ಬೆಂಗಳೂರು, ಡಿಸೆಂಬರ್ 14: ಬೆಂಗಳೂರಿನ ಪ್ರಮುಖ ಆಟೋ ರಿಕ್ಷಾ ಯೂನಿಯನ್‌ಗಳಲ್ಲಿ ಒಂದಾದ ಆಟೋ ರಿಕ್ಷಾ ಚಾಲಕರ ಒಕ್ಕೂಟವು (ARDU) ‘ನಮ್ಮ ಯಾತ್ರಿ’ ಆ್ಯಪ್ನಿಂದ ನಿರ್ಗಮಿಸಿದೆ ಎಂದು ವರದಿಯಾಗಿರುವ ಬೆನ್ನಲ್ಲೇ, ಆ್ಯಪ್ ಬಗ್ಗೆ ಒಕ್ಕೂಟ ಟೀಕೆ ಮಾಡಿದೆ. ವಿಶೇಷವೆಂದರೆ, ಕಳೆದ ವರ್ಷ ನಮ್ಮ ಯಾತ್ರಿ ಆ್ಯಪ್ ಬಿಡುಗಡೆ ಮಾಡುವಲ್ಲಿ ಚಾಲಕರ ಒಕ್ಕೂಟ ಪ್ರಮುಖ ಪಾತ್ರ ವಹಿಸಿತ್ತು.
ನಮ್ಮ ಯಾತ್ರಿ ಆ್ಯಪ್ ಅಭಿವೃದ್ಧಿಪಡಿಸುವುದನ್ನು ಚಾಲಕರ ಒಕ್ಕೂಟ ಸಂಪೂರ್ಣವಾಗಿ ಬೆಂಬಲಿಸಿತ್ತು. ಇದು ಒಕ್ಕೂಟದ ನಾಯಕರಾದ ರುದ್ರಮೂರ್ತಿ ಮತ್ತು ಪಟ್ಟಾಭಿರಾಮ ಅವರು ಬೆಂಗಳೂರಿನ ಚಾಲಕರು ಮತ್ತು ಪ್ರಯಾಣಿಕರಿಗಾಗಿ ಅಭಿವೃದ್ಧಿಪಡಿಸಿದ ಅಪ್ಲಿಕೇಶನ್ ಆಗಿದೆ. ಸಮುದಾಯದ ಒಗ್ಗಟ್ಟು ನಮ್ಮ ಯಾತ್ರಿಯ ಯಶಸ್ಸಿಗೆ ಕಾರಣ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ ರುದ್ರಮೂರ್ತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾರ್ಪೊರೇಟ್ ಕಂಪನಿಗಳು ಜನಸಾಮಾನ್ಯರಿಂದ ಮಾತ್ರ ಯಶಸ್ವಿಯಾಗುತ್ತವೆ ಎಂದು ರುದ್ರಮೂರ್ತಿ ಹೇಳಿದ್ದು, ನಮ್ಮ ಯಾತ್ರಿ ಸಿಇಒ ವಿಮಲ್ ಕುಮಾರ್ ಅವರನ್ನು ಟೀಕಿಸಿದ್ದಾರೆ.
ನಗರದಲ್ಲಿ 32,000 ಚಾಲಕರನ್ನು ಪ್ರತಿನಿಧಿಸುವುದಾಗಿ ಹೇಳಿಕೊಳ್ಳುವ ಚಾಲಕರ ಒಕ್ಕೂಟವನ್ನು ದೂರವಿರಲು ಪ್ರಯತ್ನಿಸಿದ ನಂತರ ಆ್ಯಪ್ ಸಂಸ್ಥೆಯು ಸುದ್ದಿಯಲ್ಲಿದೆ. ನಮ್ಮ ಯಾತ್ರಿಯನ್ನು ನವೆಂಬರ್ 2022 ರಲ್ಲಿ ಚಾಲಕರ ಸ್ವಂತ ಅಪ್ಲಿಕೇಶನ್ ಆಗಿ ಪ್ರಾರಂಭಿಸಲಾಯಿತು ಮತ್ತು ಬೆಂಗಳೂರಿನಲ್ಲಿ ಅಪ್ಲಿಕೇಶನ್ ಆಧಾರಿತ ಆಟೋ ರೈಡ್‌ಗಳಲ್ಲಿ ಇದು ಶೇ 25 ಮಾರುಕಟ್ಟೆ ಪಾಲನ್ನು ಹೊಂದಿದೆ.
ನಮ್ಮ ಯಾತ್ರಿಯು ಫಿನ್‌ಟೆಕ್ ಕಂಪನಿ ಜುಸ್ಪೇಯ ಒಡೆತನದಲ್ಲಿದೆ. ಇದು ಮೂಲತಃ ಸಾಫ್ಟ್‌ವೇರ್‌ನಲ್ಲಿ ಸೇವೆ (Saas) ಮಾದರಿಯ ಅಡಿಯಲ್ಲಿ ನಕ್ಷೆ ಮತ್ತು ಕ್ಲೌಡ್ ಸೇವೆಗಳನ್ನು ಒದಗಿಸಿದೆ.
ಇದನ್ನೂ ಓದಿ: ನಮ್ಮ ಯಾತ್ರಿ ಆ್ಯಪ್ ಮೂಲಕ ಕೋಟಿ ಕೋಟಿ ಹಣ ಗಳಿಸಿದ ಆಟೋರಿಕ್ಷಾ ಚಾಲಕರು
‘ನಮ್ಮ ಯಾತ್ರಿಯು ಒಂದು ಲಕ್ಷಕ್ಕೂ ಹೆಚ್ಚು ಚಾಲಕರೊಂದಿಗೆ ಸಹಯೋಗ ಹೊಂದಿದೆ. ಅವರಲ್ಲಿ ಹೆಚ್ಚಿನವರು ಯಾವುದೇ ಒಕ್ಕೂಟದೊಂದಿಗೆ ಸಂಬಂಧ ಹೊಂದಿಲ್ಲ. ನಾವು ವೈಯಕ್ತಿಕ ಒಕ್ಕೂಟಗಳ ಹಿತಾಸಕ್ತಿಗಳಿಗಿಂತ ಸಮುದಾಯದ ಕಲ್ಯಾಣಕ್ಕೆ ಆದ್ಯತೆ ನೀಡುತ್ತೇವೆ’ ಎಂದು ಕಂಪನಿ ಹೇಳಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