
ಬೆಂಗಳೂರು, ಜನವರಿ 12: ರಾಜ್ಯ ಕಾಂಗ್ರೆಸ್‌ನಲ್ಲಿ ಮೇಲ್ನೋಟಕ್ಕೆ ಎಲ್ಲವೂ ಸರಿ ಇದೆ ಎನಿಸಿದರೂ ಒಳಗೊಳಗೆ ಬಣಗಳ ನಡುವೆ ಬೇಗುದಿ ಹೊಗೆಯಾಡುತ್ತಲೇ ಇದೆ. ಅಧಿಕಾರ ಹಂಚಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ಪೈಪೋಟಿ ನಡೆಯುತ್ತಿದ್ದು, ಸಿಎಂ ಕುರ್ಚಿ ಕದನ ಹೈಕಮಾಂಡ್ ಅಂಗಳಕ್ಕೂ ತಲುಪಿರೋದು ಎಲ್ಲರಿಗೂ ತಿಳಿದ ವಿಚಾರ. ಈ ನಡುವೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಣದ ನಡುವೆ ಹೊಸ ಪೈಪೋಟಿಯೊಂದು ಶುರುವಾಗಿದೆ.
ಹೌದು, ಅಪೆಕ್ಸ್ ಬ್ಯಾಂಕ್ ವಿಚಾರದಲ್ಲೂ ‘ಕೈ’ ನಾಯಕರ ನಡುವೆ ಜಟಾಪಟಿ ಸಾಧ್ಯತೆ ಏರ್ಪಟ್ಟಿದೆ. ಮಾಜಿ ಸಚಿವ ಕೆ.ಎನ್. ರಾಜಣ್ಣ ಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಕೂಡ ಸಲ್ಲಿಸಿದ್ದಾರೆ. ಮತ್ತೊಂದೆಡೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಡಿಸಿಎಂ ಡಿಕೆಶಿ ಆಪ್ತರೂ ಪ್ರಯತ್ನ ನಡೆಸುತ್ತಿದ್ದಾರೆ. ಡಿಕೆಶಿ ಸಂಬಂಧಿ MLC ಎಸ್. ರವಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರೋದು ಅಖಾಡವನ್ನು ಮತ್ತಷ್ಟು ರಂಗೇರಿಸಿದೆ.
ಸಂಪುಟ ಪುನಾರಚನೆ ನಡೆದರೆ ಮತ್ತೆ ಸಚಿವರಾಗಲು ಕೆ.ಎನ್.ರಾಜಣ್ಣ ಈಗಾಗಲೇ ತಯಾರಿ ನಡೆಸಿದ್ದು, ಒಂದೊಮ್ಮೆ ಆ ಆಸೆ ಈಡೇರದಿದ್ದಲ್ಲಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ಗಿಟ್ಟಿಸಬೇಕು ಅನ್ನೋದು ಮಾಜಿ ಸಚಿವರ ಲೆಕ್ಕಾಚಾರ. ಮುಖ್ಯಮಂತ್ರಿ ಸಿದ್ದರಾಮಯ್ಯ ಸದ್ಯ ಸಹಕಾರ ಇಲಾಖೆ ನಿಭಾಯಿಸುತ್ತಿದ್ದು, ತಮ್ಮ ಆಪ್ತರಾಗಿರೋ ಸಿಎಂ ಸಹಕಾರದಿಂದಲೇ ಸ್ಥಾನ ಗಿಟ್ಟಿಸಲು ರಾಜಣ್ಣ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಆ ಮೂಲಕ ಸಚಿವ ಸ್ಥಾನ ಅಥವಾ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ಎರಡರಲ್ಲೊಂದನ್ನು ಪಡೆಯಲು ರಾಜಣ್ಣ ರಣತಂತ್ರ ರೂಪಿಸಿದ್ದಾರೆ.
ಇದನ್ನೂ ಓದಿ: ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಮಲ್ಲಿಕಾರ್ಜುನ ಖರ್ಗೆ
ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಪ್ರತಿನಿಧಿಯಾಗಿ ಅಪೆಕ್ಸ್ ಬ್ಯಾಂಕ್ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ರಾಜಣ್ಣ ನಾಮಪತ್ರ ಸಲ್ಲಿಸಿದ್ದಾರೆ. ಚಾಮರಾಜಪೇಟೆಯಲ್ಲಿರುವ ಅಪೆಕ್ಸ್ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಮಾಜಿ ಸಚಿವ ನಾಮಿನೇಷನ್ ಮಾಡಿದ್ದು, ಇದೇ ವೇಳೆ ಧಾರವಾಡದಿಂದ ಶಿವಕುಮಾರ್ ಗೌಡ ಪಾಟೀಲ್, ಬಳ್ಳಾರಿ ಜಿಲ್ಲಾ ಕೇಂದ್ರ ಸರಕಾರ ಬ್ಯಾಂಕ್ನಿಂದ ಪಿ. ಮೂಕಯ್ಯ ಸ್ವಾಮಿ, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನಿಂದ ಆರ್. ನರೇಂದ್ರ, ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನಿಂದ ರಾಹುಲ್ ಸತೀಶ್ ಜಾರಕಿಹೊಳಿ, ರಾಯಚೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನಿಂದ ಶರಣಗೌಡ ಪಾಟೀಲ್, ದಾವಣಗೆರೆ ಡಿಸಿಸಿ ಬ್ಯಾಂಕ್ನಿಂದ ಗಿರೀಶ್ ಮುದೇಗೌಡ ಉಮೇದುದಾರಿಕೆ ಸಲ್ಲಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.