ಧಾರ್ಮಿಕ ಸ್ವಾತಂತ್ರ್ಯ ಕಿತ್ತುಕೊಂಡ ವಿಧೇಯಕ: ಮತಾಂತರ ನಿಷೇಧ ಕಾಯ್ದೆಗೆ ಕ್ರೈಸ್ತ ಒಕ್ಕೂಟ ವಿರೋಧ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 27, 2021 | 5:10 PM

ವಿಧಾನಸಭೆಯಲ್ಲಿ ಇತ್ತೀಚೆಗೆ ಕರ್ನಾಟಕ ಸರ್ಕಾರ ಮಂಡಿಸಿ, ಅನುಮೋದನೆ ಪಡೆದುಕೊಂಡ ಮತಾಂತರ ನಿಷೇಧ ಕಾಯ್ದೆಯನ್ನು ಭಾರತೀಯ ಕ್ರೈಸ್ತ ಒಕ್ಕೂಟ ವಿರೋಧಿಸಿದೆ.

ಧಾರ್ಮಿಕ ಸ್ವಾತಂತ್ರ್ಯ ಕಿತ್ತುಕೊಂಡ ವಿಧೇಯಕ: ಮತಾಂತರ ನಿಷೇಧ ಕಾಯ್ದೆಗೆ ಕ್ರೈಸ್ತ ಒಕ್ಕೂಟ ವಿರೋಧ
ಭಾರತೀಯ ಕ್ರೈಸ್ತ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಪ್ರಶಾಂತ್ ಜತ್ತನ್ನ
Follow us on

ಉಡುಪಿ: ವಿಧಾನಸಭೆಯಲ್ಲಿ ಇತ್ತೀಚೆಗೆ ಕರ್ನಾಟಕ ಸರ್ಕಾರ ಮಂಡಿಸಿ, ಅನುಮೋದನೆ ಪಡೆದುಕೊಂಡ ಮತಾಂತರ ನಿಷೇಧ ಕಾಯ್ದೆಯನ್ನು ಭಾರತೀಯ ಕ್ರೈಸ್ತ ಒಕ್ಕೂಟ ವಿರೋಧಿಸಿದೆ. ‘ಇದು ಧಾರ್ಮಿಕ ಸ್ವಾತಂತ್ರ್ಯವನ್ನು ಕಿತ್ತುಕೊಂಡ ಬಿಲ್’ ಎಂದು ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಪ್ರಶಾಂತ್ ಜತ್ತನ್ನ ಹೇಳಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಅವರು ಈಚೆಗೆ ನೀಡಿರುವ ಘರ್ ವಾಪ್ಸಿ ಹೇಳಿಕೆಯನ್ನು ಜತ್ತನ್ನ ವಿಶ್ಲೇಷಿಸಿದ್ದಾರೆ. ತೇಜಸ್ವಿ ಸೂರ್ಯ ಅವರು ವಾರ್ಷಿಕ ಯೋಜನೆಗಳನ್ನು ಜಾರಿಗೊಳಿಸಬೇಕೆಂದು ಹೇಳಿದ್ದಾರೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಹೇಳಿಕೆ ನೀಡಬೇಡಿ. ನಾವು ಕೂಡ ಆಮಿಷದ ಮತಾಂತರವನ್ನು ಒಪ್ಪುವುದಿಲ್ಲ ಎಂದು ಹೇಳಿದರು.

ಸರ್ಕಾರವು ಈ ವಿಧೇಯಕಕ್ಕೆ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ಎಂಬ ಹೆಸರು ಕೊಟ್ಟಿದೆ. ಆದರೆ ಈ ಕಾಯ್ದೆಯು ಧಾರ್ಮಿಕ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತದೆ. ಮೂಲಭೂತವಾದಿ ಸಂಘಟನೆಗಳು ಕಾಯ್ದೆಯನ್ನು ದುರುಪಯೋಗ ಮಾಡುವ ಅಪಾಯವಿದೆ. ಮನೆಯಲ್ಲಿ ಪ್ರಾರ್ಥನೆ ಮಾಡುವುದಕ್ಕೆ ಅನುಮತಿ ಪಡೆಯಬೇಕಾ? ಶಾಲೆಯಲ್ಲಿ ಕ್ರಿಸ್ಮಸ್ ಆಚರಿಸುವುದಕ್ಕೂ ಕೆಲ ಸಂಘಟನೆಗಳು ಅಡ್ಡಿಪಡಿಸಿವೆ. ಮೇಲ್ನೋಟಕ್ಕೆ ಮತಾಂತರ ಎನ್ನುವುದು ದೊಡ್ಡ ಕ್ರಿಮಿನಲ್ ಅಪರಾಧ ಎಂದು ಬಿಂಬಿಸಲಾಗಿದೆ. ಮತಾಂತರವಾದ ವ್ಯಕ್ತಿಯ ಬಗ್ಗೆ ಆತನ ಸಹೋದ್ಯೋಗಿ, ಸಹವರ್ತಿ ಸೇರಿದಂತೆ ಯಾರು ಬೇಕಾದರೂ ದೂರು ದಾಖಲಿಸಲು ಅವಕಾಶವಿದೆ. ಇಂಥ ಷರತ್ತುಗಳಿಂದ ಕಾಯ್ದೆಯ ದುರುಪಯೋಗವಾಗುವ ಅಪಾಯವಿದೆ. ಆಮಿಷದ ಮತಾಂತರವನ್ನು ನಾವಾಗಲಿ, ಧರ್ಮಗ್ರಂಥ ಬೈಬಲ್ ಆಗಲಿ ಒಪ್ಪುವುದಿಲ್ಲ ಎಂದು ವಿವರಿಸಿದರು.

