ಮಂಗಳೂರಿಗೆ ಶ್ರೀಲಂಕಾ ಪ್ರಜೆಗಳ ಅಕ್ರಮ ಪ್ರವೇಶ; ತನಿಖೆ ಕೈಗೆತ್ತಿಕೊಂಡ ಎನ್ಐಎ
ರಾಷ್ಟ್ರೀಯ ಭದ್ರತೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳದಿಂದ ಪ್ರಕರಣದ ತನಿಖೆ ವಿಚಾರಣೆ ನಡೆಸುತ್ತಿದೆ. ಎನ್ಐಎ ಮಂಗಳೂರು ಪೊಲೀಸರಿಂದ ಎಫ್ಐಆರ್ ಪ್ರತಿ ಮತ್ತು ಸಮಗ್ರ ಮಾಹಿತಿ ಪಡೆದಿದೆ. ಜೂ.10ರಂದು ಮಂಗಳೂರು ಪೊಲೀಸರು ಮಂಗಳೂರಿನಲ್ಲಿ 38 ಮಂದಿ ಶ್ರೀಲಂಕಾ ಪ್ರಜೆಗಳನ್ನು ವಶಕ್ಕೆ ಪಡೆದಿದ್ದರು.
ಮಂಗಳೂರು: ಮಂಗಳೂರಿಗೆ ಶ್ರೀಲಂಕಾ ಪ್ರಜೆಗಳ ಅಕ್ರಮ ಪ್ರವೇಶ ವಿಚಾರಕ್ಕೆ ಸಂಬಂಧಿಸಿ ಮಂಗಳೂರಿನಲ್ಲಿ ಎನ್ಐಎ(NIA) ತನಿಖೆ ಮುಂದುವರೆದಿದೆ. ರಾಷ್ಟ್ರೀಯ ಭದ್ರತೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳದಿಂದ ಪ್ರಕರಣದ ತನಿಖೆ ವಿಚಾರಣೆ ನಡೆಸುತ್ತಿದೆ.
ಎನ್ಐಎ ಮಂಗಳೂರು ಪೊಲೀಸರಿಂದ ಎಫ್ಐಆರ್ ಪ್ರತಿ ಮತ್ತು ಸಮಗ್ರ ಮಾಹಿತಿ ಪಡೆದಿದೆ. ಜೂ.10ರಂದು ಮಂಗಳೂರು ಪೊಲೀಸರು ಮಂಗಳೂರಿನಲ್ಲಿ 38 ಮಂದಿ ಶ್ರೀಲಂಕಾ ಪ್ರಜೆಗಳನ್ನು ವಶಕ್ಕೆ ಪಡೆದಿದ್ದರು. ಇವರೆಲ್ಲರೂ ಎಲ್ಟಿಟಿಇ ಪ್ರಭಾವ ಇದ್ದ ಉತ್ತರ ಶ್ರೀಲಂಕಾ ಪ್ರದೇಶದವರು. ಕೆನಡಾದಲ್ಲಿ ಉದ್ಯೋಗದ ಆಮಿಷ ಒಡ್ಡಿ 38 ಮಂದಿಯನ್ನ ಶ್ರೀಲಂಕಾದಿಂದ ಕರೆ ತರಲಾಗಿತ್ತು. ತಮಿಳುನಾಡಿನ ತೂತುಕಡಿಗೆ ಬಂದಿದ್ದ ಇವರು ಅಲ್ಲಿನ ಚುನಾವಣೆ ಹಿನ್ನೆಲೆ ಮಂಗಳೂರಿಗೆ ಬಂದಿದ್ದರು. ಮಂಗಳೂರಿನಲ್ಲಿ ಅಕ್ರಮವಾಗಿ ವಾಸವಿದ್ದ 38 ಜನರನ್ನು ಬಂಧಿಸಲಾಗಿತ್ತು. ಸದ್ಯ ಇವರ ವಿರುದ್ದ ತಮಿಳುನಾಡಿನಲ್ಲೂ ಪ್ರಕರಣ ದಾಖಲಾಗಿದೆ. ಜೊತೆಗೆ ಎನ್ಐಎ ಕೂಡ ಈ ಬಗ್ಗೆ ತನಿಖೆ ಚುರುಕುಗೊಳಿಸಿದೆ.
