ಬೆಂಗಳೂರು: ನಗರದಲ್ಲಿ ಸಾರಿಗೆ ಅಂದ್ರೆ ಟಕ್ ಅಂತಾ ನೆನಪಾಗುವುದು ಬಿಎಂಟಿಸಿ ಬಸ್. ಅದನ್ನ ಬಿಟ್ಟರೆ ಸಿಲಿಕಾನ್ ಸಿಟಿಯ ನರನಾಡಿಯಂತೆ ಕೆಲಸ ಮಾಡ್ತಿರೋದು ಆಟೋ ಚಾಲಕರು. ಆದ್ರೆ ಆಟೋ ನಂಬಿ ಜೀವನ ನಡೆಸ್ತಿದ್ದ ಸಾರಥಿಗಳಿಗೆ ಇದೀಗ ಹೊಡೆತ ಬಿದ್ದಿದೆ. ಓಲಾ, ಊಬರ್, ರ‍್ಯಾಪಿಡೋದಿಂದ ಬಸವಳಿದಿದ್ದ ಸಾರಥಿಗಳು ಇಂದು ಬೀದಿಗಿಳಿದು ಪ್ರತಿಭಟಿಸಿ ರಾಜ್ಯ ಸಾರಿಗೆ ಇಲಾಖೆಗೆ ಬಿಸಿ ಮುಟ್ಟಿಸಿದ್ದಾರೆ. ರಾಜ್ಯ ಸಾರಿಗೆ ಇಲಾಖೆಗೆ ಧಿಕ್ಕಾರ ಕೂಗುವ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಆಟೋ ಚಾಲಕರು (Auto drivers protest) ಮುಂದಾದರು. ಬೌನ್ಸ್ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ(electric bike taxis) ಗೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿರುವುದು ಇವರ ಈ ಆಕ್ರೋಶಕ್ಕೆ ಕಾರಣವಾಗಿ ಬಿಟ್ಟಿದೆ. ಮೊದಲೇ ಓಲಾ, ರ್ಯಾಪಿಡೋ ಬೈಕ್ಗಳಿಂದ ತತ್ತರಿಸಿದ್ದ ಆಟೋ ಚಾಲಕರಿಗೆ, ಇದೀಗ ಬೌನ್ಸ್ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರದ ಈ ನಿರ್ಧಾರ ಖಂಡಿಸಿ ಇಂದು(ಡಿ. 29) ಬೀದಿಗಿಳಿದ ಸಾರಥಿಗಳು ಸರ್ಕಾರಕ್ಕೆ ದೊಡ್ಡ ಮಟ್ಟದಲ್ಲೇ ಬಿಸಿಮುಟ್ಟಿಸಿದ್ದಾರೆ.
ಬೌನ್ಸ್ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗೆ ನೀಡಿರುವ ಅನುಮತಿ ರದ್ದು ಮಾಡುವಂತೆ ಇಂದು ಸುಮಾರು 21 ವಿವಿಧ ಯೂನಿಯನ್ಗಳ ಆಟೋ ಚಾಲಕರು ಪ್ರತಿಭಟಿಸಿದರು. ಸುಡುವ ಬಿಸಿಲಲ್ಲಿ ಬ್ಯಾನರ್ ಹಿಡಿದು ಕುಳಿತ ಚಾಲಕರು, ಸರ್ಕಾರ ಬೈಕ್ ಟ್ಯಾಕ್ಸಿ ರದ್ದುಮಾಡುವಂತೆ ಒತ್ತಾಯಿಸಿದರು. ವಿಧಾನಸೌಧ ಚಲೋ ಮಾಡಬೇಕು ಅಂದುಕೊಂಡಿದ್ದ ಚಾಲಕರಿಗೆ ಅಲ್ಲಲ್ಲಿ ಪೊಲೀಸರು ಅಡ್ಡಿಪಡ್ಡಿಸಿದ್ದು, ಉರಿವ ಬೆಂಕಿಗೆ ತುಪ್ಪ ಸುರಿದಂತಾಗಿತ್ತು. ಇನ್ನು ಸರ್ಕಾರ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗೆ ಅನುಮತಿ ಕೊಟ್ಟಿರೋದರಿಂದ ನಮಗೆ ಹೊಡೆತ ಬೀಳುತ್ತಿದೆ. ನಮ್ಮ ಆಟೋ ಚಾಲಕರಿಗೆ ಧಕ್ಕೆಯಾಗಿರೋದರಿಂದ ಈ ಹೋರಾಟ ನಡೆಸ್ತಿದ್ದೇವೆ ಅಂತಾ ಕಿಡಿಕಾರಿದ್ರು. ಸರ್ಕಾರ ಕೂಡಲೇ ಬೈಕ್ ಟ್ಯಾಕ್ಸಿಯನ್ನ ರದ್ದುಮಾಡಬೇಕು ಅಂತಾ ಒತ್ತಾಯಿಸಿದ್ರು.