ಸರ್ಕಾರದ ನಿರ್ಧಾರದಿಂದ ನಮಗೆ ನೋವಾಗಿದೆ: ಆರ್ಚ್ ಬಿಷಪ್ ಪೀಟರ್​ ಮಚೋಡೊ
ಕರ್ನಾಟಕ ಸರ್ಕಾರವೂ ಸಾರ್ವಜನಿಕವಾಗಿ ಚರ್ಚೆಗೆ ಅವಕಾಶವನ್ನೇ ನೀಡದೆ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲು ಮುಂದಾಗಿದೆ. ಕ್ರಿಸ್​ಮಸ್ ಹಬ್ಬದ ಸಂದರ್ಭದಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ನಮಗೆ ನೋವುಂಟು ಮಾಡಿದೆ ಎಂದು ಆರ್ಚ್​ ಬಿಷಪ್ ಪೀಟರ್​ ಮಚೋಡೊ ಹೇಳಿದರು. ಈ ಕಾಯ್ದೆ ಜಾರಿಯಿಂದ ಕರ್ನಾಟಕಕ್ಕೆ ಏನೂ ಒಳಿತಾಗುವುದಿಲ್ಲ. ಈ ಕುರಿತು ನಾವು ಸಾಕಷ್ಟು ಪ್ರಯತ್ನ-ಪ್ರತಿಭಟನೆ ಮಾಡಿದೆವು. ಮುಖ್ಯಮಂತ್ರಿ ಸೇರಿದಂತೆ ಹಲವರಿಗೆ ಮನವಿ ಸಲ್ಲಿಸಿದೆವು. ಆದರೆ ಹಟದಿಂದ ಮಸೂದೆಯನ್ನು ಸದನದಲ್ಲಿ ಮಂಡಿಸಲು ಮುಂದಾಗಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಮೇತ ಮನವಿ ಮಾಡಲಾಯಿತು. ಆದರೆ ಹಟದಿಂದ ಮಸೂದೆಯನ್ನು ಸದನದಲ್ಲಿ ಮಂಡನೆ ಮಾಡಲು ಮುಂದಾಗಿದ್ದಾರೆ. ಈ ಮಸೂದೆಯು ಕರ್ನಾಟಕ ರಾಜ್ಯಕ್ಕೆ ಹಿತಕರ ಅಲ್ಲ. ಸರ್ಕಾರದ ನಿರ್ಧಾರದಿಂದ ವಿಶೇಷವಾಗಿ ಕ್ರೈಸ್ತ ಧರ್ಮಕ್ಕೆ ನೋವುಂಟಾಗಿದೆ. ಮಸೂದೆ ಮಂಡಿಸುವ ಮೊದಲು ಮತಾಂತರ ಅಂದರೆ ಏನು ಎಂದು ಚರ್ಚಿಸಬೇಕಿತ್ತು. ಆದರೆ ಚರ್ಚೆ ಮಾಡಿಲ್ಲ. ಸರ್ಕಾರ ಬಹುಶಃ ನಮಗೆ ಶಿಕ್ಷೆ ಕೊಡಲು ಮುಂದಾಗಿದೆ ಎಂದು ಕಾಣ್ತಿದೆ. ನಾವು ರಾಜ್ಯದಲ್ಲಿ ಸಾವಿರಾರು ಶಾಲೆ-ಆಸ್ಪತ್ರೆಗಳನ್ನು ನಡೆಸುತ್ತಿದ್ದೇವೆ ಎಲ್ಲಿಯಾದರೂ ಒಂದು ಕಡೆ ಮತಾಂತರವಾಗಿದ್ದರೆ ತಿಳಿಸಿ. ಆಗ ಸರಿಪಡಿಸುತ್ತೇವೆ ಎಂದು ನುಡಿದರು. ನಮ್ಮ ಶಾಲೆಗಳಿಗೆ ಬರುವ ಜನರಿಗೆ ಮತಾಂತರದ ಭಯವಿಲ್ಲ ಆದರೂ ಇಂಥ ನಿರ್ಧಾರವೇಕೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಮುಸ್ಲಿಮರು, ಕ್ರೈಸ್ತರನ್ನ ಘರ್ ವಾಪಸಿ ಮಾಡದೆ ಬೇರೆ ದಾರಿಯಿಲ್ಲ -ಸಂಸದ ತೇಜಸ್ವಿ ಸೂರ್ಯ
ಇದನ್ನೂ ಓದಿ: ಛಲವಾದಿ ನಾರಾಯಣಸ್ವಾಮಿ ವಿರುದ್ಧ ಮತಾಂತರದ ಆರೋಪ ಮಾಡಿದ ಶಾಂತವೀರ ಸ್ವಾಮೀಜಿ