
ಬೆಂಗಳೂರು, ನವೆಂಬರ್ 06: ಐದು ಜಿಲ್ಲೆಗಳ ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್ ಕಳ್ಳನನ್ನು ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಅಸ್ಲಾಂ ಪಾಷಾ ಅರೆಸ್ಟ್ ಆದ ಆರೋಪಿಯಾಗಿದ್ದು, ಈತನ ಮೇಲೆ 150 ಕಳ್ಳತನ ಕೇಸ್ಗಳಿವೆ. ಹಗಲುವೇಳೆ ಐಷಾರಾಮಿ ಮನೆಗಳನ್ನ ಗುರುತಿಸುತ್ತಿದ್ದ ಆರೋಪಿ ರಾತ್ರಿವೇಳೆ ಕೈಚಳಕ ತೋರಿಸುತ್ತಿದ್ದ. ಬೆಂಗಳೂರು, ಬೆಂಗಳೂರು ಗ್ರಾಮಾಂತರ ಶಿವಮೊಗ್ಗ ಹಾವೇರಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಈತ ಮನೆಗಳ್ಳತನ ಮಾಡಿದ್ದ.
ಕಿಟಕಿ ತೆರೆದು ಮಹಿಳೆಯರು ನಿದ್ರೆಗೆ ಜಾರಿದ್ರೆ ಕುತ್ತಿಗೆಯಲ್ಲಿರೋ ಸರ ಎಗರಿಸಿ ಎಸ್ಕೇಪ್ ಆಗುತ್ತಿದ್ದ ಈತ, ಕಿಟಕಿ ಪಕ್ಕದಲ್ಲಿ ಮೇನ್ ಡೋರ್ ಇದ್ರೆ ಕಿಟಕಿ ಗ್ಲಾಸ್ ಒಡೆದು ಡೋರ್ ಓಪನ್ ಮಾಡಿ ಕದಿಯುತ್ತಿದ್ದ. ಹಾಲು ಪೇಪರ್ ಮನೆಬಳಿ ಬಿದ್ದಿದ್ದು ಮೇನ್ ಡೋರ್ ಲಾಕ್ ಆಗಿರುವ ಮನೆಗಳು, ರಾತ್ರಿ ವೇಳೆ ಲೈಟ್ ಆನ್ ಆಗಿರದ ಮನೆಗಳು ಸೇರಿ ಗೇಟ್ ಲಾಕ್ ಆಗಿದ್ದ ಮನೆಗಳನ್ನೇ ಟಾಗರ್ಗಟ್ ಮಾಡಿ ಈತ ಕೈಚಳಕ ತೋರುತ್ತಿದ್ದ. ಇನ್ನು ಒಂದು ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ರೆ ಆ ಕೇಸ್ ಹಳೇದಾಗೋವರೆಗೂ ಮತ್ತೆ ಆ ಕಡೆ ಈತ ಹೋಗುತ್ತಿರಲಿಲ್ಲ. ಕನಿಷ್ಟ ಒಂದು ವರ್ಷವಾದರೂ ಆ ಏರಿಯಾದಿಂದ ಅಂತರ ಕಾಯ್ದುಕೊಳ್ಳುತ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ: ತಿಂಗಳಿನಿಂದ ಪೊಲೀಸ್ ಠಾಣೆಯಲ್ಲೇ ನಿಂತಿದ್ದ ಕಾರಲ್ಲಿತ್ತು ಚಿನ್ನ, ಬೆಳ್ಳಿ ಮತ್ತು ಕಂತೆ ಕಂತೆ ಹಣ!
ಕದ್ದ ಮಾಲ್ನಲ್ಲಿ ದೇವರಿಗೂ ಪಾಲು ಕೊಡ್ತಿದ್ದ ಅಸ್ಲಾಂ ಪಾಷಾ, ಪ್ರತೀ ಬಾರಿ ಕಳ್ಳತನ ಮಾಡಿದಾಗಲೂ ಅಜ್ಮೀರ್ ದರ್ಗಾಗೆ ಹೋಗಿ ಹುಂಡಿಗೆ ಹಣ ಹಾಕಿ ಬರುತ್ತಿದ್ದ. ಅಸ್ಲಾಂ ತಂದೆ-ತಾಯಿಗೆ ಒಟ್ಟು ಏಳು ಜನ ಮಕ್ಕಳು. ಆ ಪೈಕಿ ಮೂವರದ್ದು ಕಳ್ಳತನವೇ ಕೆಲಸ. ಕಳೆದ 20 ವರ್ಷಗಳಿಂದ ಕಳ್ಳತನ ಮಾಡಿಕೊಂಡು ಬರುತ್ತಿರುವ ಅಸ್ಲಾಂ ಪಾಷಾ, ಅಜ್ಮೀರ್ ದರ್ಗಾಗೆ ಹೋಗಿ ಪ್ರಾರ್ಥನೆ ಸಲ್ಲಿಸಿ ಬಳಿಕ ಮೋಜು-ಮಸ್ತಿಗಾಗಿ ಗೋವಾಕ್ಕೆ ತೆರಳುತ್ತಿದ್ದ. ಬಳಿಕ ಉಳಿದ ಹಣವನ್ನ ಕುಟುಂಬಸ್ಥರಿಗೂ ನೀಡುತ್ತಿದ್ದ. ಆ ಬಳಿಕವೇ ಮತ್ತೊಂದು ಕಳ್ಳತನಕ್ಕೆ ಕೈ ಹಾಕುತ್ತಿದ್ದ ಎಂಬ ವಿಚಾರ ಪೊಲೀಸರ ತನಿಖೆವೇಳೆ ಗೊತ್ತಾಗಿದೆ. ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಚಿನ್ನಾಭರಣ ಎಗರಿಸಿರುವ ಪ್ರಕರಣ ಸಂಬಂಧ ಸದ್ಯ ಲಾಕ್ ಆಗಿರುವ ಆರೋಪಿಯಿಂದ 22 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.