Bengaluru News: ಪೊಲೀಸ್ ಠಾಣೆಯಲ್ಲಿ ವಿಚಾರಣೆ ವೇಳೆ PSI ಮೇಲೆ ಹಲ್ಲೆ ಆರೋಪ
ವಿಚಾರಣೆ ವೇಳೆ ಪಿಎಸ್ಐ ಮೇಲೆ ಹಲ್ಲೆ ಮಾಡಿರುವ ಘಟನೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಬೆಂಗಳೂರು: ವಿಚಾರಣೆ ವೇಳೆ ಪಿಎಸ್ಐ (PSI) ಮೇಲೆ ಹಲ್ಲೆ ಮಾಡಿರುವ ಘಟನೆ ಪೀಣ್ಯ ಪೊಲೀಸ್ ಠಾಣೆಯಲ್ಲಿ (Peenya Police Station) ನಡೆದಿದೆ. ಮೌನೇಶ್ ಎಂಬಾತ ಹಲ್ಲೆ ಮಾಡಿರುವ ವ್ಯಕ್ತಿ. ಪಾಸ್ ವಿಚಾರಕ್ಕೆ ಬಿಎಂಟಿಸಿ (BMTC) ಕಂಡಕ್ಟರ್ ಜತೆ ಮೌನೇಶ್ ಗಲಾಟೆ ಮಾಡಿದ್ದನು. ಹೀಗಾಗಿ ಬಿಎಂಟಿಸಿ ಸಿಬ್ಬಂದಿ ಬಸ್ ಸಮೇತ ಆತನನ್ನು ಪೊಲೀಸ್ ಠಾಣೆಗೆ ಕರೆತಂದಿದ್ದರು. ಈ ಬಗ್ಗೆ ಮೌನೇಶ್ನನ್ನು ಪಿಎಸ್ಐ ಸಿದ್ದು ಹೂಗಾರ್ ವಿಚಾರಣೆ ಮಾಡುತ್ತಿದ್ದಾಗ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ಗಾಯಗೊಂಡ ಪಿಎಸ್ಐ ಸಿದ್ದು ಹೂಗಾರ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೀಣ್ಯ ಪೊಲೀಸ್ ಠಾಣೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದಾರೆ.
ಮೌನೇಶ್ ಡೆಂಟಲ್ ಮೆಡಿಕಲ್ ಓದುತ್ತಿದ್ದು, ಕುವೆಂಪುನಗರದಲ್ಲಿರುವ ಮನೆಯಿಂದ ಗೊರಗುಂಟೆಪಾಳ್ಯದಲ್ಲಿರುವ ಕಾಲೇಜಿಗೆ ತೆರಳುತಿದ್ದನು. ಈ ಸಂಬಂಧ ಮೌನೇಶ್ ಬಿಎಂಟಿಸಿ ಬಸ್ ಹತ್ತಿದ್ದನು. ನಿರ್ವಾಹಕರಿಗೆ ಯುವಕ ಮೌನೇಶ್ ಬಸ್ ಪಾಸ್ ಜೆರಾಕ್ಸ್ ತೋರಿಸಿದ್ದನು.
ಇದನ್ನೂ ಓದಿ: ಜೆಸಿಬಿ ಹರಿದು ಜಮೀನಿನಲ್ಲಿ ಮಲಗಿದ್ದ ಮೂವರು ಸಾವು
ಆಗ ನಿರ್ವಾಹಕ ಜೆರಾಕ್ಸ್ ಅಲ್ಲ ಒರಿಜಿನಲ್ ತೋರಿಸು ಎಂದಿದ್ದಾರೆ. ಆಗ ಮೌನೇಶ್ ಮಹಿಳೆಯರು ಆಧಾರ್ ಕಾರ್ಡ್ ಜೆರಾಕ್ಸ್ ತೋರಿಸಿದರೇ ಸುಮ್ಮನಿರುತ್ತೀಯಾ, ನಾನು ಪಾಸ್ ತೋರಿಸಿದರೇ, ಯಾಕೆ ಗಲಾಟೆ ಮಾಡುತ್ತೀಯಾ ಅಂತ ನಿರ್ವಾಹಕನಿಗೆ ಹೊಡೆದಿದ್ದಾನೆ.
ನಂತರ ಬಸ್ನಲ್ಲಿದ್ದ ಎಲ್ಲರೂ ಸೇರಿ ಮೌನೇಶ್ ಅವರನ್ನು ಪೀಣ್ಯ ಪೊಲೀಸ್ ಠಾಣೆಗೆ ಕರೆತದ್ದಿದ್ದರು. ಮೌನೇಶ್ನನ್ನು ಠಾಣೆ ಒಳಗೆ ಕೂರಿಸಿದ್ದ ವೇಳೆ, ಮೌನೇಶ್ ಅಣ್ಣ ಠಾಣೆ ಬಳಿ ಬಂದು ಗಲಾಟೆ ಮಾಡಿದ್ದಾನೆ. ಈ ವೇಳೆ ಠಾಣೆಯಲ್ಲಿ ಕುಳಿತಿದ್ದ ಮೌನೇಶ್ ಬಂದು ಏಕಾ ಏಕಿ ಪಿಎಸ್ಐ ಮೇಲೆ ಹಲ್ಲೆ ಮಾಡಿದ್ದಾನೆ. ಪಿಎಸ್ಐ ದವಡೆಗೆ ಪಂಚ್ ಮಾಡಿ ಬಳಿಕ ಮರ್ಮಾಂಗಕ್ಕೆ ಒದ್ದು ಹಲ್ಲೆ ಮಾಡಿದ್ದಾನೆ. ಸದ್ಯ ಪೊಲೀಸರು ಮೌನೇಶ್ನನ್ನು ವಶಕ್ಕೆ ಪಡೆದಿದ್ದು, ಮೌನೇಶ್ ಅಣ್ಣ ಠಾಣೆಯಿಂದ ಪರಾರಿಯಾಗಿದ್ದಾನೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:53 pm, Wed, 14 June 23