ಇದನ್ನೂ ಓದಿ: Namma Metro: ಹೊಸ ವರ್ಷಾಚರಣೆ: ನಮ್ಮ ಮೆಟ್ರೋ ಅವಧಿ ವಿಸ್ತರಿಸಿದ BMRCL
ಇತ್ತ ಬೆಳಗ್ಗೆಯಿಂದ ಬಿಸಿಲಲ್ಲೇ ಕುಳಿತು ಪ್ರತಿಭಟಿಸಿದ್ದ ಆಟೋ ಚಾಲಕರು ಮಧ್ಯಾಹ್ನದ ವೇಳೆಗೆ ಫುಲ್ ಗರಂ ಆಗಿದ್ರು. ಬೆಳಗ್ಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಅವಕಾಶ ನೀಡಿದಿದ್ದಕ್ಕೆ ರೊಚ್ಚಿಗೆದ್ದ ಚಾಲಕರು, ಪೊಲೀಸರ ಜೊತೆ ವಾಗ್ವಾದ ನಡೆಸಿದ ಘಟನೆ ಕೂಡ ನಡೆಯಿತು. ಇವೆಲ್ಲದರ ಮಧ್ಯೆ ಸ್ಥಳಕ್ಕೆ ಭೇಟಿ ನೀಡಿದ ಆರ್ಟಿಓ ಅಡಿಷನಲ್ ಕಮಿಷನರ್ ಹೇಮಂತ್ಕುಮಾರ್, ರ್ಯಾಪಿಡೋ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ, ಸದ್ಯ ಇ-ಬೈಕ್ ಟ್ಯಾಕ್ಸಿಯ ಆಗು ಹೋಗುಗಳ ಬಗ್ಗೆ ಚರ್ಚಿಸಿದ್ದೇವೆ ಎಂದರು.
ವಿಧಾನಸೌಧಕ್ಕೆ ಜಾಥಾ ಮಾಡೋ ಪ್ಲಾನ್ ವಿಫಲವಾಗಿದ್ದರಿಂದ ರೊಚ್ಚಿಗೆದ್ದ ಆಟೋ ಚಾಲಕರು, ಆರ್ಟಿಓ ಅಧಿಕಾರಿಗಳ ಕಾರಿನ ಮುಂದೆ ಬಿದ್ದು, ಆಕ್ರೋಶ ಹೊರಹಾಕಿದ್ರು. ವಿಧಾನಸೌಧಕ್ಕೆ ಮುತ್ತಿಗೆ ಹಾಕೇ ತೀರುತ್ತೇವೆ ಅನ್ನುತ್ತಿದ್ದ ಚಾಲಕರಿಗೆ ಪೊಲೀಸರು ಬ್ಯಾರಿಕೇಡ್ ಹಾಕಿ ಅಡ್ಡಿಪಡಿಸಿದ್ರು. ಅಷ್ಟಕ್ಕೆ ಸುಮ್ಮನಾಗದ ಸಾರಥಿಗಳು ಬ್ಯಾರಿಕೇಡ್ ಮುರಿದು ಮುನ್ನುಗ್ಗಲು ಯತ್ನಿಸಿದಾಗ ಪೊಲೀಸರು ಪ್ರತಿಭಟನಾಕಾರರನ್ನ ವಶಕ್ಕೆ ಪಡೆದ್ರು.
ಅದೇನೆ ಇರಲಿ, ಹೀಗಾಗಲೇ ರ್ಯಾಪಿಡೋ ಬೈಕ್ನಿಂದ ಕಂಗಲಾಗಿರುವ ಆಟೋ ಚಾಲಕರಿಗೆ, ಇದೀಗ ಬೌನ್ಸ್ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗೆ ಅನುಮತಿ ಸಿಕ್ಕಿರೋದು ಮತ್ತಷ್ಟು ಚಿಂತೆ ಉಂಟುಮಾಡಿದೆ. ಸರ್ಕಾರ ಒಂದು ವೇಳೆ ಬೇಡಿಕೆಗಳನ್ನ ಈಡೇರಿಸದಿದ್ರೆ ಮುಂದೆ ದೊಡ್ಡ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ. ಸದ್ಯ ಸರ್ಕಾರ ಸಾರಥಿಗಳ ಸಮಸ್ಯೆಗೆ ಮುಲಾಮು ಹಚ್ಚುತ್ತಾ, ಇಲ್ಲ ಮತ್ತೆ ಪ್ರತಿಭಟನೆಯ ಜ್ವಾಲೆ ಹೊತ್ತಿಕೊಳ್ಳುತ್ತಾ ಅನ್ನೋದನ್ನ ಕಾದುನೋಡಬೇಕಿದೆ.
ವರದಿ: ಕಿರಣ್ ಸೂರ್ಯ ಟಿವಿ9 ಬೆಂಗಳೂರು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.