ಆನೇಕಲ್, ಅಕ್ಟೋಬರ್ 18: ಅತ್ತಿಬೆಲೆ ಪಟಾಕಿ ದುರಂತ ಪ್ರಕರಣ ನಮಗೆ ಪಾಠ ಕಲಿಸಿದೆ. ಹಾಗಾಗಿ ರಾಜ್ಯಾದ್ಯಂತ ಪಟಾಕಿ ನಿಷೇಧಕ್ಕೆ ಚಿಂತನೆ ಮಾಡಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ (G Parameshwara) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾಧಕ ಬಾಧಕ ಗಮನಿಸಿ ಕನಿಷ್ಠ ಬೆಂಗಳೂರಿನಲ್ಲಿ ಪಟಾಕಿ ಬ್ಯಾನ್ ಮಾಡಲು ಚಿಂತನೆ ಮಾಡಲಾಗುವುದು. ಬೆಂಗಳೂರಿನಲ್ಲಿ ಹೆಚ್ಚು ಜನ ವಾಸ ಹಿನ್ನೆಲೆ, ಜೊತೆಗೆ ಇತ್ತೀಚೆಗೆ ಪಟಾಕಿ ಅವಘಡಗಳಲ್ಲಿ ಅಮಾಯಕರು ಮೃತಪಟ್ಟಿದ್ದಾರೆ. ದೆಹಲಿ ಮಾದರಿಯಲ್ಲಿ ರಾಜ್ಯದಲ್ಲಿ ಪಟಾಕಿ ಬ್ಯಾನ್ಗೆ ಚಿಂತನೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಅತ್ತಿಬೆಲೆ ಪಟಾಕಿ ದುರಂತದಲ್ಲಿ 17 ಮಂದಿ ಸಾವು ವಿಷಾದನೀಯ. ಪಟಾಕಿ ಮಳಿಗೆ ಮಾಲೀಕ 2017 ರಿಂದ 2022 ವರೆಗೆ ನೂತನ ಪರವಾನಗಿ ನವೀಕರಣ ನಡುವೆ ಫೇಕ್ ಲೈಸೆನ್ಸ್ ಸೃಷ್ಟಿ ಮಾಡಲಾಗಿದೆ. ಕೇವಲ 1 ಸಾವಿರ ಕೆಜಿ ಪಟಾಕಿ ಮಾರಾಟಕ್ಕೆ ಪರವಾನಗಿ ನೀಡಲಾಗಿದೆ. ಆದರೆ 50 ಟನ್ಗೂ ಅಧಿಕ ಪಟಾಕಿ ಅಕ್ರಮವಾಗಿ ದಸ್ತಾನು ಮಾಡಲಾಗಿತ್ತು.
ಇದನ್ನೂ ಓದಿ: ಪಬ್ ಬೆಂಕಿ ದುರಂತ, ಬೆಂಗಳೂರು; ಸುತ್ತಮುತ್ತ ಶಾಲಾ ಕಾಲೇಜುಗಳಿದ್ದರೂ ಪಬ್ ನಡೆಸಲು ಅನುಮತಿ ನೀಡಲಾಗಿದೆ: ಪ್ರತ್ಯಕ್ಷದರ್ಶಿ
ಅಕ್ರಮ ದಸ್ತಾನು ಪರಿಶೀಲನೆ ವೇಳೆ ತಹಶಿಲ್ದಾರ್ ಸೇರಿದಂತೆ ಕಂದಾಯ ಅಧಿಕಾರಿಗಳು, ಪೊಲೀಸ್, ಪೈರ್ ಮತ್ತು ಟ್ರಾನ್ಸ್‌ಪೋರ್ಟ್ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು, ಗಡಿಯಲ್ಲಿ ಆರ್ಟಿಓ ಅಧಿಕಾರಿಗಳು ಪರಿಶೀಲಿಸಿ ಕ್ರಮ ವಹಿಸಿಲ್ಲ. ಹಾಗಾಗಿ ತಹಶಿಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಅತ್ತಿಬೆಲೆ ಪಟಾಕಿ ಗೋಡೌನ್ನಲ್ಲಿ ಅಗ್ನಿ ದುರಂತ ನಡೆದ ಸ್ಥಳಕ್ಕೆ ಗೃಹ ಇಲಾಖೆ ಸಚಿವ ಪರಮೇಶ್ವರ್ ಇಂದು ಭೇಟಿ ಮಾಡಿದ್ದು, ಘಟನೆ ಅಗ್ನಿಶಾಮಕ ಡಿಐಜಿ ಪಂತ್, ಐಜಿಪಿ ರವಿಕಾಂತೇಗೌಡರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಮಳಿಗೆ ಮಾಲೀಕನ ಬಗ್ಗೆ ಡಿಸಿಯಿಂದ ಮಾಹಿತಿ ಪಡೆದಿದ್ದು, ನಕಲಿ ಲೈಸೆನ್ಸ್ ಸೃಷ್ಟಿಸಿದ್ದರು ಎಂದು ಡಿಸಿ ದಯಾನಂದ್ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಫೋರಂ ಮಾಲ್ ಬಳಿ ಅಗ್ನಿ ಅವಘಡ, ಪ್ರಾಣ ಉಳಿಸಿಕೊಳ್ಳಲು 4ನೇ ಮಹಡಿಯಿಂದ ಜಿಗಿದ ವ್ಯಕ್ತಿ
ದುರಂತದಲ್ಲಿ ಹದಿನಾಲ್ಕು ಮಂದಿ ಸಜೀವ ದಹನಗೊಂಡಿದ್ದರು. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ನಾಲ್ವರ ಪೈಕಿ ಚಿಕಿತ್ಸೆ ಫಲಕಾರಿಯಾಗದೆ ಮೂವರು ಸಾವನ್ನಪ್ಪಿದರು. ಸೆಂಟ್ ಜಾನ್ಸ್ ಆಸ್ಪತ್ರೆಗೆ ಮೂವರು ಗಾಯಾಳುಗಳನ್ನ ರವಾನಿಸಲಾಗಿತ್ತು. ವಿಕ್ಟೋರಿಯಾ ಆಸ್ಪತ್ರೆಗೆ ಓರ್ವ ಗಾಯಾಳುವನ್ನ ರವಾನೆ ಮಾಡಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:08 pm, Wed, 18 October 23