ಆನೇಕಲ್: ರಕ್ತ ಚಂದನ (red sandal) ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದು, 35 ಲಕ್ಷ ರೂ ಮೌಲ್ಯದ 750 ಕೆಜಿ ರಕ್ತ ಚಂದನ ವಶಕ್ಕೆ ಪಡೆಯಲಾಗಿದೆ. ಸರ್ಜಾಪುರದ ಬಷೀರ್ ಅಹಮದ್, ಅಡಿಗಾರ ಕಲ್ಲಹಳ್ಳಿಯ ನಿಜಾಮ್ ಹಾಗೂ ತೋಷಿದ್ ಬಂಧಿತ ಆರೋಪಿಗಳು. ಕರ್ನಾಟಕದ ಗಡಿ ತಮಿಳುನಾಡಿನ ಬಾಗಲೂರಿನಿಂದ ಬೆಂಗಳೂರಿಗೆ ಸಾಗಾಟ ಮಾಡುತ್ತಿದ್ದ ಆಸಾಮಿಗಳು, ಖಚಿತ ಮಾಹಿತಿ ಮೇರೆಗೆ ಆನೇಕಲ್ ಉಪವಿಭಾಗ ಡಿವೈಎಸ್ಪಿ ಮಲ್ಲೇಶ್ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳ ಬಂಧನ ಮಾಡಲಾಗಿದೆ. ಟಾಟಾ ಏಸ್ ವಾಹನದಲ್ಲಿ ಆಸಾಮಿಗಳು ರಕ್ತ ಚಂದನ ಸಾಗಾಟ ಮಾಡುತ್ತಿದ್ದರು. ಹೆಬ್ಬಗೋಡಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ಇದನ್ನೂ ಓದಿ; ಮಾಜಿ ಗೃಹಸಚಿವ ಎಂ.ಬಿ.ಪಾಟೀಲ್ ಮನೆಯಲ್ಲಿ ನಡೆದಿದ್ದ ಕಳವು ಪ್ರಕರಣ: ಕೆಲಸಗಾರ ಅರೆಸ್ಟ್
ಹರಿಯುವ ನದಿಯಲ್ಲಿ ಕೊಚ್ಚಿ ಹೋದ ಆಟೊ ಚಾಲಕ
ಚಿಕ್ಕಬಳ್ಳಾಪುರ: ಹರಿಯುವ ನದಿಯಲ್ಲಿ ಆಟೋ ಸಮೇತ ಆಟೋ ಚಾಲಕ ಕೊಚ್ಚಿ ಹೋಗಿರುವಂತಹ ಘಟನೆ ಕರ್ನಾಟಕ ಗಡಿನಾಡು ಆಂದ್ರದ ಅನಂತಪುರ ಜಿಲ್ಲೆ ಹಿಂದೂಪುರ ತಾಲೂಕಿನ ಕೊಡಿಕೊಂಡ ಗ್ರಾಮದ ಬಳಿ ನಡೆದಿದೆ. ಸುಬ್ಬರಾಯಪೇಟೆ ನಿವಾಸಿ ವಿಜಯ್ ನದಿಯಲ್ಲಿ ಕೊಚ್ಚಿ ಹೋದ ಆಟೋ ಚಾಲಕ. ಚಿತ್ರವತಿ ನದಿ ತುಂಬಿಯಲ್ಲಿ ಘಟನೆ ನಡೆದಿದೆ. ಆಂಧ್ರ ಚಿಲಮತ್ತೂರು ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಬಾರ್ ಕ್ಯಾಷಿಯರ್ ಮೇಲೆ ಮಾರಣಾಂತಿಕ ಹಲ್ಲೆ
ಹಾಸನ: ಎಂಆರ್ಪಿ ದರದಲ್ಲಿ ಮದ್ಯ ಮಾರಾಟ ಮಾಡುವುದಿಲ್ಲ ಎಂದು ಹೇಳಿದ್ದಕ್ಕೆ ಮೂವರು ವ್ಯಕ್ತಿಗಳು ಬಾರ್ ಕ್ಯಾಷಿಯರ್ ಮೇಲೆ ಹಲ್ಲೆ ನಡೆಸಿದ ಘಟನೆ ನಗರದ ವಿಜಯ ನಗರ ಬಡಾವಣೆಯಲ್ಲಿ ನಡೆದಿದೆ. ಘಟನೆಯ ದೃಶ್ಯಾವಳಿಗಳು ಬಾರ್ನಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದನ್ನು ಆಧರಿಸಿ ದುಷ್ಕರ್ಮಿಗಳ ಬಂಧನಕ್ಕೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಭಾನುವಾರ ಮಧ್ಯಾಹ್ನ ವಿಜಯ ನಗರ ಬಡಾವಣೆಯಲ್ಲಿರುವ ಬಾರ್ಗೆ ಬಂದ ಮೂವರು ವ್ಯಕ್ತಿಗಳು ಎಂಆರ್ಪಿ ದರದಲ್ಲಿ ಮದ್ಯ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಬಾರ್ ಕ್ಯಾಷಿಯರ್ ಒಪ್ಪದಿದ್ದಾಗ ಆಕ್ರೋಶಗೊಂಡ ಮೂವರು ಕುರ್ಚಿ ಮತ್ತು ದೊಣ್ಣೆಗಳಿಂದ ಕ್ಯಾಷಿಯರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ವೇಳೆ ಎಷ್ಟೇ ಬೇಡಿಕೊಂಡರೂ ಬಿಡದ ಪುಂಡರು ಹಿಗ್ಗಾಮುಗ್ಗ ಥಳಿಸಿದ್ದಾರೆ.
ಇದನ್ನೂ ಓದಿ: Chikkaballapur News: ಸಿಕ್ಕಸಿಕ್ಕವರಿಗೆ ಲಾಂಗ್ ಬೀಸಿದ್ದ ರೌಡಿಶೀಟರ್ ಅರ್ಜುನ್ ಬಂಧನ
ಪುಂಡರ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಕ್ಯಾಷಿಯರ್ ಕುಸಿದುಬಿದ್ದಿದ್ದು, ಕೂಡಲೇ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಸಂಬಂಧ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿ ಕ್ಯಾಮೆರಾ ದೃಶ್ಯಾವಳಿ ಮುಂದಿಟ್ಟುಕೊಂಡು ದುಷ್ಕರ್ಮಿಗಳ ಬಂಧನಕ್ಕೆ ತನಿಖೆ ಕೈಗೊಂಡಿದ್ದಾರೆ.