ಶ್ರೀಲಂಕಾ ಪ್ರಜೆಗಳನ್ನು ಬಂಧಿಸಿದ್ದ ಪೊಲೀಸರು ಅಕ್ರಮವಾಗಿ ನುಸುಳಿದ್ದ ಶ್ರೀಲಂಕಾ ಪ್ರಜೆಗಳ ಬಂಧನ ವಿಚಾರವಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ಶ್ರೀಲಂಕಾದ ಪ್ರಜೆಗಳು ಅಕ್ರಮವಾಗಿ ದೇಶದೊಳಗೆ ನುಸುಳಿರುವುದು ಆಂತರಿಕಾ ಭದ್ರತಾ ವಿಚಾರವೂ ಆಗಿದೆ. ಅವರು ಶ್ರೀಲಂಕಾದಿಂದ ತಮಿಳುನಾಡಿನ ತೂತುಕುಡಿಗೆ ಬಂದು ಅಲ್ಲಿಂದ ಕೆನಡಾಗೆ ತೆರಳುವ ಯೋಜನೆ ಹೊಂದಿದ್ದರು. 6 ಲಕ್ಷ ಶ್ರೀಲಂಕಾ ರೂಪಾಯಿಗಳನ್ನು ಏಜೆಂಟ್ ಗೆ ಕೊಟ್ಟಿದ್ದಾಗಿ ಮಾಹಿತಿ ದೊರೆತಿದೆ. ತಮಿಳುನಾಡು ಚುನಾವಣೆ ನಡೆದ ಕಾರಣ ತಪಾಸಣೆ ಚುರುಕುಗೊಂಡಿದ್ದರಿಂದ ಅವರನ್ನು ಮಂಗಳೂರಿಗೆ ತಂದು ಬಿಡಲಾಗಿತ್ತು. ಮಂಗಳೂರಿಗೆ ಬಂದು ಇಲ್ಲಿನ ಲಾಡ್ಜ್ ಗಳಲ್ಲಿ ತಿಂಗಳಿನಿಂದ ವಾಸ್ತವ್ಯ ಹೂಡಿದ್ದರು ಎಂದು ತಿಳಿಸಿದ್ದರು.
ಹೀಗಾಗಿ ಸದ್ಯ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ 38 ಜನರನ್ನು ವಶಕ್ಕೆ ಪಡೆದಿದ್ದು, ಉಳಿದವರ ಹುಡುಕಾಟ ಮುಂದುವರೆದಿದೆ. ಮಂಗಳೂರಿನಲ್ಲಿ ಇವರಿಗೆ ಆಶ್ರಯ ಕೊಡಲು ನೆರವು ನೀಡಿದವರ ಬಗ್ಗೆಯೂ ತನಿಖೆ ಆರಂಭವಾಗಿದೆ. ಬೇರೆ ದೇಶದ ವ್ಯಕ್ತಿಗಳು ಮಂಗಳೂರಿಗೆ ಆಗಮಿಸಿ ಅಕ್ರಮ ಆಶ್ರಯ ಪಡೆದಿರುವ ಬಗ್ಗೆ ತನಿಖೆ ಮುಂದುವರೆದಿದೆ. ಇವರಿಗೆ ಆಶ್ರಯ ಕೊಟ್ಟ ಕಾರಣ ಮತ್ತು ನೆರವು ನೀಡಿದ ಕಾರಣ ಇಲ್ಲಿನ ಆರು ಜನರನ್ನು ವಶಕ್ಕೆ ಪಡೆಯಲಾಗಿದೆ.
(NIA Started Incestigation of human trafficking network Detained Sri Lankan nationals illegally migrating to Canada through India)