ್ ಆಧಾರವಾಗಿಯೇ ಆರೋಪಿ ಕರ್ನಲ್ ಕುರೈ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ರಾಮಮೂರ್ತಿನಗರ ಪೊಲೀಸರು, ಲೈಂಗಿಕ ದೌರ್ಜನ್ಯ ಕುರಿತು ಪ್ರಶ್ನಿಸಿದಾಗ ‘‘ಗೊತ್ತಿಲ್ಲ’’ ಎಂದು ಆತ ನುಣುಚಿಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಸತ್ಯಾಂಶ ತಿಳಿಯಲು ಪೊಲೀಸರು ಎಫ್‌ಎಸ್‌ಎಲ್ ಪರೀಕ್ಷೆಗೆ ಮಾದರಿಗಳನ್ನು ಕಳುಹಿಸಿದ್ದಾರೆ.
ಆರಂಭದಲ್ಲಿ ಈ ಘಟನೆ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಬೆಂಕಿ ಅವಘಡ ಎಂದು ಹೇಳಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆ ಹಾಗೂ ತನಿಖೆಯ ಬಳಿಕ ಇದು ಪೂರ್ವಯೋಜಿತ ಹತ್ಯೆ ಎಂಬುದು ಸ್ಪಷ್ಟವಾಗಿತ್ತು. ಟೆಕ್ಕಿ ಶರ್ಮಿಳಾಳನ್ನು ವನ್ ಸೈಡೆಡ್ ಲವ್ ಮಾಡಿದ್ದ ಆರೋಪಿ ಕೊಲೆ ಮಾಡಿದ್ದಾನೆ. ನಂತರ ಮನೆಗೆ ಬೆಂಕಿ ಹಚ್ಚಿ ತಪ್ಪಿಸಿಕೊಳ್ಳಲು ಯತ್ನಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳಾ ಟೆಕ್ಕಿ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್: ತನಿಖೆಯಲ್ಲಿ ಕೊಲೆ ರಹಸ್ಯ ಬಯಲು!
ಸದ್ಯ ಪ್ರಕರಣದ ತನಿಖೆ ಮುಂದುವರಿದಿದ್ದು, ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಪ್ರಕರಣದ ಸಂಪೂರ್ಣ ಸತ್ಯಾಂಶ ಹೊರಬೀಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು