ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿದ್ದ ನಾಲ್ವರು ಬಾಂಗ್ಲಾ ಪ್ರಜೆಗಳ ಬಂಧನ
ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಬಿಸ್ಮಿಲಾನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಬಾಂಗ್ಲಾದೇಶದಿಂದ ಬಂದಿದ್ದ ಮೂವರು ಪುರುಷರು ಹಾಗೂ ಓರ್ವ ಮಹಿಳೆ ಸೇರಿ ನಾಲ್ವರನ್ನು ಬಂಧಿಸಲಾಗಿದ್ದು, ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಬೆಂಗಳೂರು, ಏ.18: ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿದ್ದ ನಾಲ್ವರು ಬಾಂಗ್ಲಾ ಪ್ರಜೆಗಳನ್ನ(Bangladesh Citizen) ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಶಮೀಮ್ ಅಹ್ಮದ್, ಮೊಹಮ್ಮದ್ ಅಬ್ದುಲ್ಲಾ, ಹರೂನ್ ಮೊಹಮ್ಮದ್ ಹಾಗೂ ನೂರ್ ಜಹಾನ್ ಬಂಧಿತ ಬಾಂಗ್ಲಾ ಪ್ರಜೆಗಳು. ಇವರು ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದರು, ಜೊತೆಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಾಸ್‌ಪೋರ್ಟ್ ಸಹ ಪಡೆದಿದ್ದರು. ಖಚಿತ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿ, ಬಂಧಿಸಲಾಗಿದೆ. ಇನ್ನು ಇವರ ಬಳಿ ಇದ್ದ ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ, ರೇಷನ್ ಕಾರ್ಡ್, ಆಯುಷ್ಮಾನ್ ಕಾರ್ಡ್, ಮಜ್ದೂರ್ ಕಾರ್ಡ್, ವೋಟರ್ ಐಡಿ ಜಪ್ತಿ ಮಾಡಲಾಗಿದೆ.
ಭಾರತದ ಗುರುತಿನ ಚೀಟಿಗಳನ್ನು ಮಾಡಿಸಿದ್ದ ಆರೋಪಿಗಳು
ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದಿದ್ದ ನಾಲ್ವರು ಪ್ರಜೆಗಳು, ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಬಿಸ್ಮಿಲಾನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ನಕಲಿ ಬಾಡಿಗೆ ಕರಾರು ಪತ್ರ ಮತ್ತು ವಾಸದ ದೃಢೀಕರಣ ಪತ್ರಗಳನ್ನು ಕೂಡ ತಯಾರಿಸಿದ್ದರು. ಆ ಮೂಲಕ ಆಧಾರ್ ಕಾರ್ಡ್, ಫ್ಯಾನ್ ಕಾರ್ಡ್, ರೇಷನ್ ಕಾರ್ಡ್ ಜೊತೆಗೆ ಸ್ಥಳೀಯ ನಾಲ್ವರು ಯುವಕರ ಸಹಾಯದಿಂದ ಭಾರತದ ಗುರುತಿನ ಚೀಟಿಗಳನ್ನು ಮಾಡಿಸಿದ್ದರು. ಈ ಕುರಿತು ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ:ಮಂಗಳೂರಿಗೆ ಶ್ರೀಲಂಕಾ ಪ್ರಜೆಗಳ ಅಕ್ರಮ ಪ್ರವೇಶ; ತನಿಖೆ ಕೈಗೆತ್ತಿಕೊಂಡ ಎನ್ಐಎ
ಸಹಾಯ ಮಾಡಿದ ನಾಲ್ವರು ಯುವಕರ ಮೇಲೂ ಪ್ರಕರಣ ದಾಖಲು
ಇನ್ನು ಅಕ್ರಮವಾಗಿ ವಾಸವಾಗಿದ್ದ ಬಾಂಗ್ಲಾ ಪ್ರಜೆಗಳಿಗೆ ಸಹಾಯ ಮಾಡಿದ ನಾಲ್ವರು ಯುವಕರ ಮೇಲೂ ಪ್ರಕರಣ ದಾಖಲು ಮಾಡಲಾಗಿದೆ. ಮುಬಾರಕ್, ಮುನೀರ್, ಹುಸೇನ್, ನಹೀಂ ಮೇಲೆ ಪ್ರಕರಣ ದಾಖಲಿಸಲಾಗಿದೆ. ಸಧ್ಯ ಮೂವರು ಪುರುಷರು ಹಾಗೂ ಓರ್ವ ಮಹಿಳೆ ಸೇರಿ ನಾಲ್ವರನ್ನು ಬಂಧಿಸಲಾಗಿದ್ದು, ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